ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ಸಡಗರ-ಸಂಭ್ರಮದ ವರ್ಷಾವಧಿ ಜಾತ್ರೋತ್ಸವ

ಬಿಳಿನೆಲೆ :
ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ವರ್ಷಾವಧಿ ಜಾತ್ರೋತ್ಸವ ಮತ್ತು ನಿಶಿ ಪೂರ್ಣ ಭಜನೆ ಇದೀಗ ಕಳೆಗಟ್ಟಿದೆ.
ಫೆಬ್ರವರಿ 9 ರಂದು ಜಾತ್ರೋತ್ಸವದ ಮಹತ್ವದ ದಿನ.

ಬ್ರಹ್ಮಶ್ರೀ ಉಚ್ಚಿಲ ಕೆ.ಯು. ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದೆ.

ಬೆಳಿಗ್ಗೆ 6 ರಿಂದ ಗಣಪತಿ ಹವನ, ಕಲಶ ಪೂಜೆ, ಮಧ್ಯಾಹ್ನ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಸಂಜೆ 6 ಗಂಟೆಯಿಂದ ದೀಪಾರಾಧನೆ, ಸಂಧ್ಯಾವಂದನೆ ನಡೆಯಲಿದೆ.

ಸಂಜೆ 6.15 ರಿಂದ ಕರ್ನಾಟಕ ಸಂಗೀತ ಕಛೇರಿ ಏರ್ಪಡಿಸಲಾಗಿದೆ. ವಿದ್ವಾನ್ ಮುರಳಿ ಕೃಷ್ಣ ಕಾವು ಪಟ್ಟಾಜೆ (ಗಾಯನ), ಮಾಸ್ಟರ್ ಸುಮೇಧ ಕನ್ಯಾನ ಅಮೈ (ವಯಲಿನ್), ವಿದ್ವಾನ್ ಸುನಾದಕೃಷ್ಣ ಕನ್ಯಾನ ಅಮೈ (ಮೃದಂಗ), ಶಿವಕೀರ್ತನ ಬಿ.ಜಿ. ಮತ್ತು ಮಾನಸ ಎನ್.ಎಸ್. ಪ್ರಾಯೋಜಕತ್ವ ವಹಿಸುವರು.
ಸುಬ್ರಹ್ಮಣ್ಯ ಬಿಳಿನೆಲೆ ಡಾ. ವಿದ್ಯಾಭೂಷಣ ಅಭಿಮಾನಿ ಸಂಘದವರ ಸಹಕರಿಸುವರು. ರಾತ್ರಿ 9ರಿಂದ ಮಹಾಪೂಜೆ, ರಾತ್ರಿ 10 ರಿಂದ ರಾಜಾಂಗಣದಲ್ಲಿ ಶ್ರೀ ದೇವರ ಬಲಿ ನೃತ್ಯೋತ್ಸವ, ಬಟ್ಟಲು ಕಾಣಿಕೆ, ಮಹಾಪ್ರಸಾದ, ಮಹಾ ಮಂತ್ರಾಕ್ಷತೆ, ರಾತ್ರಿ 11 ಕ್ಕೆ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಪುತ್ತೂರು ಎಸ್.ಆರ್.ಕೆ. ಲ್ಯಾಡರ್ ನ ಕೇಶವ ಎ. ಪ್ರಾಯೋಜಕತ್ವ ವಹಿಸುವರು.

ಬಿಳಿನೆಲೆ ಕ್ಷೇತ್ರ ಪರಮ ಪವಿತ್ರ ಕ್ಷೇತ್ರ ಎಂದರೆ ತಪ್ಪಲ್ಲ. ಸಾವಿರಾರು ವರ್ಷಗಳ ಹಿಂದೆ ಮುನಿಯೊಬ್ಬರು ತಪಸ್ಸು ಮಾಡಿ ಸಿದ್ಧಿ ಪಡೆದ ಪವಿತ್ರ ಭೂಮಿ. ಎರಡು ಕೈಗಳಲ್ಲಿ ಬೆಣ್ಣೆ ಹಿಡಿದ ನವನೀತ ದಾರಿ ಕೃಷ್ಣನ ಪ್ರತಿಮೆ ಬಹಳ ಅಪರೂಪ. ಗೋಸಂರಕ್ಷಕನಾದ ಗೋಪಾಲಕೃಷ್ಣನ ಈ ಕ್ಷೇತ್ರ ಗೋದುರಿತ ದೋಷ ನಿವಾರಣೆಗೆ ಪ್ರಸಿದ್ಧಿ ಪಡೆದಿದೆ.

