ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕುಸಿದು ಬಿದ್ದ ಯುವಕ | ಕೂಡಲೇ ಸಿಪಿಆರ್ ನೀಡಿ ಯುವಕನ ಪ್ರಾಣ ರಕ್ಷಿಸಿದ ನರ್ಸ್ !!

ಚಲಿಸುತ್ತಿರುವ ಬಸ್ ನಲ್ಲಿ ಯುವಕನೋರ್ವನಿಗೆ ತೀವ್ರವಾಗಿ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಬಸ್ ನಲ್ಲಿದ್ದ ನರ್ಸ್ ಓರ್ವರು ಸಿಪಿಆರ್ ನೀಡಿ ಯುವಕನ ಪ್ರಾಣರಕ್ಷಿಸಿದ ಘಟನೆ ನಡೆದಿದೆ.

ನರ್ಸ್ ಲಿಜಿ ಎಂ ಅಲೆಕ್ಸ್ 28 ವರ್ಷದ ರಾಜೀವ್ ಎಂಬಾತನಿಗೆ ಸಿಪಿಆರ್ ಚಿಕಿತ್ಸೆ ನೀಡಿದ್ದಾರೆ. ಕೊಟ್ಟಾಯಂ ನ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಲಿಜಿ ಕರ್ತವ್ಯ ಮುಗಿಸಿ ಕೊಲ್ಲಂ ನಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಬಸ್ ನಲ್ಲಿ ರಾತ್ರಿ 8 ಗಂಟೆ ವೇಳೆಗೆ ಬಸ್ ಪರಕ್ಕುಲಂ ಗೆ ತಲುಪುತ್ತಿದ್ದಂತೆಯೇ ವ್ಯಕ್ತಿಯೋರ್ವ ಕುಸಿದು ಬಿದ್ದಿದ್ದ. ಕಂಡಕ್ಟರ್ ಪ್ರಯಾಣಿಕರಲ್ಲಿ ನೀರು ಕೇಳುತ್ತಿದ್ದರು. ಆದರೆ ಯಾರ ಬಳಿಯೂ ನೀರಿರಲಿಲ್ಲ. ತಕ್ಷಣವೇ ಧಾವಿಸಿದ ನರ್ಸ್ ಲಿಜಿ, ಆತನ ನಾಡಿ ಪರೀಕ್ಷಿಸಿದರು. ತಕ್ಷಣವೇ ಸಿಪಿಆರ್ ಚಿಕಿತ್ಸೆ ನೀಡಲು ಪ್ರಾರಂಭಿಸಿದರು.

ಕುಸಿದುಬಿದ್ದಿದ್ದ ವ್ಯಕ್ತಿಗೆ ಹೃದಯಸ್ತಂಭನ ಉಂಟಾಗಿತ್ತು. ಉಳಿದಿದ್ದ ಆಯ್ಕೆ ಸಿಪಿಆರ್ ಒಂದೇ ಆಗಿತ್ತು. ಬಸ್ ಸ್ಥಳೀಯ ಆಸ್ಪತ್ರೆಗೆ ತಲುಪುವವರೆಗೂ ನರ್ಸ್ ಸಿಪಿಆರ್ ಚಿಕಿತ್ಸೆಯನ್ನು ಮುಂದುವರೆಸಿದ್ದರು. ಆ ನಂತರ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ಪ್ರಾರಂಭಿಸಿದರು ವ್ಯಕ್ತಿಯ ನಾಡಿ ಮರಳಿ ಬಂದಿತ್ತು ಎಂದು ಘಟನೆಯನ್ನು ನರ್ಸ್ ವಿವರಿಸಿದ್ದಾರೆ.
ಅದಲ್ಲದೆ ನಾನು ಆ ಕ್ಷಣಕ್ಕೆ ಅಗತ್ಯವಿದ್ದಿದ್ದನ್ನು ಮಾಡಿದೆ. ಆಸ್ಪತ್ರೆಯ ಹೊರಗೆ ಇಂತಹ ಘಟನೆಗಳನ್ನು ನಾನು ಕಂಡಿರಲಿಲ್ಲ ಇದೇ ಮೊದಲು ಎನ್ನುತ್ತಾರೆ ಲಿಜಿ.

ನರ್ಸ್ ನ ಈ ಸಮಯಪ್ರಜ್ಞೆಯಿಂದ ಯುವಕನ ಪ್ರಾಣ ಉಳಿದಿದ್ದು, ಬಸ್ ನಲ್ಲಿದ್ದ ಸಹಪ್ರಯಾಣಿಕರಿಂದ ನರ್ಸ್ ನ ಈ ಕಾರ್ಯಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.

Leave A Reply

Your email address will not be published.