ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿ ಹಿಂಸೆ ನೀಡಿದ ಹಾಸ್ಟೆಲ್ ವಾರ್ಡನ್ |ಮನನೊಂದು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಚೆನ್ನೈ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿ, ದೌರ್ಜನ್ಯ ನಡೆಸಿದ್ದರಿಂದ ಆಕೆ ಹಾಸ್ಟೆಲ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.

ತಕ್ಷಣ ಆಕೆಯನ್ನು ಆಕೆಯ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ವೈದ್ಯರ ಚಿಕಿತ್ಸೆಗೆ ಸ್ಪಂದಿಸದ ಆಕೆ ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾಳೆ.

ಲಾವಣ್ಯ ಎಂಬ 17 ವರ್ಷದ ಯುವತಿ ತಂಜಾವೂರಿನ ಸೇಂಟ್ ಮೈಕಲ್ಸ್ ಗರ್ಲ್ಸ್ ಹೋಮ್ ಎಂಬ ಹಾಸ್ಟೆಲ್​ನಲ್ಲಿದ್ದುಕೊಂಡು ಓದುತ್ತಿದ್ದಳು. ಆ ಹಾಸ್ಟೆಲ್‌ನ ವಾರ್ಡನ್‌ ಆಕೆಯಿಂದ ಹಾಸ್ಟೆಲ್‌ನ ಎಲ್ಲಾ ಕೊಠಡಿಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಅಲ್ಲದೆ, ನಿರಂತರವಾಗಿ ಆಕೆಯನ್ನು ನಿಂದಿಸುತ್ತಿದ್ದರು. ವಾರ್ಡನ್​ನಿಂದ ನನಗೆ ಬಹಳ ಕಿರುಕುಳವಾಗುತ್ತಿದೆ ಎಂದು ಲಾವಣ್ಯ ಒಪ್ಪಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ನನ್ನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ನಿರಂತರವಾಗಿ ಒತ್ತಾಯಿಸಲಾಗುತ್ತಿತ್ತು. ಇದೆಲ್ಲದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಆ ಹುಡುಗಿ ಆರೋಪಿಸಿದ್ದಾಳೆ.

ಈ ಘಟನೆಗಳಿಂದ ವಿಚಲಿತಳಾದ ಆ ಯುವತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಷ ಸೇವಿಸಿ ವಾಂತಿ ಮಾಡಿಕೊಂಡು ತೀವ್ರ ಹೊಟ್ಟೆನೋವಿನಿಂದ ನರಳುತ್ತಿದ್ದ ಆಕೆಯನ್ನು ಹಾಸ್ಟೆಲ್​ನವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಕೆ ಬದುಕುಳಿಯಲಿಲ್ಲ ಎಂದು ಲಾವಣ್ಯ ಅವರ ತಂದೆ ಮುರುಗಾನಂದಂ ತಿಳಿಸಿದ್ದಾರೆ.

ಮುರುಗಾನಂದಂ ಅವರು ಲಾವಣ್ಯ ಅವರನ್ನು ತಂಜೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಫ್ಟ್ ಮಾಡಿದರು. ಆಕೆಗೆ ಪ್ರಜ್ಞೆ ಬಂದಾಗ ಆಕೆ ತನ್ನ ಮೇಲೆ ನಡೆದ ದೌರ್ಜನ್ಯ ಹಾಗೂ ಮತಾಂತರವಾಗುವಂತೆ ಒತ್ತಾಯಿಸಿದ್ದರ ಕುರಿತು ವೈದ್ಯರಿಗೆ ಹೇಳಿದಳು. ಈ ಹಿನ್ನೆಲೆಯಲ್ಲಿ ವೈದ್ಯರು ತಿರುಕಟ್ಟುಪಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು.ನಂತರ ಪೊಲೀಸರು ಲಾವಣ್ಯಳನ್ನು ವಿಚಾರಿಸಲು ಬಂದಿದ್ದರು. ವಿಚಾರಣೆಯ ಆಧಾರದ ಮೇಲೆ, ಬೋರ್ಡಿಂಗ್ ಸ್ಕೂಲ್ ವಾರ್ಡನ್ ಲಾವಣ್ಯಗೆ ಕಿರುಕುಳ ನೀಡಿದ್ದಾರೆ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂಬುದು ಪೊಲೀಸರಿಗೆ ಖಾತರಿಯಾಯಿತು.

ಆ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವಾರ್ಡನ್ ಸಕಾಯಮರಿ (62) ಎಂಬುವವರನ್ನು ಬಂಧಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಜನವರಿ 19ರ ಬುಧವಾರ ರಾತ್ರಿ ಲಾವಣ್ಯ ಮೃತಪಟ್ಟಿದ್ದು,ಈ ಘಟನೆ ತಿರುಕಟ್ಟುಪಲ್ಲಿ ಪ್ರದೇಶದಲ್ಲಿ ಭಾರೀ ಸಂಚಲನ ಮೂಡಿಸಿದೆ.

Leave A Reply

Your email address will not be published.