‘ವಾಟ್ಸಪ್ ಸ್ಟೇಟಸ್ ‘ನಿಂದ ಪ್ರಾಣವನ್ನೇ ಕಳೆದುಕೊಂಡ ಮಹಿಳೆ|ಇದರ ಹಿಂದಿರುವ ಕಾರಣ ಮಾತ್ರ ಕ್ಷುಲ್ಲಕ!

ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳಲು ಉತ್ತಮವಾದ ಜೊತೆಗಾರರನ್ನ ಹುಡುಕುತ್ತೇವೆ. ಅದೆಷ್ಟೋ ಮಂದಿಗೆ ಈ ಯುಗದಲ್ಲಿ ವಾಟ್ಸಪ್ ಸ್ಟೇಟಸ್ ಅನ್ನೇ ತಮ್ಮ ಕಷ್ಟಗಳಲ್ಲಿ ಸಹಕರಿಸುವ ಸ್ನೇಹಿತ ಎಂದು ತಮ್ಮ ಭಾವನೆಗಳನ್ನು ಅದರಲ್ಲಿ ತೋರ್ಪಡಿಸುತ್ತಾರೆ. ಹೀಗೆ ವಾಟ್ಸಪ್ ಸ್ಟೇಟಸ್ ಹಾಕಿದ ವಿಚಾರವಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಈ ಮಹಿಳೆ!!

ಹೌದು. ಈ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್ ತಾಲೂಕಿನ ಬೊಯಿಸರ್ ನಲ್ಲಿ ನಡೆದಿದೆ.ಶಿವಾಜಿನಗರ ಪ್ರದೇಶದ ನಿವಾಸಿ ಲೀಲಾವತಿ ದೇವಿ ಪ್ರಸಾದ್ ಅವರ ಪುತ್ರಿ ವಾಟ್ಸಪ್ ಸ್ಟೇಟಸ್ ಹಾಕಿದ್ದು,ಅದರಲ್ಲಿ ಆಕೆ ಸಂದೇಶ ಬರೆದಿದ್ದಳು ಎನ್ನಲಾಗಿದೆ. ಆಕೆಯ ಸ್ನೇಹಿತರ ಕುಟುಂಬದವರಿಗೆ ಇದು ಇಷ್ಟವಾಗಲಿಲ್ಲ. ತಮಗೆ ಅವಮಾನ ಮಾಡಲು ಈ ಸ್ಟೇಟಸ್ ಹಾಕಲಾಗಿದೆ ಎಂದು ಅವರು ಕೋಪಗೊಂಡಿದ್ದರು.

ನಂತರ ಫೆಬ್ರವರಿ 10 ರಂದು ಮನೆಗೆ ನುಗ್ಗಿ ಲೀಲಾವತಿ ದೇವಿ ಮತ್ತು ಅವರ ಮಗಳನ್ನು ಕೆಲವರು ತೀವ್ರವಾಗಿ ಥಳಿಸಿದ್ದರು.ಗಲಾಟೆಯಲ್ಲಿ ಲೀಲಾವತಿ ದೇವಿ ತೀವ್ರವಾಗಿ ಗಾಯಗೊಂಡಿದ್ದರು.ಬಳಿಕ ಆಕೆಯನ್ನು ಚಿಕಿತ್ಸೆಗಾಗಿ ಬೋಯಿಸರ್​​​ನ ತುಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಲೀಲಾವತಿ ದೇವಿ ಸಾವಿಗೀಡಾಗಿದ್ದಾರೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವವರೆಗೆ ಶವವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುವುದಿಲ್ಲ ಎಂದು ಕುಟುಂಬಸ್ಥರು ಹೇಳಿದ್ದರು. ಇದರಿಂದ ಆ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿಯೂ ನಿರ್ಮಾಣವಾಗಿತ್ತು. ಆದಾಗ್ಯೂ, ಪೊಲೀಸರು ಪೋಷಕರಿಗೆ ಮನವರಿಕೆ ಮಾಡಿ ಶವ ತೆಗೆದುಕೊಂಡು ಹೋಗುವಂತೆ ಮಾಡಿದರು.

ಮೃತ ಮಹಿಳೆ ಮಗಳು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು,ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗಳ ಸ್ನೇಹಿತರ ಮನೆಯವರನ್ನು ಬಂಧಿಸಿದ್ದಾರೆ. ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ನೇಹಿತರ ಕುಟುಂಬಸ್ಥರಿಗೆ ಅವಮಾನ ಮಾಡಲು ನಾನು ಸ್ಟೇಟಸ್ ಹಾಕಿರಲಿಲ್ಲವೆಂದು ಮೃತಳ ಮಗಳು ಪೊಲೀಸ್ ಮುಂದೆ ಹೇಳಿಕೆ ನೀಡಿದ್ದಾಳೆ.

Leave A Reply

Your email address will not be published.