ಮೌಲ್ಯಯುತ ನಿರೂಪಣೆಗೆ ಖ್ಯಾತರಾದ ಸರಿತಾ ಶೆಟ್ಟಿ ಪೆರ್ಡೂರು

          ಇಂದು ಎಲ್ಲಿ ನೋಡಿದರಲ್ಲಿ ಸಭೆ, ಸಮಾರಂಭಗಳ ಭರಾಟೆ. ನಾಮಕರಣ, ಹುಟ್ಟು ಹಬ್ಬ, ವಿವಾಹ ನಿಶ್ಚಿತಾರ್ಥ, ಮೆಹಂದಿ, ಸಂಗೀತ್, ಆರತಕ್ಷತೆ, ಅಭಿನಂದನ ಸಭೆ, ಕೃತಿ ಲೋಕಾರ್ಪಣೆ, ನವ ಕಾರ್ಯಾಲಯಗಳ ಉದ್ಘಾಟನೆ, ಸಂಘ ಸಂಸ್ಥೆ, ಶಾಲಾ ಕಾಲೇಜುಗಳ ವಾರ್ಷಿಕೋತ್ಸವ, ದಶಮಾನೋತ್ಸವ, ರಜತ ಮಹೋತ್ಸವ, ಸುವರ್ಣ ಮಹೋತ್ಸವ, ಅಮೃತ ಮಹೋತ್ಸವ, ಗುರುವಂದನೆ, ದೇವಾಲಯಗಳ ಧಾರ್ಮಿಕ ಸಭೆಗಳು ಹೀಗೆ ಯಾದಿ ಬೆಳೆಯುತ್ತ ಹೋಗುತ್ತದೆ. ದೂರದರ್ಶನ ವಾಹಿನಿಗಳಲ್ಲಿ ನೂರಾರು ರಿಯಾಲಿಟಿ ಶೋಗಳ ಕಾಲವಿದು. ಹಾಸ್ಯ, ಸಂಗೀತ, ನೃತ್ಯ, ಪ್ರತಿಭಾ ಪ್ರದರ್ಶನ ಇತ್ಯಾದಿಗಳು. ಭಾನುಲಿಗಳಲ್ಲಿ ನಾಟಕ, ಪ್ರಹಸನ ಇತ್ಯಾದಿ. ಈ ಎಲ್ಲ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುವಲ್ಲಿ ನಿರೂಪಕರ ಪಾತ್ರ ಅತ್ಯಂತ ಮಹತ್ವದಾಗಿರುತ್ತದೆ. ಬಹಳ ಹಿಂದೆ ಈ ನಿರೂಪಣಾ ಕಾರ್ಯವನ್ನು ಸಭಾಧ್ಯಕ್ಷರೇ ಮಾಡುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ನಿರೂಪಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ಮತ್ತು ನಿರೂಪಕರಿಗೆ ಮಹತ್ವದ ಪಾತ್ರ ಹಾಗೂ ಸ್ಥಾನವನ್ನು ನೀಡಲಾಗುತ್ತದೆ. ನಿರೂಪಕ ಸಭೆಯ ಮತ್ತು ಪ್ರೇಕ್ಷಕರ ನಡುವಿನ ಸೇತುವಾಗಿ ಕಾರ್ಯ ನಿರ್ವಹಿಸುತ್ತಾನೆ. 

