ಗುಂಯ್ ಎನ್ನುತ್ತಾ ಸುತ್ತುವರಿಯುವ ಸೊಳ್ಳೆ ಕಾಟದಿಂದ ಬೇಸತ್ತಿದ್ದೀರಾ!?? | ಮನೆಯ ಸುತ್ತ ಈ ಗಿಡಗಳನ್ನು ನೆಟ್ಟು ಸೊಳ್ಳೆ ಕಾಟದಿಂದ ಸುಲಭವಾಗಿ ಪಾರಾಗಿ

ಮಳೆಗಾಲ ಬಂತೆಂದರೆ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಗುಂಯ್ ಗುಂಯ್ ಎನ್ನುತ್ತಾ ನಮ್ಮನ್ನು ಸುತ್ತುವರಿಯುವ ಸೊಳ್ಳೆಗಳು ವಿಪರೀತ ಕಾಟ ಕೊಡುತ್ತವೆ. ಆದರೆ ಇದೀಗ ಬೇಸಿಗೆಯ ಸಮಯದಲ್ಲಿಯೂ ಬೆಳಿಗ್ಗೆ, ಸಂಜೆ ಸೊಳ್ಳೆಗಳ ಕಾಟ ಶುರುವಾಗಿದೆ. ಸೊಳ್ಳೆ ಕಚ್ಚಿದರೆ ಡೆಂಗ್ಯೂ , ಮಲೇರಿಯಾ, ಚಿಕುನ್ ಗುನ್ಯಾದಂತಹ ಅನೇಕ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಮಾತ್ರವಲ್ಲ ಸೊಳ್ಳೆ ಕಚ್ಚಿದ ಸ್ಥಳದಲ್ಲಿ ತುರಿಕೆ ಕಾಣಿಸಿಕೊಂಡು ಚರ್ಮದ ಅಲರ್ಜಿ ಕೂಡ ಬಾಧಿಸುತ್ತದೆ. ಆದರೆ ಮನೆಯ ಸುತ್ತ ಮುತ್ತ ಕೆಲವೊಂದು ಸಸ್ಯಗಳನ್ನು ನೆಡುವ ಮೂಲಕ ಈ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು.

ಸೊಳ್ಳೆಗಳ ಕಾಟ ತಪ್ಪಿಸಲು ಲೋಷನ್ ಗಳು , ಕ್ರೀಮ್ ಗಳು, ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ಇದರಲ್ಲಿ ರಾಸಾಯನಿಕಗಳಿರುತ್ತವೆ. ಈ ಕಾರಣದಿಂದಾಗಿ ಇವೆಲ್ಲವೂ ಚರ್ಮದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ಸೊಳ್ಳೆಗಳ ಕಾಟವನ್ನು ತಪ್ಪಿಸುವ ಸಲುವಾಗಿ ನೈಸರ್ಗಿಕ ವಿಧಾನವನ್ನು ಅಳವಡಿಸಿಕೊಳ್ಳುವುದು ಉತ್ತಮ.

*ಚೆಂಡು ಹೂವು :

ಚೆಂಡು ಹೂವು ಎಲ್ಲಾ ಕಾಲದಲ್ಲೂ ಅರಳುತ್ತದೆ. ಈ ಹೂವಿನ ಸುವಾಸನೆಯನ್ನು ಸೊಳ್ಳೆಗಳು ಇಷ್ಟಪಡುವುದಿಲ್ಲ. ಈ ಕಾರಣದಿಂದ ಸೊಳ್ಳೆಗಳು ಈ ಸಸ್ಯದಿಂದ ದೂರವಿರುತ್ತದೆ. ಈ ಗಿಡವನ್ನು ನೆಟ್ಟರೆ ಹೂವುಗಳಿಂದ ಮನೆಯ ಸೌಂದರ್ಯವೂ ಹೆಚ್ಚುತ್ತದೆ. ಸೊಳ್ಳೆ ಕಾಟದಿಂದ ಮುಕ್ತಿಯೂ ಸಿಗುತ್ತದೆ. ಈ ಸಸ್ಯವನ್ನು ಮನೆಯ ಹೊಸ್ತಿಲಲ್ಲಿಟ್ಟರೆ ಸೊಳ್ಳೆ ಮನೆ ಒಳಗೆ ಬರುವುದೇ ಇಲ್ಲ.

*ತುಳಸಿ ಮತ್ತು ಪುದಿನ ಗಿಡ :

ತುಳಸಿ ಮತ್ತು ಪುದಿನ ಎರಡರಲ್ಲೂ ಔಷಧೀಯ ಗುಣಗಳಿರುತ್ತವೆ. ಸೊಳ್ಳೆಗಳನ್ನು ಮನೆಯಿಂದ ದೂರವಿರಿಸಲು ತುಳಸಿ ಮತ್ತು ಪುದಿನ ಸಹಾಯ ಮಾಡುತ್ತದೆ. ತುಳಸಿ ಎಲೆಗಳಿಂದ ಹೊರ ಬರುವ ಪರಿಮಳವು ಸೊಳ್ಳೆಗಳು ಮತ್ತು ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಪುದಿನ ಸಸ್ಯವು ಸೊಳ್ಳೆಗಳು ಮಾತ್ರವಲ್ಲ ನೊಣಗಳು ಮತ್ತು ಇರುವೆಗಳನ್ನು ಕೂಡಾ ಮನೆಯಿಂದ ದೂರವಿರಿಸುತ್ತದೆ.

*ಲ್ಯಾವೆಂಡರ್ ಸಸ್ಯ :

ಈ ಸಸಿಯ ಸುತ್ತ ಸೊಳ್ಳೆಗಳು ಮಾತ್ರವಲ್ಲ, ಇತರ ಯಾವ ಕೀಟಗಳು ಕೂಡಾ ಬರುವುದಿಲ್ಲ. ಲ್ಯಾವೆಂಡರ್ ಸಸ್ಯದ ಎಲೆಗಳಲ್ಲಿ ಕಂಡುಬರುವ ಎಸೆನ್ಶಿಯಲ್ ಆಯಿಲ್ ಕಾರಣದಿಂದ ಈ ಸಸ್ಯದಿಂದ ಸುಗಂಧ ಹೊರ ಹೊಮ್ಮುತ್ತದೆ. ಈ ಸುಗಂಧದ ಕಾರಣದಿಂದ ಸೊಳ್ಳೆಗಳು ಈ ಸಸ್ಯದ ಸುತ್ತ ಮುತ್ತ ಪ್ರದೇಶಗಳಲ್ಲಿ ಸುಳಿಯುವುದಿಲ್ಲ. ಈ ಸಸ್ಯದ ಇನ್ನೊಂದು ವಿಶೇಷವೆಂದರೆ ಈ ಸಸ್ಯಕ್ಕೆ ನೀರಿನ ಅಗತ್ಯವಿರುವುದಿಲ್ಲ.

Leave A Reply

Your email address will not be published.