ಭಾರತದ ಮೇಲೆ ದಾಳಿಗೆ ಪಾಕ್ ಸಿದ್ದತೆ -ಬ್ಲೂಮ್‌ಬರ್ಗ್ ವರದಿ

ನವದೆಹಲಿ : ಕೆಲದಿನಗಳ ಹಿಂದೆ ಪಾಕ್ ನೆಲಕ್ಕೆ ಭಾರತದಿಂದ ಆಕಸ್ಮಿಕವಾಗಿ ಹಾರಿಹೋಗಿದ್ದ ಬ್ರಹ್ಮೋಸ್‌ ಕ್ಷಿಪಣಿ ಪ್ರಕರಣವನ್ನು ಆರಂಭದಲ್ಲಿ ತಪ್ಪಾಗಿ ಅರ್ಥೈಸಿದ್ದ ಪಾಕಿಸ್ತಾನ ಸರ್ಕಾರ, ಭಾರತದ ಮೇಲೆ ತಾನೂ ಒಂದು ಕ್ಷಿಪಣಿ ಹಾರಿಸಲು ಸಿದ್ಧತೆ ನಡೆಸಿತ್ತು ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ಭಾರತದ ಮೇಲೆ ಕ್ಷಿಪಣಿ ಹಾರಿಸುವ ಮುನ್ನ ನಡೆಸಲಾದ ತನಿಖೆಯಲ್ಲಿ ಇದು ಆಕಸ್ಮಿಕವಾಗಿ ಸಿಡಿದ ಕ್ಷಿಪಣಿ ಎಂದು ತಿಳಿದುಬಂದಿದ್ದರಿಂದ ತನ್ನ ದಾಳಿಯ ನಿರ್ಧಾರದಿಂದ ಪಾಕಿಸ್ತಾನ ಹಿಂದೆ ಸರಿಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದ ಪಂಜಾಬ್‌ನಲ್ಲಿರುವ ಸಿರ್ಸಾದಲ್ಲಿರುವ ಭೂಸೇನಾ ನೆಲೆಯಿಂದ ತಾಂತ್ರಿಕ ದೋಷದಿಂದಾಗಿ ಆಕಸ್ಮಿಕವಾಗಿ ಉಡಾವಣೆಗೊಂಡಿದ್ದ ಬ್ರಹ್ಮೋಸ್‌, ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿರುವ ಮಿಯಾನ್‌ ಚನ್ನು ಎಂಬ ಪಟ್ಟಣದ ಬಳಿ ಹೋಗಿ ಬಿದ್ದಿತ್ತು. ಯಾವುದೇ ಜೀವ ಹಾನಿಯಾಗಿರಲಿಲ್ಲ.

ಘಟನೆಯ ಬೆನ್ನಲ್ಲೇ ಪ್ರಕಟಣೆ ನೀಡಿದ್ದ ಭಾರತ ಸರ್ಕಾರ, ಇದು ತಾಂತ್ರಿಕ ದೋಷದಿಂದ ಆಗಿರುವ ಘಟನೆಯಷ್ಟೇ. ಇದನ್ನು ತಪ್ಪಾಗಿ ತಿಳಿಯಬೇಕಿಲ್ಲ ಎಂದು ಸ್ಪಷ್ಟನೆ ನೀಡಿತ್ತು.

Leave A Reply

Your email address will not be published.