     "ನಿರೂಪಣೆ ಎಂದರೆ ಕಾರ್ಯಕ್ರಮದ ಜೀವಾಳ, ಜೀವನಾಡಿ. ಇಲ್ಲಿ ಮಾತು ಮಲ್ಲಿಗೆಯಾದರೆ ನಿರೂಪಕ ಮಲ್ಲಿಗೆಯನ್ನು ಹಾರಕ್ಕೆ ಪೋಣಿಸುವ ದಾರ." ಎಂದು ವ್ಯಾಖ್ಯಾನಿಸುತ್ತಾರೆ ಕನ್ನಡದ ಶ್ರೇಷ್ಠ ನಿರೂಪಕರಲ್ಲಿ ಒಬ್ಬರಾದ ಶ್ರೀ ಜಯಪ್ರಕಾಶ್ ನಾಗತಿಹಳ್ಳಿಯವರು. ಆಂಗ್ಲ ಭಾಷೆಯಲ್ಲಿ ನಿರೂಪಕರಿಗೆ 'Anchor' ಎಂದು ಕರೆಯುತ್ತಾರೆ. ಆ್ಯಂಕರ್ ಎಂದರೆ 'ಲಂಗರು' ಎಂದರ್ಥ. ಬೃಹತ್ತಾದ ಹಡಗನ್ನು ಕ್ರಮಬದ್ಧವಾಗಿ ನಿಲ್ಲಿಸಲು ಉಪಯೋಗಿಸುವ ಸಾಧನ ಲಂಗರು. ಎಂದರೆ ಅತಿಥಿ ಅಭ್ಯಾಗತರು ಸಮಯ ಪ್ರಜ್ಞೆ ಮರೆತರೆ ನಿಲುಗಡೆಯ ವ್ಯವಸ್ಥೆ ಮಾಡುವವನು ನಿರೂಪಕ.  ಯಾವುದೇ ಕಾರ್ಯಕ್ರಮಗಳನ್ನು ಹೀಗೆಯೇ ನಿರೂಪಿಸಬೇಕೆಂಬ ಸಿದ್ಧ ಮಾದರಿಗಳು ಇಲ್ಲದಿದ್ದರೂ ನಿರೂಪಕರು ಕೆಲವೊಂದು ಸರಳ ಮಾದರಿಗಳನ್ನು ಅಳವಡಿಸಿಕೊಂಡರೆ ಯಶಸ್ವಿ ನಿರೂಪಣೆಯ ದೃಷ್ಟಿಯಲ್ಲಿ ಉತ್ತಮ. ಕಾರ್ಯಕ್ರಮವನ್ನು ಚಿಕ್ಕದಾಗಿ, ಚೊಕ್ಕದಾಗಿ, ಕುತೂಹಲಕರವಾಗಿ, ಸುಸೂತ್ರವಾಗಿ, ರಸಭರಿತವಾಗಿ, ಜವಾಬ್ದಾರಿಯುತವಾಗಿ ನಿರ್ವಹಿಸಬಲ್ಲ ನಿರೂಪಕರು ಕಾರ್ಯಕ್ರಮ ಸಂಘಟಕರ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುವುದನ್ನು ನಾವು ಕಾಣುತ್ತೇವೆ. ಹೀಗೆ ಸಂಘಟಕರ, ಪ್ರೇಕ್ಷಕರ ಹಾಗೂ ಪ್ರಯೋಜಕರ ಮೆಚ್ಚುಗೆಗೆ ಪಾತ್ರರಾದವರು ಪೆರ್ಡೂರಿನ VJ ಸರಿತಾ ಶೆಟ್ಟಿ ಅವರು.

          ಉಡುಪಿಯ ಮುಕ್ತ ವಾಹಿನಿಯಲ್ಲಿ ನಿರೂಪಕಿಯಾಗಿ ವೃತ್ತಿ ನಿರತ ಸರಿತಾ ಅವರು ಮೂಲತಃ ಪೆರ್ಡೂರಿನ ಶ್ರೀಮತಿ ವಿನೋದ ಶೆಟ್ಟಿ ಹಾಗೂ ಶೇಖರ್ ಶೆಟ್ಟಿ ದಂಪತಿಗಳ ಮೂರು ಹೆಣ್ಮಕ್ಕಳಲ್ಲಿ ಎರಡನೆಯವರು. ಸರಿತಾ ಅವರು ತಮ್ಮ  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬಾಳೆಬೈಲು ಮತ್ತು ಕುಕ್ಕೆಹಳ್ಳಿಯಲ್ಲಿ ಮಾಡಿದವರು. ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಹಿರಿಯಡ್ಕ ಸರಕಾರಿ ಕಾಲೇಜಿನಿಂದ ಪಡೆದವರು. ಬಾಲ್ಯದಿಂದಲೂ ತಾನು ನಿರೂಪಕಿ ಆಗಬೇಕೆಂದು ಬಯಸಿದ್ದ ಸರಿತಾ ಅವರು ತನ್ನ ಪಾಲಿಗೆ ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡವರು. ಪದವಿ ಶಿಕ್ಷಣದ ನಂತರ 'ಕರಾವಳಿ ಕನ್ನಡ' ದೂರ ದರ್ಶನವಾಹಿನಿಯಲ್ಲಿ ನಿರೂಪಕಿಯಾಗಿ ಪ್ರಥಮ ವೃತ್ತಿ ಅನುಭವ ಪಡೆದರು. ಅನಂತರ ಸೂರಜ್ ಶೆಟ್ಟಿ ನಿರ್ದೇಶನದ, ರೂಪೇಶ್ ಶೆಟ್ಟಿ, ಪೂಜ ಶೆಟ್ಟಿ ತಾರಾಗಣದಲ್ಲಿರುವ 'ಅಮ್ಮೆರ್ ಪೋಲೀಸ್' ಎಂಬ ತುಳು ಚಲನಚಿತ್ರದಲ್ಲಿ ನಟಿಸಿದರು. ಕಲ್ಹರ್ಸ್ ಸೂಪರ್ ದೂರದರ್ಶನ ವಾಹಿನಿಯಲ್ಲಿ ಪ್ರಸಾರಗೊಂಡಿದ್ದ 'ನಾಗಕನ್ನಿಕೆ' ಕನ್ನಡ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ತುಳುವಿನಲ್ಲಿ ಒಂದು ಅಲ್ಬಂ ಸಾಂಗಿಗೆ ನಟಿಸಿದ್ದಾರೆ. 

