ಮುಸ್ಲಿಂ ಸಹೋದರರ ಗೋ ಪ್ರೇಮಕ್ಕೆ ಇಡೀ ದ.ಕ ಜಿಲ್ಲೆಯೇ ಫಿದಾ!! ಸುಮಾರು ಹತ್ತು ವರ್ಷಗಳಿಂದ ವಿವಿಧ ತಳಿಗಳ ಗೋವುಗಳನ್ನು ಸಾಕಿ,ಸಲಹಿ ರಕ್ಷಿಸುತ್ತಿದೆ ಪುತ್ತೂರಿನ ಕುಟುಂಬ!!

ಇಡೀ ದೇಶದಲ್ಲೇ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿದ್ದರೂ ಹಲವೆಡೆಗಳಲ್ಲಿ ಎಗ್ಗಿಲ್ಲದೇ ಅಕ್ರಮವಾಗಿ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿರುವುದು ಬೇಸರದ ಸಂಗತಿ. ಆದರೆ ಇದಕ್ಕೆಲ್ಲಾ ತೀರಾ ವಿರುದ್ಧವಾಗಿದೆ ಇಲ್ಲೊಂದು ಮುಸ್ಲಿಂ ಸಹೋದರರ ಗೋ-ಪ್ರೇಮ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಆರ್ಲಪದವು ನೆಲ್ಲಿಕ್ಕಿಮಾರು ಎಂಬಲ್ಲಿನ ಮುಸ್ಲಿಂ ಕುಟುಂಬವೊಂದು ಪೂರ್ವಜರಿಂದ ಗೋ ಪ್ರೇಮ ಮೈಗೂಡಿಸಿಕೊಂಡು ಸುಮಾರು ಹತ್ತು ವರ್ಷಗಳಿಂದ ಜಾನುವಾರು ಸಾಕಣೆ ಮಾಡುವುದಲ್ಲದೆ ಅವುಗಳ ಬಗೆಗೆ ವಿಶೇಷ ಕಾಳಜಿ ವಹಿಸುತ್ತಿರುವುದನ್ನೇ ಹವ್ಯಾಸವಾಗಿ ರೂಢಿಸಿಕೊಂಡಿದ್ದಾರೆ.

ಕೃಷಿ ಕುಟುಂಬದ ಉಮ್ಮರ್ ಜನಪ್ರಿಯ,ಎನ್.ಎಸ್. ಇಸುಬು ಹಾಗೂ ರಝಕ್ ಎಂಬ ಈ ಮೂವರು ಸಹೋದರರು ಪ್ರಸ್ತುತ 14 ಜಾನುವಾರುಗಳನ್ನು ಸಾಕಿ ಸಲಹುತ್ತಿದ್ದು ಇವುಗಳಲ್ಲಿ ಹೆಚ್ಚಿನವು ಎತ್ತುಗಳಾಗಿವೆ. ಗಿರ್,ಕೊರಿಯನ್ ಮಿಕ್ಸ್ ಹೀಗೆ ಬೇರೆ ಬೇರೆ ಜಾತಿಯ ಗೋವುಗಳಿದ್ದು ತಂದೆಯಿಂದಲೇ ಬಂದ ಕಾಯಕವನ್ನು ಪುತ್ರರು ಮುಂದುವರಿಸುತ್ತಿದ್ದಾರೆ. ಸಹೋದರರ ತಂದೆ ದಿ. ಮೊಹಮ್ಮದ್ ಅವರು ಕಂಬಳದ ಕೋಣಗಳನ್ನು ಓಡಿಸುತ್ತಿದ್ದರು ಹಾಗೂ ಅವುಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು ಎಂಬುವುದಕ್ಕೆ ಅಲ್ಲಿ ಹಲವು ಕುರುಹುಗಳು ಇನ್ನೂ ಮಾಸದೆ ಉಳಿದಿದೆ.

ಇಲ್ಲಿರುವ ಬೃಹತ್ ಜಾತಿಯ ಮುರುಗ ಎಂಬ ಹೆಸರಿನ ಗಿರ್ ತಳಿಯು ಪ್ರಾಣಿ ಪ್ರದರ್ಶನಗಳಲ್ಲಿಯೂ ಹೆಚ್ಚು ಹೆಸರು ಮಾಡಿತ್ತು. ಹಿಂಡಿ,ಹುಲ್ಲು, ಬೈ ಹುಲ್ಲು ಹೀಗೆ ಹಲವು ಬಗೆಯ ಆಹಾರಗಳನ್ನು ನೀಡುವುದರೊಂದಿಗೆ ಬಿಸಿಲಿನ ದಾಹ ತೀರಲು ಅವುಗಳ ಮೇಲೆ ಪೈಪಿನಿಂದ ತಂಪನೆಯ ನೀರು ಹಾಯಿಸುತ್ತಾರೆ.ಒಂದು ಬಾರಿ ಇವರ ಸಾಕು ದನವನ್ನು ಗೋ ಕಳ್ಳರು ಕದ್ದು ಹೊಯ್ದ ಸುದ್ದಿ ತಿಳಿದ ಸಹೋದರರ ತಾಯಿ ಕೆಲ ದಿನಗಳ ಕಾಲ ಉಪವಾಸವಿದ್ದು, ತಮ್ಮ ಪ್ರೀತಿಯ ಗೋ ವನ್ನು ಕದ್ದವರಿಗೆ ಹಿಡಿ ಶಾಪ ಹಾಕಿರುವುದು ಗೋವಿನ ಬಗೆಗೆ ಅವರಿಗಿರುವ ಪ್ರೀತಿಯನ್ನು ಎತ್ತಿ ತೋರಿಸುತ್ತದೆ.

ಮುಸ್ಲಿಂಮರಲ್ಲಿ ಕೆಲವರು ಮಾಡುವ ತಪ್ಪುಗಳಿಗೆ ಇಡೀ ಸಮುದಾಯವನ್ನೇ ದೂಷಿಸುವ ಸಮಾಜಕ್ಕೆ ಈ ಸಹೋದರರ ಗೋ ಪ್ರೇಮ ಅರಿವಿಗೆ ಬಾರದೆ ಇರುವುದು ಬೇಸರದ ಸಂಗತಿ, ಗೋವುಗಳನ್ನು ಮಕ್ಕಳಂತೆಯೇ ನೋಡಿಕೊಳ್ಳುವುದು, ಅವುಗಳ ಪಾಲನೆ ಪೋಷಣೆಗೆ ಹೆಚ್ಚು ಒತ್ತು ನೀಡಿ ಅವುಗಳ ರಕ್ಷಣೆ ಅಗತ್ಯವಾಗಿದೆ ಎನ್ನುತ್ತಾರೆ ಉಮ್ಮರ್ ಸಹೋದರರು.

Leave A Reply

Your email address will not be published.