ಬೆಂಗಳೂರು : ಬರೋಬ್ಬರಿ 12 ವರ್ಷಗಳ ಬಳಿಕ ಖತರ್ನಾಕ್ ಕಳ್ಳರ ಬಂಧನ : ಇವರ ಕಳ್ಳತನದ ಸ್ಟೋರಿಯೇ ಇಂಟ್ರೆಸ್ಟಿಂಗ್

ಬೆಂಗಳೂರು : ಮಕ್ಕಳನ್ನು ಶಾಲೆಗೆ ಬಿಡಲು ಹಾಗೂ ಕರೆತರಲು ಬೀಗ ಹಾಕಿಕೊಂಡು ಹೋಗುವ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಖದೀಮರ ಗ್ಯಾಂಗ್ 12 ವರ್ಷಗಳ ಬಳಿಕ ದೇವರಜೀವನಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದೆ.

ಕಳ್ಳತನ ಮಾಡಿದರೂ ಸಣ್ಣ ಸುಳಿವೂ ನೀಡದೆ 12 ವರ್ಷಗಳಿಂದಲೂ ಚಾಕಚಕ್ಯತೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಖತರ್ ನಾಕ್ ಕಳ್ಳರಾದ ಮುರಳಿ, ಶಿವರಾಂ ಹಾಗೂ ಸಿರಾಜ್ ಎಂಬ ಮೂವರನ್ನು ಬಂಧಿಸಿ 11 ಲಕ್ಷ ಮೌಲ್ಯದ 240 ಗ್ರಾಂ ಮೌಲ್ಯದ ಚಿನ್ನ ಹಾಗೂ ಏಳು ಲಕ್ಷ ರೂಪಾಯಿ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌.

ಕಾವಲ್ ಬೈರಸಂದ್ರ ನಿವಾಸಿಯಾಗಿರುವ ಮುರಳಿ ಅಲಿಯಾಸ್ ಪ್ರಾಜೆಕ್ಟ್ 7 ನೇ ತರಗತಿ ವ್ಯಾಸಂಗ ಮಾಡಿದ್ದರೂ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಿಕೊಂಡು ಓಡಾಡುತ್ತಿದ್ದ. 2011 ರಿಂದಲೂ ನಡೆದ ಮನೆಗಳ್ಳತನ ಕೃತ್ಯಗಳಿಗೆ ಮಾಸ್ಟರ್ ಮೈಂಡ್ ಆಗಿ ಗುರುತಿಸಿಕೊಂಡಿದ್ದ.

ಬೆಳಿಗ್ಗೆ ಹಾಗೂ ಸಂಜೆ ವೇಳೆ ಮಕ್ಕಳನ್ನು ಶಾಲೆಗೆ ಬಿಡಲು ಹೋಗುವ ಅವಧಿಯಲ್ಲಿ ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್. ಸಾಮಾನ್ಯವಾಗಿ ಮಕ್ಕಳ ಜೊತೆ ಹೋಗುವಾಗ ಮಹಿಳೆಯರು ಬೀಗದ ಕೀಯನ್ನು ಕೈಯಲ್ಲಿ ಇಟ್ಟುಕೊಳ್ಳುವ ಮಹಿಳೆಯರ ವೀಕ್ನೆಸ್ ಗಳನ್ನೇ ಬಂಡವಾಳ ಮಾಡಿಕೊಂಡಿದ್ದ ಈ ಕಳ್ಳರು ದೂರದಿಂದಲೇ ಬೀಗದ ಕೀ ಸೈಜಿನ ಗಾತ್ರವನ್ನು ಕಣ್ಣಿನಲ್ಲೇ ಅಳತೆ ಮಾಡುತ್ತಿದ್ದರು.

ಈ ಕಿಲಾಡಿ ಖದೀಮರು ಮನೆಯಲ್ಲೇ ಬೀಗದ ಕೀ ತಯಾರಿಸುತ್ತಿದ್ದರು. ಅದಕ್ಕಾಗಿ ಬೀಗ ತಯಾರಕರ ಬಳಿ ಬೀಗದ ಕೀ ಮಾಡುವುದು ಹೇಗೆಂದು ನೋಡಿ ಕಲಿತಿದ್ದರು. ಕಳ್ಳತನ ಮಾಡುವ ಮನೆಯ ಕೀಯನ್ನು ನಾಲ್ಕೈದು ಮಾದರಿಯಲ್ಲಿ ನಕಲಿ ಕೀ ಮಾಡಿ ನಂತರ ಟಾರ್ಗೆಟ್ ಮಾಡಿಕೊಂಡ ಮನೆಗಳಿಗೆ ಹೋಗಿ ಡೋರ್ ಲಾಕ್ ಓಪ‌ನ್ ಮಾಡಿ ಸುಲಭವಾಗಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದರು.

ಈ ಕಳ್ಳರು ಆಧಾರ್ ಕಾರ್ಡ್ ಮಾಡಿಸಬೇಕಾದರೆ ಫಿಂಗರ್‌ ಪ್ರಿಂಟ್ ನೀಡಬೇಕು. ಅದಕ್ಕಾಗಿ ಯಾವುದೇ ಕಾರಣಕ್ಕೂ ಪೊಲೀಸರಿಗೆ ಸಿಗಬಾರದೆಂದು ಆಧಾರ್ ಕಾರ್ಡ್ ಕೂಡಾ ಮಾಡಿಸಿರಲಿಲ್ಲ. ಒಂದು ವೇಳೆ ಬೆರಳಚ್ಚು ನೀಡಿದರೆ ಪೊಲೀಸರು ತನಿಖೆ ನಡೆಸಿ ಬಂಧಿಸುತ್ತಾರೆಂದು ಭೀತಿಯಿಂದ ಆಧಾರ್ ಕಾರ್ಡ್ ಮಾಡಿಸಿರಲಿಲ್ಲ. ಹಾಗಾಗಿ ಕಳ್ಳತನ ಮಾಡಿಕೊಂಡು, ಪೊಲೀಸರಿಗೂ ಸಿಗದೆ ತಪ್ಪಿಸಿಕೊಳ್ಳುತ್ತಿದ್ದರು.

ಕಳ್ಳತನ ಕೃತ್ಯಕ್ಕೆ ಪ್ರಾಜೆಕ್ಟ್ ಎಂದು ಕೋಡ್ ವರ್ಡ್ ಬಳಸುತ್ತಿದ್ದರು. ಕದ್ದ ಚಿನ್ನಾಭರಣಗಳನ್ನು ಪರಿಚಯಸ್ಥ ಜ್ಯುವೆಲ್ಲರಿ ಶಾಪ್ ಗಳಿಗೆ ಮಾರಾಟ ಮಾಡಿ, ಮೋಜಿನ ಜೀವನ ನಡೆಸುತ್ತಿದ್ದರು‌.

Leave A Reply

Your email address will not be published.