ಭವ್ಯ ಹಿನ್ನಲೆಯ ಸುಕ್ಷೇತ್ರವಿದು :
ಗೋ ದುರಿತ ದೋಷ ನಿವಾರಣೆಗಾಗಿ, ಶಿಶುಹತ್ಯಾ ದೋಷ ನಿವಾರಣೆಗಾಗಿ ಹಾಗೂ ಇಷ್ಟಾರ್ಥ ಈಡೇರಿಸಲು ಈಗಾಗಲೇ ನಾಡಿನಾದ್ಯಂತ ಖ್ಯಾತಿಯನ್ನು ಪಡೆದ ಕ್ಷೇತ್ರವೇ ಬಿಳಿನೆಲೆ ಕ್ಷೇತ್ರ. ಇಲ್ಲಿಯ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಈ ಗ್ರಾಮ ಅಲ್ಲದೆ ದೂರದ ಊರುಗಳಿಂದ ಭಕ್ತರು ಬರುತ್ತಿದ್ದು ಸೇವಾದಿಗಳನ್ನು ಮಾಡಿಸುತ್ತಿದ್ದಾರೆ. ಸುಮಾರು 800 ವರ್ಷಗಳ ಹಿಂದಿನದ್ದಾಗಿದ್ದು ತಪಸ್ವಿಯೋರ್ವರಿಂದ ಪ್ರತಿಷ್ಠೆಗೊಂಡಿದ್ದ ದೇವಸ್ಥಾನ
ಎನ್ನುವುದು ಪ್ರತೀತಿ. ಹಿಂದೆ ವೈಭವದಿಂದ ಜಾತ್ರಾದಿಗಳನ್ನು ನಡೆಸುತ್ತಿದ್ದ ದೇವಾಲಯ ಕಾರಣಾಂತರಗಳಿಂದ ಪಾಳುಬಿದ್ದಿತ್ತು. ಆದರೆ ಇದೀಗ ಕಾಲಕಾಲಕ್ಕೆ ಜೀರ್ಣೋದ್ಧಾರ ಗೊಂಡು, ಬ್ರಹ್ಮಕಲಶೋತ್ಸವ ನೆರವೇರಲ್ಪಟ್ಟು ಮತ್ತೆ ಗತವೈಭವದತ್ತ ಸಾಗುತ್ತಿದೆ ಈ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ.

ಬಿಳಿನೆಲೆ ಒಂದು ಕುಗ್ರಾಮ. ಆದರೆ ಗೋಪಾಲಕೃಷ್ಣ ದೇವರ ಸನ್ನಿಧಿಯಿಂದಾಗಿ ಅದು ಸುಗ್ರಾಮವಾಗಿದೆ. ಪ್ರಾಚೀನ ದೇವಾಲಯಗಳಲ್ಲಿ ಒಂದಾದ ಈ ದೇವಳದಲ್ಲಿ ಸುಂದರವಾದ ಬಾಲಕೃಷ್ಣ ನಿತ್ಯ ಪೂಜೆಗೊಳ್ಳುತ್ತಾನೆ.

ಹಿಂದಿನ ಕಾಲದಲ್ಲಿ ಪ್ರಸಿದ್ಧವಾದ ಪುಣ್ಯಕ್ಷೇತ್ರವಾಗಿದ್ದು ಪ್ರಕೃತಿಯ ಮಡಿಲಲ್ಲಿ ಭಕ್ತರು ಅವರ್ಣನೀಯವಾದ ಆನಂದ ವನ್ನು ಪಡೆದು ಪುನೀತರಾಗಲು ಯೋಗ್ಯವಾದ ಕ್ಷೇತ್ರವಾಗಿತ್ತು ಈ ಬಿಳಿನೆಲೆ.

