ಮಹೀಂದ್ರಾ ಶೋರೂಂನಲ್ಲಿ ರೈತನಿಗೆ ಅವಮಾನ ಪ್ರಕರಣ : ಆನಂದ್ ಮಹೀಂದ್ರಾ ಟ್ವೀಟ್, ವ್ಯಕ್ತಿಯ ಘನತೆ ಎತ್ತಿ ಹಿಡಿಯುವುದು ಪ್ರತಿಯೊಬ್ಬರ ಕರ್ತವ್ಯ

ಮಹೀಂದ್ರಾ ಶೋರೂಂ ಒಂದರಲ್ಲಿ ವಾಹನ ಖರೀದಿಸಲು ಬಂದ ರೈತನೊಬ್ಬನಿಗೆ ಅಪಮಾನವಾದ ಘಟನೆಯ ಬಗ್ಗೆ ಮಂಗಳವಾರ ಉದ್ಯಮಿ ಆನಂದ ಮಹೀಂದ್ರಾ ಅವರು ಬಹಿರಂಗವಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ.

ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದ್ದಾರೆ.
ಈ ತತ್ವಕ್ಕೆ ಲೋಪ ಉಂಟಾದರೆ ಅದನ್ನು ತುರ್ತಾಗಿ ಬಗೆಹರಿಸಲಾಗುವುದು. ಎಲ್ಲಾ ಸಮುದಾಯದವರು ಹಾಗೂ ಪಾಲುದಾರರು ಬೆಳೆಯಬೇಕೆಂಬುದೇ ಮಹೀಂದ್ರಾ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ ಎಂದು ಆನಂದ್ ಮಹೀಂದ್ರಾ ಅವರು ಸಂಸ್ಥೆಯ ಸಿಇಓ ವಿಜಯ್ ನಕ್ರಾ ಅವರನ್ನು ಟ್ವೀಟನ್ನು ಉಲ್ಲೇಖಿಸಿ ಮರು ಟ್ವೀಟ್ ಮಾಡಿದ್ದಾರೆ.

ಘಟನೆಯ ವಿವರ : ತುಮಕೂರಿನ ಶೋ ರೂಂ ಒಂದರಲ್ಲಿ ವಾಹನ ಖರೀದಿಸಲು ಬಂದಿದ್ದ ರೈತ ಕೆಂಪೇಗೌಡ ಶೋರೂಂನ ಸೇಲ್ಸ್ ಮ್ಯಾನ್ ನಲ್ಲಿ ಎಸ್ಯೂವಿ ಕಾರಿನ ಬೆಲೆಯನ್ನು ವಿಚಾರಿಸಿದ್ದರು. ಆದರೆ ಸಿಬ್ಬಂದಿ ಅವರ ವೇಷಭೂಷಣ ಗಮನಿಸಿ ನಿನಗೆ ಹತ್ತು ಲಕ್ಷ ರೂ‌. ಮೌಲ್ಯದ ಆ ವಾಹನ ಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಹೀಯಾಳಿಸಿದನು. ಹತ್ತು ರೂಪಾಯಿ ಕೂಡ ಇರಲಾರದು, ಸುಮ್ಮನೇ ಟೈಂ ವೇಸ್ಟ್ ಮಾಡೋಕೆ ಬಂದಿದ್ದೀಯಾ ಎಂದು ಹೇಳಿದ್ದಾನೆ. ಈ ಕೂಡಲೇ ಜಾಗ ಖಾಲಿ ಮಾಡು ಎಂದು ಆತ ಹೀಯಾಳಿಸಿದ್ದ. ಇದನ್ನೇ ಸವಾಲಾಗಿ ಸ್ವೀಕರಿಸಿದ ರೈತ, ಒಂದು ತಾಸಿನೊಳಗೆ ಹತ್ತು ಲಕ್ಷ ರೂ.ನಗದನ್ನು ತಂದು ವಾಹನವನ್ನು ಕೊಡುವಂತೆ ಕೇಳಿದ್ದನು. ವಾಹನ ಬುಕ್ಕಿಂಗ್ ಮಾಡಿದವರು ಹಲವರು ಇದ್ದುದರಿಂದ ವಾಹನವನ್ನು ತಕ್ಷಣವೇ ಪೂರೈಕೆ ಮಾಡಲು ಸಾಧ್ಯವಾಗಲಿಲ್ಲ.

ನಂತರ ಕ್ಷಮೆಯಾಚನೆ ಮಾಡಿದ ಶೋರೂಂ ಸಿಬ್ಬಂದಿ ಮಾತಿಗೂ ರೈತನ ಮನಸ್ಸು ಕರಗಲಿಲ್ಲ. ಪೊಲೀಸರು ಸ್ಥಳಕ್ಕೆ ಬಂದು ಸಮಾಧಾನ ಮಾಡಿಸಿದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಹಾಗೂ ಮಹೀಂದ್ರಾ ಅವರ ಗಮನಕ್ಕೂ ತರಲಾಗಿತ್ತು.

ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿಯೂ ಹಾಗೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಂಸ್ಥೆಯ ಸಿಇಒ ವಿಜಯ್ ನಕ್ರಾ ಟ್ವೀಟ್ ಮಾಡಿದ್ದಾರೆ.

Leave A Reply

Your email address will not be published.