ವಿಶ್ವದ ಹಾಟೆಸ್ಟ್ ಡ್ರೆಸ್ ಆದ ಸೀರೆ ಈಗ ಮ್ಯಾಚ್ ಬಾಕ್ಸ್ ನಲ್ಲಿ ಕೂಡ ಲಭ್ಯ| ಬೆಂಕಿಪೊಟ್ಟಣದೊಳಗೆ ಸೀರೆ ಅಡಗಿಸಿ ಪಾಕೆಟ್ ನಲ್ಲಿ ಇರಿಸಿಕೊಂಡು ಆಕೆಗೆ ಗಿಫ್ಟ್ ಕೊಡಲು ಇದಕ್ಕಿಂತ ಒಳ್ಳೆಯ ಗಿಫ್ಟ್ ಬೇರೆ ಬೇಕಾ ??

ಹೈದರಾಬಾದ್ : ಇದು ಜಗತ್ತಿನ ಹಾಟೆಸ್ಟ್ ಸೀರೆ. ಯಾಕಂದರೆ ಇದನ್ನು ಮ್ಯಾಚ್ ಬಾಕ್ಸ್ ನಲ್ಲಿ ಇಟ್ಟುಕೊಂಡು ಸಾಗಬಹುದು. ಇದು ಮ್ಯಾಚಿಂಗ್ ಸೀರೆ ಆಗುತ್ತೋ ಇಲ್ಲವೋ ಗೊತ್ತಿಲ್ಲ: ಆದ್ರೆ ವಿಶ್ವದ ಹಾಟೆಸ್ಟ್ ಡ್ರೆಸ್ ಆಗಿರುವ ಸೀರೆ ಈಗ ಬೆಂಕಿಪೊಟ್ಟಣದೊಳಗೆ ಇಟ್ಟುಕೊಳ್ಳಬಹುದಾದಂತಹ ರೀತಿಯಲ್ಲಿ ತಯಾರಾಗಿದೆ.

ಮಹಿಳೆಯರೇ, ಇನ್ನು ಮುಂದೆ ಆತನ ಜೇಬಿನಲ್ಲಿ ಬೆಂಕಿ ಪೊಟ್ಟಣ ಕಂಡು ಬಂದ ತಕ್ಷಣ, ‘ ಏನೂ ಬೀಡಿ, ಸಿಗರೇಟ್ ಸೇಡ್ತೀಯ ‘ ಅಂತ ಉರಿದು ಬಿದ್ದು ಕೇಳುವ ಮುನ್ನ, ಮೆಲ್ಲಗೆ ಬೆಂಕಿ ಪೊಟ್ಟಣ ತೆರೆದು ನೋಡಿ. ಯಾರಿಗ್ಗೊತ್ತು : ಆತ ನಿಮಗಾಗಿ ಮ್ಯಾಚ್ ಬಾಕ್ಸ್ ನ ಒಳಗೆ ಕಲರ್ ಕಲರಿನ, ಫ್ಲವರ್ ಫ್ಲವರ್ ನ ಮ್ಯಾಚಿಂಗ್ ಸೀರೆ ಗಿಫ್ಟ್ ತಂದಿರಬಹುದು. ಯಾವುದಕ್ಕೂ ಸಮಾಧಾನದಿಂದ ಮ್ಯಾಚ್ ಬಾಕ್ಸ್ ಪರಿಶೀಲಿಸಿ.

ಸೀರೆಯ ಮೋಹದ ಮಾನಿನಿಯರ ಮನಗೆಲ್ಲಲು ತೆಲಂಗಾಣದ ಕೈ ಮಗ್ಗ ನೇಕಾರರೊಬ್ಬರು ಈ ಹಾಟೆಸ್ಟ್ ಸೀರೆಯನ್ನು ನೇಯ್ದಿದ್ದಾರೆ. ಈ ವಿಭಿನ್ನ ಸೀರೆಯ ಫೋಟೋ ವೀಡಿಯೋಗಳು ಭಾರೀ ವೈರಲ್ ಆಗುತ್ತಿದೆ. ತೆಲಂಗಾಣದ ರಾಜಣ್ಣ ಸಿರ್ಸೆಲ್ಲಾ ಜಿಲ್ಲೆಯ ನಲ್ಲ ವಿಜಯ್ ಎಂಬ ನೇಕಾರ ಈ ವಿನೂತನ ಸೀರೆಯನ್ನು ನೇಯ್ದಿದ್ದಾರೆ.