ಬಿಳಿನೆಲೆ ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಉಪ್ಪಿನಂಗಡಿಯಿಂದ ಸುಮಾರು 25 ಮೈಲು ದೂರದಲ್ಲಿದೆ. ಇಲ್ಲಿಂದ ಸುಬ್ರಹ್ಮಣ್ಯಕ್ಕೆ 7 ಮೈಲುಗಳಷ್ಟು ಅಂತರ. ಈ ಗ್ರಾಮ ಹಿಂದೆ ಕುಕ್ಕೆ ಪುರಕ್ಕೊಳಪಟ್ಟ ಪ್ರದೇಶವಾಗಿತ್ತು. ಹಿಂದೆ ಬಿಳಿನೆಲೆ ಪ್ರಸಿದ್ಧ ಕ್ಷೇತ್ರವಾಗಿತ್ತು ಎನ್ನುವುದಕ್ಕೆ ಅಲ್ಲಿ ಸಿಗುವ ಆಧಾರಗಳೇ ಸಾಕ್ಷಿಯಾಗಿವೆ.

5 ಮತ್ತು 6 ನೇ ಶತಮಾನದಲ್ಲಿ ಬಿಳಿನೆಲೆ ದೊಡ್ಡ ವಿದ್ಯಾ ಕೇಂದ್ರವಾಗಿತ್ತು. ಇಲ್ಲಿ ನೂರಾರು ಶಿಷ್ಯರು ಜ್ಞಾನಾರ್ಜನೆ ಮಾಡುವ ಗುರುಕುಲ ಇತ್ತೆಂದು ತಿಳಿದುಬರುತ್ತದೆ. ಬಿಳಿನೆಲೆಯಲ್ಲಿ ಹರಿಯುತ್ತಿರುವ ಹೊಳೆಯ ಹೆಸರು ಹಿಂದೆ ಶುಕ್ಲ ತೀರ್ಥ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಈ ಶುಕ್ಲತೀರ್ಥ ಸಮೀಪ ಗುರುಗಳು ಆಶ್ರಮ ಕಟ್ಟಿಕೊಂಡು ಶಿಷ್ಯರಿಗೆ ವೇದಾಧ್ಯಯನ ಮಾಡುತ್ತಿದ್ದರು. ಶುಕ್ಲತೀರ್ಥ ಇಲ್ಲಿ ಹರಿಯುತ್ತಿದ್ದ ರಿಂದಲೂ ಈ ಪ್ರದೇಶಕ್ಕೆ ಬಿಳಿನೆಲೆ ಎಂಬ ಹೆಸರು ಬರಲು ಕಾರಣವಾಗಿರಬೇಕು. ಬಿಳಿನೆಲೆ ಪವಿತ್ರಕ್ಷೇತ್ರ ಎನಿಸಿಕೊಳ್ಳಲು ಹಾಗೂ ಅಲ್ಲಿ ಶ್ರೀ ಗೋಪಾಲ ಕೃಷ್ಣ ವಿಗ್ರಹ ಸ್ಥಾಪನೆಯಾದ ಬಗ್ಗೆ ನಿರ್ಧಾರಕ ಪೂರಕ ಆಧಾರಗಳು ಯಾವುವು ಸಿಗದಿದ್ದರೂ ದಂತಕಥೆಗಳ ಮೂಲಕ ಮತ್ತು ದೇವಾಲಯದಲ್ಲಿ ಕೆಲ ವರ್ಷಗಳ ಹಿಂದೆ ಇಟ್ಟ 5 ದಿನಗಳ ಅಷ್ಟಮಂಗಲ ಪ್ರಶ್ನೆಯಿಂದ ಭವ್ಯ ಇತಿಹಾಸ ತಿಳಿದು ಬರುತ್ತದೆ.