         ಸರಿತಾ ಶೆಟ್ಟಿ ಅವರು ಉತ್ತಮ ರಂಗಕಲಾವಿದೆ. ಈವರೆಗೆ ಸುಮಾರು ನೂರಿಪ್ಪತ್ತು ನಾಟಕಗಳಲ್ಲಿ ಅಭಿನಯಿಸಿದ ಅನುಭವಿ ರಂಗಕಲಾವಿದೆ. ರಂಗ ನಿರ್ದೇಶಕ ಶ್ರೀ ಸತೀಶ್ ಆಚಾರ್ಯ ಅವರ ನಿರ್ದೇಶನದಲ್ಲಿ ಮೊದಲು ಅಭಿನಯಿಸಿದ ಸರಿತಾ ನಂತರ ಹಲವು ವರ್ಷಗಳ ಪರ್ಯಂತ ಸತತವಾಗಿ ಹಲವು ನಿರ್ದೇಶಕರ ನಿರ್ದೇಶನದಲ್ಲಿ ರಂಗದಲ್ಲಿ ನಟಿಸಿದ್ದಾರೆ. ಯಾವಾಗ ಮುಕ್ತ ವಾಹಿನಿಯಲ್ಲಿ ವೃತ್ತಿ ನಿರತರಾದರೋ ಅಂದಿನಿಂದ ಸಭಾ ಕಾರ್ಯಕ್ರಮಗಳ ನಿರೂಪಕಿಯಾಗುವ ಕನಸಿಗೆ ಮುಕ್ತ ವೇದಿಕೆ ಸಿಕ್ಕಂತಾಯಿತು. ಕಾರ್ಯಕ್ರಮ ನಿರೂಪಣೆಗೆ ಅವಕಾಶಗಳು ಹೆಚ್ಚಾದಂತೆ ನಾಟಕ ರಂಗದಿಂದ ದೂರವಾಗಬೇಕಾಯಿತು. ನಿರೂಪಣಾ ಕಲೆಯನ್ನು ಕರಗತಗೊಳಿಸುತ್ತ ಹಂತ ಹಂತವಾಗಿ ಮೇಲೆರುತ್ತ ಬಂದ ಸರಿತಾ ಅವರು ಮುನ್ನೂರಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ, ಭಟ್ಕಳ, ಬೈಂದೂರು ಎಲ್ಲ ಕಡೆ ಬೇಡಿಕೆಯ ನಿರೂಪಕಿಯಾಗಿದ್ದಾರೆ. 

   ಮಾತನಾಡುವುದು ಒಂದು ಕಲೆ. ಎಲ್ಲರಿಗೂ ಅದು ಸಿದ್ಧಿಸುವುದಿಲ್ಲ. ನಿರೂಪಣೆ ಅಥವಾ ಕಾರ್ಯಕ್ರಮ ಸಂಯೋಜನೆ ಮಾಡುವವರಿಗೆ ಮಾತೇ ಬಂಡವಾಳ. ಸ್ವಾಧ್ಯಾಯನದೊಂದಿಗೆ ವಾಕ್ಚತುರ್ಯವನ್ನು ಬಂಡವಾಳ ಮಾಡಿಕೊಂಡು ಬದುಕು ಕಟ್ಟಿಕೊಂಡವರನ್ನು ಇಂದು ನಾವು ಬಹಳಷ್ಟು ಜನರನ್ನು ನಾವು ಕಾಣುತ್ತೇವೆ. ಒಂದು ಕಾರ್ಯಕ್ರಮದ ವ್ಯವಸ್ಥಿತವಾಗಿ ಮೂಡಿ ಬರುವಲ್ಲಿ ನಿರೂಪಕರ ಪಾತ್ರ ಮುಖ್ಯವಾಗಿರತ್ತದೆ. ಇಲ್ಲಿ ವ್ಯಕ್ತಿತ್ವದಷ್ಟೇ ಮುಖ್ಯವಾಗಿರುವುದು ಸರಳವಾದ ಭಾಷೆ, ಸ್ಪಷ್ಟವಾದ ಉಚ್ಚಾರ, ಎಲ್ಲರನ್ನೂ ಸೆಳೆಯಬಲ್ಲ ಕಂಠ ಶೈಲಿ, ಪ್ರೇಕ್ಷಕರನ್ನು ಹಿಡಿದಿಡಬಲ್ಲ ಚಾತುರ್ಯ, ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ, ಸಮಯಕ್ಕೆ ಮುಂಚೆ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಿರುವುದು ನಿರೂಪಕರಿಗೆ ಅತ್ಯಗತ್ಯವಾಗಿರುತ್ತದೆ. ಸರಿತಾ ಅವರು ಕಾರ್ಯಕ್ರಮದಿಂದ ಕಾರ್ಯಕ್ರಮಕ್ಕೆ ತಮ್ಮ ಕಲಿಕೆಯಿಂದ ಕರಗತ ಮಾಡಿಕೊಂಡು ಸೊಗಸಾಗಿ ಹಾಗೂ ಮೌಲ್ಯಯುತವಾಗಿ ಕಾರ್ಯಕ್ರಮಗಳನ್ನು ಸಂಯೋಜಿಸುತ್ತ ಖ್ಯಾತರಾಗುತ್ತಿರುವುದು ಅಭಿನಂಧನೀಯವಾಗಿದೆ. 

ಲೇಖನ : ಉದಯ ಶೆಟ್ಟಿ, ಪಂಜಿಮಾರು.

Leave A Reply

Your email address will not be published.