ಕೇವಲ 40 ಪೈಸೆಗಾಗಿ ಹೈಕೋರ್ಟ್ ನಲ್ಲಿ ಸಮರ ಹೂಡಿದ ವಕೀಲ್ ಸಾಬ್ !!|ಬಿರಿಯಾನಿ ಬೆಲೆ 40 ಪೈಸೆ ಜಾಸ್ತಿ ತಗೊಂಡ್ರೆಂದು ಎಂಪೈರ್ ಹೋಟೆಲ್ ಮೇಲೆ ದಾವೆ

ಬೆಂಗಳೂರು : ಸಾಮಾಜಿಕ ಕಾಳಜಿಗೆ, ಮಾನವ ಹಕ್ಕುಗಳ ರಕ್ಷಣೆಗೆ ತನ್ನ ಸೇವೆ ಸೀಮಿತಗೊಳಿಸಿರುವ ವಕೀಲ, ಸಾಮಾಜಿಕ‌ ಕಾರ್ಯಕರ್ತ ನರಸಿಂಹಮೂರ್ತಿ ಅವರು ಎಂಪೈರ್ ಹೋಟೆಲ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಒಂದು ಬಿರಿಯಾನಿಗೆ ಹೆಚ್ಚುವರಿ 40 ಪೈಸೆ ಪಡೆದ ಎಂಪೈರ್ ಹೋಟೆಲ್ ವಿರುದ್ಧ ಗ್ರಾಹಕ ವೇದಿಕೆಯ ಮೆಟ್ಟಿಲೇರಿದ್ದಾರೆ ಇವರು.

ಮೇಲ್ನೋಟಕ್ಕೆ ಛೇ, ಏನಿದು ನಲವತ್ತು ಪೈಸೆಗೆ ಇಷ್ಟೆಲ್ಲಾ ಮಾಡಬೇಕಾ ಅಂತ ಅನಿಸಬಹುದು ನಿಮಗೆ. ಆದರೆ ಇದು ಅಚ್ಚರಿಯಾದರೂ ಸತ್ಯ.

ಘಟನೆ ವಿವರ : ಎಂ ಜಿ ರಸ್ತೆಯಲ್ಲಿರುವ ಎಂಪೈರ್ ಹೋಟೆಲ್ ಗೆ ವಕೀಲ ನರಸಿಂಹ ಮೂರ್ತಿ ಹೋಗಿದ್ದಾರೆ. ಅಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ನಂತರ ಬಿರಿಯಾನಿ ಬಿಲ್ ಜಿಎಸ್ ಟಿ ಒಳಗೊಂಡಂತೆ 264.60 ರೂ‌. ಆಗಿದೆ. ಬಿಲ್ ಪಾವತಿ ಮಾಡಿದಾಗ ಎಂಪೈರ್ ಹೋಟೆಲ್ ನವರು 265 ರೌಂಡ್ ಫಿಗರ್ ಮಾಡಿ ಹೆಚ್ಚುವರಿ 40 ಪೈಸೆ ಪಡೆದಿದ್ದಾರೆ. ಇದನ್ನು ಪ್ರಶ್ನಿಸಿದ ನರಸಿಂಹ ಮೂರ್ತಿ, ನೀವು ನನ್ನಿಂದ ಯಾಕೆ 40 ಪೈಸೆ ಹೆಚ್ಚುವರಿ ತೆಗೆದುಕೊಂಡಿದ್ದೀರಾ ? ನನ್ನ ಬಾಕಿ 40 ಪೈಸೆ ವಾಪಸು ಕೊಡಿ, ನನಗೆ ಮಾತ್ರವಲ್ಲ‌. ಎಲ್ಲಾ ಗ್ರಾಹಕರಿಗೂ ನೀವು ಕೊಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಕ್ಯಾರೆ ಎನ್ನದೇ ಎಂಪೈರ್ ಆಡಳಿತ ಮಂಡಳಿ ಸುಮ್ಮನಾಗಿದ್ದಾರೆ.

ಬಿಲ್ ಸಮೇತ ವಕೀಲ ನರಸಿಂಹ ಮೂರ್ತಿ ಗ್ರಾಹಕ ವೇದಿಕೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಹೆಚ್ಚುವರಿಯಾಗಿ ಪಡೆದ ನನ್ನ ಹಣ ವಾಪಾಸು ಕೊಡಿಸಿ, ಕಳೆದ ಮೂರು ತಿಂಗಳಿನಿಂದ ಹೆಚ್ಚುವರಿಯಾಗಿ ಸಂಗ್ರಹಿಸಿರುವ ಹಣವನ್ನು ಕರ್ನಾಟಕ ಸರಕಾರದ ಖಜಾನೆಗೆ ಹದಿನೈದು ದಿನದಲ್ಲಿ ಡಿಪಾಸಿಟ್ ಮಾಡಬೇಕು ಎಂಬ ವಾದವನ್ನು ಮುಂದಿಟ್ಟಿದ್ದಾರೆ.

ಇದಕ್ಕೆ ಎಂಪೈರ್ ಹೋಟೆಲ್ ಆರ್ ಬಿಐ ಮಾರ್ಗಸೂಚಿ ಅನ್ವಯ 40 ಪೈಸೆ ಪಡೆದಿದ್ದೇವೆ. ಇದರಲ್ಲಿ ಹೆಚ್ಚುವರಿ ಪ್ರಶ್ನೆ ಇಲ್ಲ ಎಂದು ವಾದ ಮಂಡಿಸಿದೆ.

ಇದಕ್ಕೆ ಪ್ರತಿಯಾಗಿ ನರಸಿಂಹ ಮೂರ್ತಿ, ನಾನು ಹೋಟೆಲ್ ಗೆ ಹೋಗಿದ್ದೇನೆ. ಅಲ್ಲಿ ಹೋಟೆಲ್ ನಡೆಸುವ ಎಲ್ಲಾ ಪರವಾನಗಿ ಅಂಟಿಸಿದ್ದಾರೆ. ಆದರೆ ಆರ್ ಬಿಐ ಮಾರ್ಗಸೂಚಿ ಪ್ರಕಟಿಸಿಲ್ಲ. ಹೀಗಾಗಿ ಹೆಚ್ಚುವರಿಯಾಗಿ ಗ್ರಾಹಕರಿಂದ ಪಡೆಯಲು ಅರ್ಹರಲ್ಲ, ನನಗೆ ನ್ಯಾಯ ಕೊಡಿ ಎಂದು ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಈ ವಾದ ವಿವಾದ ಇನ್ನು ಎಲ್ಲಿಗೆ ಬರುತ್ತೆ ಅನ್ನೋದನ್ನು ನೋಡಬೇಕು.

ಈ ಹಿಂದೆ ಚಹಾಗೆ ಒಂದು ರೂಪಾಯಿ‌ ಹೆಚ್ಚುವರಿ ಪಡೆದಿದ್ದ ಅಡಿಗಾಸ್ ಹೋಟೆಲ್ ಮೇಲೆ ನರಸಿಂಹ ಮೂರ್ತಿ ಇದೇ ರೀತಿಯ ಕೇಸು ದಾಖಲಿಸಿದ್ದರು. ಇದರಲ್ಲಿ ಅಡಿಗಾಸ್ ಗೆ ಮುಖಭಂಗವಾಗಿತ್ತು. ಹೆಚ್ಚುವರಿ ಒಂದು ರೂ. ಪಡೆದ ಅಡಿಗಾಸ್ ವಿರುದ್ಧ ಹೆಚ್ಚುವರಿ ಪಡೆದ ಹೆಚ್ಚುವರಿ ಒಂದು ರೂ. ಜೊತೆಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿ ಆ ದಂಡದ ಮೊತ್ತವನ್ನು ವಕೀಲರಾದ ‌ನರಸಿಂಹಮೂರ್ತಿಗೆ ನೀಡಲು ನ್ಯಾಯಾಲಯ ಆದೇಶಿಸಿತ್ತು.

ಇನ್ನು ಈ ಎಂಪೈರ್ ಹೋಟೆಲ್ ವಿರುದ್ಧದ 40 ಪೈಸೆ ಸಮರ ಎಲ್ಲಿಗೆ ಬಂದು ನಿಲ್ಲುತ್ತೋ‌ ಕಾದು ನೋಡಬೇಕು.

Leave A Reply