ರಾತ್ರಿ ಬೆಳಗಾಗುವುದರೊಳಗೆ ಕೆಲಸದವನ ಮನೆ ಸುತ್ತ ಹತ್ತು ಅಡಿ ಬೃಹತ್ ಕಂದಕ ತೋಡಿದ ಮಾಲೀಕ | ಮಾಲೀಕನ ಶೋಷಣೆಯಿಂದ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಕಾರ್ಮಿಕ !!

ಈತನ ಕಥೆ ಕೇಳಿದರೆ ಯಾರಿಗಾದರೂ ಅಯ್ಯೋ ಪಾಪ ಎಂದೆನಿಸುವುದು ಸಹಜ. ದುಷ್ಟ ಎಸ್ಟೇಟ್ ಮಾಲೀಕನಿಂದ ಪ್ರತಿದಿನ ಶೋಷಣೆಗೊಳಗಾಗಿ ಬೇಸತ್ತಿದ್ದ ಕಾರ್ಮಿಕನೊಬ್ಬ ಏನು ಮಾಡಿದ್ದಾನೆ ಗೊತ್ತಾ?? ದಯಾ ಮರಣ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

ಅಂದಹಾಗೆ ಈ ದುರಂತ ಘಟನೆ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ನಡೆದಿದೆ. ವೃತ್ತಿಯಲ್ಲಿ ಚಾಲಕರಾಗಿರುವ ಸುಬ್ರಮಣಿ ಅವರು ಸುಮಾರು 25 ವರ್ಷಗಳಿಂದ ಎ ಮುತ್ತಯ್ಯ ಮಾಲೀಕತ್ವದ ಮಸ್ಕಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರು ಕುಟುಂಬ ಸಮೇತ ಎಸ್ಟೇಟ್ ಲೈನ್ ಮನೆಯಲ್ಲಿ ವಾಸವಿದ್ದು, ಅವರ ಪುತ್ರಿ ಪವಿತ್ರಾ ಕೂಡ ಅದೇ ಎಸ್ಟೇಟ್ ನಲ್ಲಿ ಕೆಲಸಕ್ಕೆ ಸೇರಿದ್ದರು. ಆದರೆ, ತಂದೆ-ಮಗಳಿಬ್ಬರನ್ನು ನೋಟಿಸ್ ನೀಡದೆ ಕೆಲಸದಿಂದ ವಜಾ ಮಾಡಲಾಗಿದ್ದು, ಮಾಲೀಕರು ತಮಗೆ ಬರಬೇಕಾದ ಪೂರ್ಣ ಸಂಬಳ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಸುಬ್ರಮಣಿ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಆರು ವರ್ಷಗಳಿಂದ ಮಡಿಕೇರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣ ಬಾಕಿ ಇರುವ ಕಾರಣ ಸುಬ್ರಮಣಿ ಮತ್ತು ಅವರ ಕುಟುಂಬ ಎಸ್ಟೇಟ್‌ನಲ್ಲಿರುವ ಲೈನ್‌ ಹೌಸ್‌ನಲ್ಲಿ ವಾಸಿಸಲು ಅವಕಾಶ ನೀಡುವಂತೆ ಆದೇಶಿಸಲಾಗಿದೆ. ಆದರೆ, ಜನವರಿ 7 ರಂದು ಮಾಲೀಕ ಮುತ್ತಯ್ಯ ಅವರು ಸುಬ್ರಮಣಿ ಅವರಿಗೆ ಆಶ್ರಯ ನೀಡಿದ್ದ ಲೈನ್ ಹೌಸ್‌ಗೆ ಅಡ್ಡಲಾಗಿ ರಾತ್ರೋರಾತ್ರಿ 10 ಅಡಿ ಬೃಹತ್ ಕಂದಕವನ್ನು ಅಗೆದು ನೀರು ಸರಬರಾಜು ಮತ್ತು ವಿದ್ಯುತ್ ತಂತಿಗಳನ್ನು ಕಡಿತಗೊಳಿಸಿದರು.

ಎಸ್ಟೇಟ್ ಮಾಲೀಕನ ಶೋಷಣೆಯ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಮನೆ ಸುತ್ತ ಕಂದಕ ತೋಡಿರುವುದರಿಂದ ಕಳೆದ ಎರಡು ತಿಂಗಳಿನಿಂದ ಸುಬ್ರಮಣಿ ಅವರ ಮನೆಯವರು ಮನೆಯಿಂದ ಹೊರಬರಲು ಏಣಿ ಬಳಸುತ್ತಿದ್ದಾರೆ. ಪತ್ನಿ ಅನಾರೋಗ್ಯ ಪೀಡಿತರಾಗಿದ್ದು, ಮನೆಯಿಂದ ಹೊರಹೋಗಲು ಹರಸಾಹಸಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಎಲ್ಲಾ ಘಟನೆಗಳಿಂದ ಬೇಸತ್ತ ಸುಬ್ರಮಣಿ ಅವರು ದಯಾ ಮರಣ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಅಡುಗೆ ಅನಿಲ ಸಿಲಿಂಡರ್‌ಗಳು ಮತ್ತು ಇತರ ಭಾರವಾದ ವಸ್ತುಗಳನ್ನು ಮನೆಗೆ ವರ್ಗಾಯಿಸುವುದು ಕಷ್ಟಕರವಾಗಿದೆ ಎಂದು ಸುಬ್ರಮಣಿ ಪತ್ರದಲ್ಲಿ ತಿಳಿಸಿದ್ದಾರೆ. ”ಕೋರ್ಟಿನಲ್ಲಿ ಪ್ರಕರಣ ನಡೆಯುತ್ತಿರುವಾಗಲೇ ಲೈನ್ ಹೌಸ್ ಸುತ್ತ ಕಂದಕ ತೋಡಲಾಗಿದೆ. ನಾನು ನನ್ನ ಮಗಳು ಮತ್ತು ಅನಾರೋಗ್ಯ ಪೀಡಿತ ಹೆಂಡತಿಯನ್ನು ದುಃಖಕ್ಕೆ ತಳ್ಳಲು ಸಾಧ್ಯವಿಲ್ಲ. ನನಗೆ ದಯಾ ಮರಣಕ್ಕೆ ಅವಕಾಶ ನೀಡಿ” ಎಂದು ಸುಬ್ರಮಣಿ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

Leave A Reply

Your email address will not be published.