ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ : ಮಾಜಿ ಕೇಂದ್ರ ಸಚಿವ,ಕಾಂಗ್ರೆಸ್ ನಾಯಕ ರತನ್‌ಜಿತ್ ಪ್ರತಾಪ್ ನಾರಾಯಣ್ ಸಿಂಗ್ ಬಿಜೆಪಿಗೆ ಸೇರ್ಪಡೆ

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಪ್ರಮುಖ ನಾಯಕರ ಪಕ್ಷಾಂತರ ಮುಂದುವರೆದಿದೆ.

ಮಾಜಿ ಕೇಂದ್ರ ಸಚಿವ ಮತ್ತು ಉತ್ತರ ಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕ ರತನ್‌ಜಿತ್ ಪ್ರತಾಪ್ ನಾರಾಯಣ್ ಸಿಂಗ್ ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೆಲಸ ಮಾಡುವುದಾಗಿ ಆರ್‌ಪಿಎನ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಆರ್‌ಪಿಎನ್ ಸಿಂಗ್ ಅವರ ತವರು ನೆಲ ಪದ್ರೌನಾ ಕ್ಷೇತ್ರವಾಗಿದ್ದು, ಇತ್ತೀಚೆಗಷ್ಟೇ ಬಿಜೆಪಿಯಿಂದ ಸಮಾಜವಾದಿ ಪಕ್ಷಕ್ಕೆ ಜಿಗಿದ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಪ್ರಬಲ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.

ಸಿಂಗ್ ಅವರು ಮಂಗಳವಾರ ಬೆಳಿಗ್ಗೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಹಲವಾರು ವರ್ಷಗಳ ಕಾಲ ಪಕ್ಷಕ್ಕೆ ದುಡಿದಿದ್ದ ಸಿಂಗ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ಕುಶಿನಗರದ ಸೈಂತ್ವಾರ್ ರಾಜಮನೆತನದ ವಂಶಸ್ಥರಾದ ಆರ್‌ಪಿಎನ್ ಸಿಂಗ್ ಕಳೆದ ಚುನಾವಣೆಯಲ್ಲಿ ಯುಪಿಯ ಪದ್ರೌನಾ ಕ್ಷೇತ್ರದಿಂದ ಸೋತಿದ್ದರು. ಇತ್ತೀಚೆಗಷ್ಟೇ ಬಿಜೆಪಿಯಿಂದ ಜಿಗಿದಿದ್ದ ಎಸ್‌ಪಿಯ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಇದೇ ಕ್ಷೇತ್ರದಿಂದ ಕಣಕ್ಕಿಳಿಯುವ ಎಲ್ಲಾ ಸಾಧ್ಯತೆ ಇದೆ.

Leave A Reply

Your email address will not be published.