ವಿಚ್ಛೇದನ ಕೋರಿದ್ದ ತಂದೆ-ತಾಯಿಯನ್ನು ಮತ್ತೆ ಒಂದು ಮಾಡಿದ ಮಗ !! | ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು ನ್ಯಾಯ ದೇಗುಲ

ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಇತರೆ ಇತ್ತೀಚಿನ ದಿನಗಳಲ್ಲಿ ಆ ಜಗಳ ಕೋರ್ಟ್ ಮೆಟ್ಟಿಲು ಏರುತ್ತಿದೆ. ಹಾಗೆಯೇ ಇಲ್ಲಿ ಮೂರು ವರ್ಷಗಳ ಹಿಂದೆ ಮನಸ್ತಾಪಗೊಂಡು ದೂರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ತಂದೆ-ತಾಯಿಯನ್ನು ಮಗನೇ ಒಂದು ಮಾಡಿದ ಘಟನೆ ನಡೆದಿದ್ದು, ಈ ಅದ್ಭುತ ಕ್ಷಣಕ್ಕೆ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ಸಾಕ್ಷಿಯಾದರು.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕಡೆಗದ್ದೆಯ ಗಣೇಶಮೂರ್ತಿ ಮತ್ತು ಪೂರ್ಣಿಮಾ 17 ವರ್ಷಗಳ ಹಿಂದೆ ಮದುವೆಯಾಗಿ 14 ವರ್ಷ ಸುಖ ಸಂಸಾರ ನಡೆಸಿದ್ದರು. ದಂಪತಿಗೆ ಒಬ್ಬ ಮಗನೂ ಇದ್ದಾನೆ. ಮೂರು ವರ್ಷದ ಹಿಂದೆ ಪೂರ್ಣಿಮಾ ಶಿವಮೊಗ್ಗದ ತನ್ನ ತವರು ಮನೆಗೆ ಹೋದ ಸಂದರ್ಭದಲ್ಲಿ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ನಂತರ ಇದೇ ಬಿರುಕು ದೊಡ್ಡದಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಕೋರ್ಟ್ ಮೆಟ್ಟಲೇರಿದ್ದರು.

ಇವರ ಮಗ ಸುಹಾಸ್ ಕಶ್ಯಪ್ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಇಷ್ಟು ದಿನ ತಂದೆಯ ಜೊತೆಗಿದ್ದ. ಆದರೆ ತಾಯಿ ಇದ್ದರೂ ಅನಾಥವಾಗಿದ್ದೇನೆ ಎಂದು ವಕೀಲ ವಾಲೆಮನೆ ಶಿವಕುಮಾರ್ ಬಳಿ ನೋವು ತೋಡಿಕೊಂಡಿದ್ದ. ಈ ಬಗ್ಗೆ ತಂದೆ-ತಾಯಿಯೊಂದಿಗೆ ಮಾತನಾಡಿದ ವಕೀಲರು ಒಂದುಮಾಡುವ ಪ್ರಯತ್ನಕ್ಕೆ ಕೈಹಾಕಿದ್ದರು. ಅದರಂತೆ ಹೊಸನಗರ ಪಟ್ಟಣದ ಕೋರ್ಟ್‌ನಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ತಂದೆ-ತಾಯಿ ಇಬ್ಬರನ್ನೂ ವಕೀಲರು ಕರೆಸಿದ್ದರು. ಮಗನ ಮನವಿಗೆ ಕರಗಿದ ದಂಪತಿಗಳಿಬ್ಬರೂ ಮನಸ್ಸು ಬದಲಾಯಿಸಿಕೊಂಡು ಒಂದಾಗಲು ನಿರ್ಧರಿಸಿದರು.

ಹೊಸನಗರ ಪಟ್ಟಣದ ಜೆಎಂಎಫ್‌ಸಿ ಹಿರಿಯ ನ್ಯಾಯಾಧೀಶೆ ಪುಷ್ಪಲತಾ ಮತ್ತು ಪ್ರಧಾನ ವ್ಯವಹಾರ ನ್ಯಾಯಾಧೀಶ ರವಿಕುಮಾರ್ ಸಮ್ಮುಖದಲ್ಲಿ ದಂಪತಿಗಳಿಬ್ಬರು ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮೂಲಕ ಮತ್ತೆ ಒಂದಾಗಿದ್ದಾರೆ.

ನಾವು ಮೂರು ವರ್ಷಗಳಿಂದ ಒಂದು ಸಣ್ಣ ಮನಸ್ತಾಪದಿಂದ ದೂರ ಉಳಿಯುವಂತಾಗಿತ್ತು. ಆದರೆ ಮಗ ಸುಹಾಸ್ ಕಶ್ಯಪ್ ಇಬ್ಬರ ಬಳಿಯೂ ಮಾತನಾಡಿ ಒಂದುಗೂಡಿಸುವ ಪ್ರಯತ್ನ ಮಾಡಿದ್ದಾನೆ. ಈಗ ಸಂತಸದಿಂದ ಒಂದಾಗುತ್ತಿದ್ದೇವೆ ಎಂದು ದಂಪತಿ ಹೇಳಿದ್ದಾರೆ.

Leave A Reply

Your email address will not be published.