ಹೋಳಿ ಸುಗ್ಗಿ ಕುಣಿತ ಎಂದರೇನು ಗೊತ್ತೆ ? ತಿಳಿಯಿರಿ ವಿಶೇಷ ಆಚರಣೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡು ಬರುವ ವಿಶೇಷ ಆಚರಣೆಗಳಲ್ಲಿ ಹೋಳಿ ಸುಗ್ಗಿ ಕುಣಿತ ಸಹ ಒಂದು. ಬಣ್ಣಗಳ ಹಬ್ಬಕ್ಕೆ ಒಂದು ವಾರದ ದಿನಗಣನೆ ಶುರುವಾಗುತ್ತಿದ್ದಂತೆ ಕಾರವಾರ, ಅಂಕೋಲಾ ತಾಲ್ಲೂಕಿನ ವಿವಿಧೆಡೆ ಸುಗ್ಗಿ ಕುಣಿತ ಪ್ರಾರಂಭವಾಗುತ್ತದೆ.

ಬಣ್ಣ ಬಣ್ಣದ ವೇಷ ತೊಟ್ಟು ತಮಟೆ, ನಗಾರಿ, ಗುಮಟೆಗಳ ವಾಧ್ಯದ ಜೊತೆ ಕೋಲಾಟ ವಾಡುತ್ತಾ ಮನೆ ಮನೆಗೆ ತೆರಳಿ ರಂಜಿಸುವ ವಿಶೇಷ ಜನಪದ ಆಚರಣೆ ಇಲ್ಲಿದೆ. ಸುಗ್ಗಿಯ ವೇಷ ಭೂಷಣಗಳನ್ನು ಧರಿಸಿದ ಕೋಲು ಮೇಳದ ಕಲಾವಿದರ ಕೈಯಲ್ಲಿ ಕೋಲುಗಳನ್ನು ಹಿಡಿದು ಹಿಮ್ಮೇಳದ ವಾದ್ಯದ ಗತ್ತಿಗನುಗುಣವಾಗಿ ಪದಗಳನ್ನು ಪದಗಾರರು ಹಾಡುತ್ತಾರೆ. ಹಾಡಿದ ಪದಗಳನ್ನು ಪುನಾರಾವರ್ತನೆಗೊಳಿಸುತ್ತಾ ಕಲಾವಿದರು ಕುಣಿಯುತ್ತಾರೆ. ಹಿಮ್ಮೇಳದ ಲಯಕ್ಕನುಗುಣವಾಗಿ ಕುಣಿಯುವರ ಕುಣಿತ ಹಾಗೂ ಅಂಗಾಂಗ ವಿನ್ಯಾಸ ಭಂಗಿಯೂ ಬದಲಾಗುತ್ತದೆ. ಕುಂಚದ ಮೇಳದವರು ನವಿಲುಗರಿಯಿಂದ ತಯಾರಿಸಿದ್ದ ಕುಂಚವನ್ನು ಎಡಗೈಯಲ್ಲಿ ಹಿಡಿದು ಬಲಗೈಲಿ ಹಿಡಿದಿರುವ ಕೋಲಿನಿಂದ ಕುಂಚದ ಬುಡಕ್ಕೆ ಮೆಲ್ಲನೆ ಲಯಬದ್ದವಾಗಿ ಕುಟ್ಟುತ್ತಾರೆ.


Ad Widget

Ad Widget

Ad Widget

ಹಾಲಕ್ಕಿ, ಕರೆ ಒಕ್ಕಲಿಗ, ನಾಮಧಾರಿ, ಹಾಲಕ್ಕಿ, ಅಂಬಿಗ ಮುಂತಾದ ಹಲವು ಸಮುದಾಯವರಲ್ಲಿ ಸುಗ್ಗಿ ಕುಣಿತಕ್ಕೆ ವಿಶೇಷ ಮಹತ್ವವಿದೆ. ಅದನ್ನು ಕಣ್ತುಂಬಿಕೊಳ್ಳಲೆಂದೇ ದೂರದೂರುಗಳಿಂದ ಗ್ರಾಮಸ್ಥರ ನೆಂಟರು, ಗೆಳೆಯರು ಬರುತ್ತಾರೆ.

ತೋಡೂರಿನಲ್ಲಿ ಕರಿದೇವರು ಹಾಗೂ ಕರಿನಾಥನಿಗೆ ನವಮಿಯ ದಿನ ಪೂಜೆ ಮಾಡಿದ ಬಳಿಕ ಸುಗ್ಗಿ ಕುಣಿತ ಶುರುವಾಗುತ್ತದೆ. ಸುಗ್ಗಿ ಕುಣಿತದಲ್ಲಿ ಪಾಲ್ಗೊಳ್ಳುವವರು ಮೊದಲ ದಿನ ಮನೆಯಿಂದ ಹೊರಟರೆ ಅವರು ಪುನಃ ಮಧ್ಯದಲ್ಲಿ ಮನೆಗೆ ಹೋಗುವುದಿಲ್ಲ. ಊರೂರು ಸಂಚರಿಸುವಾಗ ಗ್ರಾಮಸ್ಥರು ನೀಡುವ ಊಟ, ತಿಂಡಿ, ನೀರನ್ನೇ ಸೇವಿಸುತ್ತಾರೆ. ಯಾರಾದರೂ ಧನಸಹಾಯ ಮಾಡಿದರೆ ಸ್ವೀಕರಿಸುತ್ತಾರೆ.

ಹೋಳಿ ಹಬ್ಬದಂದು ಓಕುಳಿಯಾಡಿದ ಬಳಿಕ ವೇಷ, ಭೂಷಣಗಳನ್ನು ಕಳಚಿ ದೇವರಿಗೆ ನಮಸ್ಕರಿಸಿದ ನಂತರವೇ ಅವರು ತೆರಳುತ್ತಾರೆ. ಸುಗ್ಗಿ ಮೇಳದಲ್ಲಿ ಬಳಸಿದ ತುರಾಯಿ, ಉಡುಗೆಯನ್ನು ಹೋಳಿ ಹುಣ್ಣಿಮೆಯ ಬಳಿಕ ಸಮುದ್ರದಲ್ಲಿ ವಿಸರ್ಜನೆ ಮಾಡುತ್ತಾರೆ.

Leave a Reply

error: Content is protected !!
Scroll to Top
%d bloggers like this: