4 ದಿನದಿಂದ ಅಮ್ಮನ ಶವದೊಂದಿಗೆ ಕಾಲ ಕಳೆದ 10 ವರ್ಷದ ಕಂದ| ಅಮ್ಮ ಸತ್ತಿದ್ದಾಳೆಂದೂ ತಿಳಿಯದೇ ಜೋಗುಳ ಹಾಡುತ್ತಿದ್ದ ಕಂದ|

ಆ ಒಂದು ಮನೆಯಲ್ಲಿ ಇದ್ದದ್ದು ಕೇವಲ ತಾಯಿ ಮತ್ತು ಮಗ. ಒಂದು ದಿನ ಅಮ್ಮ ಚಿರನಿದ್ದೆಗೆ ಜಾರಿದ್ದಾಳೆ. ಆದರೆ ಮಗುವಿಗೆ ಗೊತ್ತಾಗಿಲ್ಲ. ತಾಯಿಯೊಂದಿಗೇ 4 ದಿನ ಕಳೆದ ಮಗು, ಶವದಿಂದ ವಾಸನೆ ಬರಲು ಶುರುವಾದಾಗ ತನ್ನ ಮಾವನಿಗೆ ಕರೆಮಾಡಿ ತಿಳಿಸಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ನಡೆದಿರುವುದು ಆಂಧ್ರ ಪ್ರದೇಶದ ತಿರಪತಿ ಸಮೀಪದ ವಿದ್ಯಾನಗರದಲ್ಲಿ.

10 ವರ್ಷದ ಪುಟ್ಟ ಮಗ ಪ್ರತಿ ದಿನ ಶಾಲೆಗೆ ಹೋಗಿ ಬರುತ್ತಾ ಇದ್ದ. ಅಮ್ಮ ಮಲಗಿದವಳು ಎದ್ದಿಲ್ಲ, ಬಹುಶಃ ಅವಳಿಗೆ ಆರೋಗ್ಯ ಸರಿಯಿಲ್ಲ ಅಂತ ತಿಳಿದು ಅವಳನ್ನು ಎಬ್ಬಿಸೋದು ಬೇಡ ಎಂದು ತಿಳಿದ ಕಂದ,
ಅಮ್ಮ ಚೆನ್ನಾಗಿ ನಿದ್ದೆ ಮಾಡಲಿ ಅಂತ ಜೋಗುಳವನ್ನೂ ಹಾಡ್ತಿದ್ದ. ಆದ್ರೆ ಆ ಪುಟ್ಟ ಬಾಲಕನಿಗೇ ಏನು ಗೊತ್ತು, ನನ್ನ ಅಮ್ಮ ಮತ್ತೆ ಏಳುವುದಿಲ್ಲ ಎಂದು. ಬರೋಬ್ಬರಿ 4 ದಿನಗಳ ಕಾಲ ಅಮ್ಮನ ಶವದೊಂದಿಗೇ ಬಾಲಕ ಕಾಲಕಳೆದಿದ್ದ !

ಮೃತ ಮಹಿಳೆಯನ್ನು 50 ವರ್ಷದ ರಾಜಲಕ್ಷ್ಮೀ ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪತಿಯಿಂದ ಡಿವೋರ್ಸ್ ಪಡೆದು, ಬೇರೆಯಾಗಿದ್ದು ಶ್ಯಾಮ್ ಕಿಶೋರ್ ಎಂಬ 10 ವರ್ಷದ ಮಗ ಇದ್ದ. ಇಬ್ಬರೂ ವಿದ್ಯಾನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು.

4 ದಿನಗಳ ಹಿಂದೆ ಮನೆಯೊಳಗೆ ಕಾಲು ಜಾರಿ ಬಿದ್ದು, ರಾಜಲಕ್ಷ್ಮೀ ತಲೆಗೆ ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದು, ತೀವ್ರವಾದ ರಕ್ತಸ್ರಾವಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಆದರೆ ಈ ಬಗ್ಗೆ ತಿಳಿಯದ ಮಗು ತನ್ನ ತಾಯಿ ರಕ್ತದ ಮಡುವಿನಲ್ಲಿ ಅಲುಗಾಡದೇ ಇದ್ದಾಗ, ತಾಯಿ ವಿಶ್ರಾಂತಿ ಪಡೆಯುತ್ತಿದ್ದಾಳೆ ಎಂದು ತಿಳಿದುಕೊಂಡಿದ್ದನಂತೆ.

ಇನ್ನೊಂದು ಆಘಾತಕಾರಿ ವಿಚಾರ ಅಂದ್ರೆ 10 ವರ್ಷದ ಬಾಲಕ ಶ್ಯಾಮ್ ಕಿಶೋರ್ ವಿಶೇಷ ಚೇತನನಾಗಿದ್ದ. ಆತನಿಗೆ ಬುದ್ಧಿ ಸರಿಯಿರದೇ ಇರುವುದರಿಂದ ತಾಯಿ ಏನು ಮಾಡುತ್ತಿದ್ದಾಳೆ ಅಂತ ಗೊತ್ತಾಗಲಿಲ್ಲ. ಹೀಗಾಗಿ ತಾಯಿ ಶವದೊಂದಿಗೆ ನಾಲ್ಕು ದಿನಗಳನ್ನು ಕಳೆದರೂ ಆತನಿಗೆ ತಿಳಿಯದೇ ಹೋಯಿತು.

4 ದಿನಗಳ ಬಳಿಕ ಮೃತ ದೇಹ ಕೊಳೆಯಲು ಶುರುವಾದಾಗ, ಕೆಟ್ಟ ವಾಸನೆ ಬಂದಾಗ, ಹೆದರಿದ ಬಾಲಕ ತನ್ನ ಮಾವ ದುರ್ಗಾ ಪ್ರಸಾದ್ ಎಂಬಾತನಿಗೆ ದೂರವಾಣಿ ಕರೆ ಮಾಡಿ, ನನ್ನ ಅಮ್ಮ ಮಲಗಿದ್ದವರು ಏಳಿಲ್ಲ ಮತ್ತು ತಾಯಿಯ ದೇಹದಿಂದ ದುರ್ವಾಸನೆ ಬರುತ್ತಿದೆ ಅಂತ ಹೇಳಿದ್ದಾನೆ.
ಬಾಲಕನ ಮಾತು ಕೇಳಿ ದಿಗಿಲುಗೊಂಡ ಮಾವ ದುರ್ಗಾ ಪ್ರಸಾದ್ ತಂಗಿ ಮನೆಗೆ ಬಂದಿದ್ದಾರೆ. ಆಗ ತಂಗಿ ಶವ ಕೊಳೆಯುತ್ತಿರುವುದು, ಆಕೆಯ ಮಗ ಶವದ ಬಳಿಯೇ ಕೂತಿರೋ ಭಯಾನಕ ದೃಶ್ಯ ನೋಡಿ ಭಯಭೀತರಾಗಿದ್ದಾರೆ.

ತಕ್ಷಣ ಸ್ಥಳೀಯ ಪೊಲೀಸರಿಗೆ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಸ್‌ಆರ್‌ಆರ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.