ಪೊಲೀಸ್ ಅಧಿಕಾರಿಯನ್ನು ಎಲ್ಲರೂ ಹೊಗಳುತ್ತಾರೆ ಎಂದರೆ ಅವರು ಸರಿಯಿಲ್ಲ ಎಂದರ್ಥ-ಗೃಹ ಸಚಿವ ಅರಗ ಜ್ಞಾನೇಂದ್ರ!!

ಪೊಲೀಸರು ಅಥವಾ ಗೃಹ ಸಚಿವ ಎಲ್ಲರಿಗೂ ಸರಿಯಾಗಿ ಇರಲು ಅಸಾಧ್ಯ, ಎಲ್ಲರಿಂದಲೂ ಹೊಗಳಿಕೆ ಪಡೆಯಲು ಸಾಧ್ಯವಿಲ್ಲ ಹಾಗೂ ಒಬ್ಬ ಅಧಿಕಾರಿ ಎಲ್ಲರಿಂದಲೂ ಹೊಗಳಿಕೆ ಗಳಿಸುತ್ತಿದ್ದಾನೆ ಎಂದರೆ ಆತ ಸರಿಯಿಲ್ಲ ಎಂದರ್ಥ ಎಂದು ಕರ್ನಾಟಕ ಸರ್ಕಾರದ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಅವರು ಶಿರಸಿ ನಗರದ ಹಿರಿಯ ಸಹಕಾರಿ ಶಾಂತರಾಮ ಹೆಗಡೆ ಶೀಗೇಹಳ್ಳಿ ಅವರ ಆರೋಗ್ಯ ವಿಚಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಹೆಚ್ಚಿನ ಒತ್ತು ಕೊಟ್ಟು ಎಲ್ಲವೂ ಸರಿಯಾಗಿದೆ. ಮೊನ್ನೆ ನಡೆದ ಒಂದೆರಡು ಘಟನೆ ಹೊರತು ಪಡಿಸಿದರೆ ಬೇರೆ ಎಲ್ಲವೂ ಸರಿಯಾಗಿವೆ. ಶಿವಮೊಗ್ಗದಲ್ಲಿ ನಡೆದ ಘಟನೆಯ ಆರೋಪಿಗಳನ್ನು 24 ಗಂಟೆಯಲ್ಲಿ ಹೆಡೆಮುರಿಕಟ್ಟಿ ಪರಿಸ್ಥಿತಿ ಶಾಂತಗೊಳಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವವರ ಮೇಲೆ ಈಗಾಗಲೇ ನಿಗಾ ಇರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪೊಲೀಸರು ಏಕಾಏಕಿ ಹಲ್ಲೆಗೆ ಮುಂದಾಗುವುದು ತಪ್ಪು, ಜನತೆಗೆ ಧೈರ್ಯ ತುಂಬುವ ಕೆಲಸದ ಜೊತೆಗೆ ಕಾನೂನಿನ ಭಯ ಹುಟ್ಟಿಸಬೇಕೆ ಹೊರತು ಪೊಲೀಸರನ್ನು ಕಂಡು ಭಯಭೀತರಾಗುವಂತೆ ಮಾಡುವುದು ತಪ್ಪು ಎಂದು ಸಚಿವರು ಅಭಿಪ್ರಾಯ ಪಟ್ಟರು. ಇನ್ನು ರಾಜ್ಯದಲ್ಲಿ ಪಿ.ಎಫ್.ಐ ಯಂತಹ ಸಂಘಟನೆಗಳನ್ನು ಬ್ಯಾನ್ ಮಾಡುವ ಬದಲು ಅವುಗಳ ಚಲನವಲನಗಳ ಮೇಲೆ ನಿಗಾ ಇಡಲು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದೆ, ಬ್ಯಾನ್ ಮಾಡುವ ವಿಚಾರ ಕೇಂದ್ರ ನಿರ್ಧರಿಸಲಿದ್ದು ರಾಜ್ಯದಿಂದ ವರದಿ ಸಲ್ಲಿಕೆಯಾಗಬೇಕಾಗಿದೆ ಎಂದರು.

Leave A Reply

Your email address will not be published.