2 ಸಾವಿರ ವರ್ಷಗಳ ಹಿಂದೆ ಮಹಾ ತಪಸ್ವಿಗಳು ಶಿಷ್ಯ ಸಮುದಾಯದವರೊಂದಿಗೆ ಸಂಚರಿಸುತ್ತ ಬಿಳಿನೆಲೆಗೆ ಬಂದವರು ಇಲ್ಲಿಯ ಪ್ರಕೃತಿ ಸೊಬಗಿಗೆ ಪ್ರಶಾಂತ ವಾತಾವರಣಕ್ಕೆ, ರಮ್ಯನೋಟಕ್ಕೆ ಮಾರುಹೋಗಿ ತಪಗೈಯಲು ಯೋಗ್ಯ ಸ್ಥಳವೆಂದರಿತು ಇಲ್ಲಿಯೇ ನೆಲೆ ನಿಂತರು.

ಬ್ರಾಹ್ಮಣರು ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ ವಿದ್ಯಾ ಕೇಂದ್ರ ಸ್ಥಾಪಿಸಲು ಯೋಗ್ಯ ಸ್ಥಳವೆಂದರಿತು ತಪಸ್ವಿಗಳು ಗುರುಕುಲವನ್ನು ಸ್ಥಾಪಿಸಿದರು. ಹೀಗೆ ಕೆಲಕಾಲ ಮುಂದುವರಿಯುತ್ತಾ ಬರಲು ಅವರ ತಪೋಶಕ್ತಿಗೆ ಶಿವನು ಮೆಚ್ಚಲು ಪರಬ್ರಹ್ಮ ಸ್ವರೂಪತ್ಮಕವಾದ ಜ್ಯೋತಿರ್ಲಿಂಗವನ್ನು ಯತಿಗಳಿಗೆ ದೊರೆತಿತೆಂದು ಪ್ರತೀತಿ ಇದೆ. ಆ ಜ್ಯೋತಿರ್ಲಿಂಗವನ್ನು ಋಷಿಗಳು ಆರಾಧಿಸಿ ಅಲ್ಲೇ ಇದ್ದರು. ಕಾಲಾನಂತರ ಶಿಷ್ಯರಿಗೆ ಅದನ್ನು ಒಪ್ಪಿಸಿ ಪೂಜಾವಿಧಿ ಕ್ರಮ ತಿಳಿಸಿ ಬ್ರಹ್ಮೈಕ್ಯರಾದರೆಂದು ತಿಳಿದು ಬರುತ್ತದೆ.