ಮ್ಯಾಚ್ ಬಾಕ್ಸ್ ನಲ್ಲಿ ಸೀದಾ ಹೋಗಿ ಅಡಗಿ ಕೂರಬಲ್ಲ, ಕೈಯಿಂದ ನೇಯ್ದ ಈ ಸೀರೆಯನ್ನು ತಯಾರಿಸಲು ಆರು ದಿನಗಳು ಹಿಡಿದಿದೆ. ಈ ಸೀರೆಯನ್ನು ತಯಾರಿಸಲು ಯಂತ್ರವನ್ನು ಬಳಸಿದರೆ ಪ್ರಕ್ರಿಯೆಯು ಕೇವಲ ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆಯಂತೆ.

ವಿಜಯ್ ನೇಯ್ದ ಸೀರೆಯನ್ನು ಈ ಹಿಂದೆ 2017 ರಲ್ಲಿ ವಿಶ್ವ ತೆಲುಗು ಸಮ್ಮೇಳನದಲ್ಲಿ ಪ್ರದರ್ಶಿಸಲಾಗಿತ್ತು. 2015 ರಲ್ಲಿ ಭಾರತಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಪತ್ನಿ ಮಿಶೆಕ್ ಒಬಾಮಾ ಬಂದಿದ್ದಾಗ ಅವರಿಗೆ ಸೂಪರ್ ಫೈನ್ ರೇಷ್ಮೆಯಿಂದ ಮಾಡಿದ ಒಂದು ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಆಕೆಗೆ ಫ್ರಾಕ್ ನೀಡಿ ಬಿಟ್ಟು , ಸೀರೆ ಉಡಲು ಬರ್ಬೇಕಲ್ಲ. ಅದಕ್ಕೆ ಆಗ ಈ ನೇಕಾರನಿಗೆ ಜಾಸ್ತಿ ಪ್ರಚಾರ ಸಿಕ್ಕಿರಲಿಲ್ಲ.

ಕೈಯಿಂದ ನೇಯ್ದ ಈ ಸೀರೆ ಮಾತ್ರ ಮ್ಯಾಚ್ ಬಾಕ್ಸ್ ನಂತೆಯೇ ಜೇಬಿಗೆ ಬಿಸಿ ಮುಟ್ಟಿಸುತ್ತೆ. ಕಾರಣ ಅದರ ಬೆಲೆ. ಕೈಯಿಂದ ನೇಯ್ದ ಈ ಒಂದು ಸೀರೆಗೆ 12,000 ರೂಪಾಯಿ ನಿಗದಿಯಾಗಿದೆ. ಯಂತ್ರ ಬಳಸಿ ತಯಾರಿಸಿದ ಸೀರೆಗೆ 8000 ರೂ. ನಿಗದಿಪಡಿಸಲಾಗಿದೆ. ಜೊತೆಗೆ ಒಂದು ಮ್ಯಾಚ್ ಬಾಕ್ಸ್ ಫ್ರೀ ! ಯಾರಿಗುಂಟು ಯಾರಿಗಿಲ್ಲ ?!! ಸೀರೆ ನೋಡಿದಾಗ ಟ್ರಾನ್ಸ್ಪರೆಂಟ್ ಇರೋ ಹಾಗೆ ಕಾಣಿಸ್ತಿದೆ. ‘ಮೊದಲು ಅದನ್ನು ಮಲ್ಲಿಕಾ ಶೆರಾವತ್ ಉಡಲಿ. ನೋಡುವ, ಮೈ ಕಾಣದೆ ಇದ್ರೆ ನಂತರ ನಾವು ಬಳಸೋಣ ‘ ಅಂತ ಒಳಗೊಳಗೇ ಪಿಸುಮಾತಲ್ಲಿ ಮಾತಾಡ್ತಾ ಇದ್ದಾರಂತೆ ಮಲ್ಲಿಯರು.

ಈ ಪ್ರತಿಭಾವಂತ ಯುವ ನೇಕಾರರನ್ನು ಮಂಗಳವಾರ ತೆಲಂಗಾಣ ಸಚಿವರಾದ ಕೆ‌ಟಿ ರಾಮರಾವ್ , ಪಿ ಸಬಿತಾ ಇಂದ್ರ ರೆಡ್ಡಿ, ವಿ.ಶ್ರೀನಿವಾಸ್ ಗೌಡ ಮತ್ತು ಎರ್ರಾಬೆಲ್ಲಿ ದಯಾಕರ್ ರಾವ್ ಅವರು ಶ್ಲಾಘಿಸಿದರು. ಸಿರ್ಸಿಲ್ಲಾದ ಕೈ ಮಗ್ಗ ಕ್ಷೇತ್ರವು ಈಗ ಹಲವು ಬದಲಾವಣೆಗಳನ್ನು ಕಂಡಿದೆ ಎಂದು ನೇಕಾರ ವಿಜಯ್ ಸಚಿವರಿಗೆ ತಿಳಿಸಿದರು.

Leave A Reply

Your email address will not be published.