ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್ ಗೆ ಆಸ್ಪತ್ರೆ ಸೇರಿದ ಅಭಿಮಾನಿ ‌!!

ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಬ್ಯಾಟ್​​ನಿಂದ ಸಿಡಿದ ಸಿಕ್ಸರ್ ಒಂದು ಸ್ಟೇಡಿಯಂನಲ್ಲಿ ಕುಳಿತಿದ್ದ ಅಭಿಮಾನಿ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

ಹೌದು. ಎರಡನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು. ತಮ್ಮ ಸ್ಟಾರ್ ಬ್ಯಾಟ್ಸ್‌ಮನ್‌ಗಳನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಭಾರತದ ಪ್ರಥಮ ಇನ್ನಿಂಗ್ಸ್ ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 6ನೇ ಓವರ್‌ನ ಕೊನೆಯ ಎಸೆತದಲ್ಲಿ ಮಿಡ್ ವಿಕೆಟ್ ಕಡೆಗೆ ಭರ್ಜರಿ ಸಿಕ್ಸರ್ ಬಾರಿಸಿದರು. ಈ ಸಿಕ್ಸ್​ ಹೋಗಿ ಬಿದ್ದಿದ್ದು ಡಿ ಕಾರ್ಪೊರೇಟ್ ಬಾಕ್ಸ್ ನಲ್ಲಿ ಕುಳಿತಿದ್ದ 22 ವರ್ಷದ ಅಭಿಮಾನಿಯೊಬ್ಬನ ಮೂಗಿಗೆ. ಚೆಂಡು ಬಿದ್ದ ರಭಸಕ್ಕೆ ಮೂಗಿಗೆ ಆಳವಾದ ಗಾಯವಾಗಿದ್ದು, ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಎಕ್ಸ್‌ರೇ ತೆಗೆದ ನಂತರ ಅವರ ಮೂಗಿನಲ್ಲಿ ಮೂಳೆ ಮುರಿತ ಆಗಿರುವುದು ಕಂಡು ಬಂದಿದೆ.

ಈ ಬಗ್ಗೆ ಮಾತನಾಡಿರುವ ಬೆಂಗಳೂರು ಆಸ್ಪತ್ರೆಯ ವೈದ್ಯರು, “ಎಕ್ಸ್ರೆ ನಲ್ಲಿ ಮೂಗಿನ ಮೂಳೆ ಮುರಿದಿರುವುದು ಕಂಡು ಬಂದಿದೆ. ಹಾಗೆಯೇ ಗಾಯವಾದ ಭಾಗಗಳಿಗೆ ಹೊಲಿಗೆಗಳನ್ನೂ ಹಾಕಲಾಗಿದೆ” ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಪಂದ್ಯವನ್ನು ವೀಕ್ಷಿಸುತ್ತಾ ಮೈಮರೆತಿದ್ದ ಅಭಿಮಾನಿ ಇದೀಗ ಮೂಗು ಮುರಿತಕ್ಕೊಳಗಾಗಿದ್ದು ದುರಾದೃಷ್ಟವೇ ಸರಿ.

Leave A Reply

Your email address will not be published.