ಶ್ರೀ ಗೋಪಾಲಕೃಷ್ಣ ವಿಗ್ರಹ ಸ್ಥಾಪನೆ :
ಬಿಳಿನೆಲೆ ಕ್ಷೇತ್ರದಲ್ಲಿ ಗೋಪಾಲಕೃಷ್ಣ ವಿಗ್ರಹ ಪ್ರತಿಷ್ಠೆ ಹೇಗಾಯಿತು ಏಕಾಯಿತು ಎಂಬ ವಿಚಾರದಲ್ಲಿ ಕೆಲ ಅಭಿಪ್ರಾಯ ತಿಳಿದುಬರುತ್ತದೆ. ತಪಸ್ವಿಗಳಿಂದ ಜ್ಯೋತಿರ್ಲಿಂಗವನ್ನು ಪಡೆದ ಶಿಷ್ಯವರ್ಗದವರು ಪರಂಪರೆಯಾಗಿ ಹಲವು ಕಾಲ ಅದನ್ನು ಅತಿಭಕ್ತಿಯಿಂದ ನಿಷ್ಠೆಯಿಂದ ಆಧರಿಸಿಕೊಂಡು ಬಂದರು. ಶಿಷ್ಯ ಪರಂಪರೆಯಲ್ಲಿ ಕೊನೆಯ ಶಿಷ್ಯ ವರ್ಗದವರು ತಮ್ಮ ತರುವಾಯ ಮುಂದಿನ ಜನಾಂಗಕ್ಕೆ ಶಕ್ತಿಶಾಲಿಯಾದ ಈ ಜ್ಯೋತಿರ್ಲಿಂಗವನ್ನು ನಿಷ್ಠೆಯಿಂದಲೂ ಶುದ್ಧಾಚಾರ ಗಳಿಂದಲೂ ಪೋಷಿಸಿಕೊಂಡು ಬರಲು ಸಾಧ್ಯವಾಗಲಾರದೆಂದು ಊಹಿಸಿ ಜ್ಯೋತಿರ್ಲಿಂಗವನ್ನು ಪಡೆದ ತಪಸ್ವಿಗಳು ಈ ಸ್ಥಳದಲ್ಲಿ ಭೂಗತಗೊಳಿಸಿದರು. ಬ್ರಾಹ್ಮಣ ವರ್ಗದವರನ್ನು, ಇತರರನ್ನು ಒಟ್ಟುಗೂಡಿಸಿ ಇದೇ ಸ್ಥಳದಲ್ಲಿ ದೇವಾಲಯ ಕಟ್ಟಿಸಿ ಭಕ್ತಿಯಿಂದ ನಂಬಿಕೊಂಡು ಬರುವ ಜನರ ಬೇಡಿಕೆಗಳನ್ನು ಈಡೇರಿಸಿಕೊಡುವ ಸೌಮ್ಯ ರೂಪಿಯಾದ ಗೋಕುಲ ಕೃಷ್ಣನ ಅದರಲ್ಲೂ 2 ಕೈಗಳಲ್ಲಿ ಮೃದು ಹೃದಯದಿಂದ ಬಂದವರಿಗೆ ದೂರದೂರದಿಂದ ಬಂದವರಿಗೆ ಮಾತ್ರ ತನ್ನ ಹೃದಯದಲ್ಲಿ ಸ್ಥಾನ ಎಂಬುದನ್ನು ತಿಳಿಸುವುದಕ್ಕೊ ಎಂಬಂತೆ ಬೆಣ್ಣೆ ಹಿಡಿದ ಅತಿ ಮುದ್ದಾದ ಬಾಲ ಕೃಷ್ಣನ ಪ್ರತಿಮೆ ಸ್ಥಾಪಿಸಿದರು. ಅನಂತರ ಬಿಳಿನೆಲೆ ಈಶಾನ್ಯ ದಿಕ್ಕಿನಲ್ಲಿ ವಾಸಿಸುತ್ತಿದ್ದ ಬ್ರಾಹ್ಮಣರಿಗೆ ಒಪ್ಪಿಸಿ ಅರ್ಚನಾದಿ ಕ್ರಮಗಳನ್ನೆಲ್ಲ ತಿಳಿಸಿದರಲ್ಲದೆ ಈ ಕ್ಷೇತ್ರದಲ್ಲಿ ವೈಭವದಿಂದ ಶಿವರಾತ್ರಿ, ನವರಾತ್ರಿ, ಕೃಷ್ಣಾಷ್ಟಮಿಗಳಂದು ಆಚರಿಸಬೇಕೆಂದು ತಿಳಿಸಿದರು. ಹೀಗೆ ತಪಸ್ವಿಗಳ ತಪೋಶಕ್ತಿಯಿಂದ ರೂಪುಗೊಂಡ ಬಿಳಿನೆಲೆ ಕ್ಷೇತ್ರ ಪವಿತ್ರ ಹಾಗೂ ಶಕ್ತಿದಾಯಕ ಎನ್ನುವುದರಲ್ಲಿ ಸಂಶಯವಿಲ್ಲ. ಭಕ್ತರ ಬಯಕೆಗಳನ್ನೆಲ್ಲ ಸಕಾಲದಲ್ಲಿ ನೀಡಿರುವ ಕಾರಣ ಕಾರಣಿಕವೂ ಆಗಿದೆ. ಸ್ಥಾಪನೆಗೊಂಡ ಗೋಪಾಲಕೃಷ್ಣ ಅದರಲ್ಲೂ ಬಾಲಗೋಪಾಲನ ಎರಡೂ ಕೈಗಳಲ್ಲಿ ಬೆಣ್ಣೆ ಹಿಡಿದು ದ್ವಿಬಾಹುಗಳನ್ನು ಕೂಡಿದವನಾಗಿದ್ದ ಮೂರ್ತಿ ಮುದ್ದುಮುದ್ದಾಗಿ ಚಿತ್ತಾಕರ್ಷಕವಾಗಿದೆ.

ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಅತಿ ಪುರಾತನ ಸುದೀರ್ಘ ಇತಿಹಾಸವನ್ನೊಳಗೊಂಡು ಕಾರಣಿಕ ಸ್ಥಳವಾಗಿದೆ.

Leave A Reply

Your email address will not be published.