ಡಿಕೆಯು ದಾಟಲಿಲ್ಲ ಮೇಕೆಯೂ ದಾಟಲಿಲ್ಲ | ನಾಲ್ಕು ಹೆಜ್ಜೆ ನಡೆದು ಸುಸ್ತಾದ ಟಗರು|ಐದೇ ದಿನಕ್ಕೆ ನಿಂತು ಹೋದ ಮೇಕೆ ಯಾತ್ರೆ

ಬೆಂಗಳೂರು:ಕೊರೋನ ಸೋಂಕು ಹೆಚ್ಚುತ್ತಿರುವ ನಡುವೆಯೂ ಸರ್ಕಾರದ ನಿರ್ಧಾರಕ್ಕೆ ಕಿವಿ ಕೊಡದೆ ಆರಂಭಿಸಿದ್ದ ಮೇಕೆದಾಟು ಪಾದಯಾತ್ರೆಯನ್ನು ಇದೀಗ ಹೈಕಮಾಂಡ್ ಮೊಟಕುಗೊಳಿಸಲು ಸೂಚಿಸಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಾಯಕರು ಯಾತ್ರೆಗೆ ಬ್ರೇಕ್ ಹಾಕಿದ್ದಾರೆ.

ಸರ್ಕಾರದ ಆದೇಶ ಮತ್ತು ಹೈಕೋರ್ಟ್‌ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಇಂದು ರಾಮನಗರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಈ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದಿದ್ದು,ಪಾದಯಾತ್ರೆಯನ್ನು ಕೊನೆಗೊಳಿಸುವ ಬಗ್ಗೆಯೇ ಹೆಚ್ಚಿನ ನಾಯಕರು ಒಲವು ವ್ಯಕ್ತಪಡಿಸಿದ್ದರಿಂದ ಇಂದಿಗೆ ಪಾದಯಾತ್ರೆ ತಾತ್ಕಾಲಿಕವಾಗಿ ಕೊನೆಗೊಳಿಸುವ ತೀರ್ಮಾನವಾಗಿದೆ12 ದಿನಗಳ ಪಾದಯಾತ್ರಯನ್ನು 5 ದಿನಕ್ಕೆ ಮೊಟಕುಗೊಳಿಸಿದ್ದು, ಕೊರೊನಾ ಸೋಂಕು ಕಡಿಮೆಯಾದ ನಂತರ ರಾಮನಗರದಿಂದಲೇ ಮತ್ತೇ ಪಾದಯಾತ್ರೆಯನ್ನು ಪ್ರಾರಂಭಿಸಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಉದ್ದೇಶ ಜನರಿಗೆ ಮನವರಿಕೆಯಾಗಿದೆ. ನ್ಯಾಯಾಂಗವನ್ನು ನಾವು ಗೌರವಿಸಬೇಕು. ಪಾದಯಾತ್ರೆ ಪ್ರತಿಷ್ಠೆಯ ಪ್ರಶ್ನೆಯಲ್ಲ, ಪಕ್ಷದ ಬಗ್ಗೆ ಜನಾಭಿಪ್ರಾಯ ದೊಡ್ಡದು. ಜನರ ಹಿತ ಕಾಯುವುದು ನಮ್ಮ ಕರ್ತವ್ಯ. ಅರ್ಧದಲ್ಲಿ ಪಾದಯಾತ್ರೆ ನಿಲ್ಲಿಸಿದರೆ ಪ್ರತಿಷ್ಠೆಗೆ ಕೊಂಚ ಅಡ್ಡಿಯಾಗಬಹುದು. ಆದರೆ ಪಕ್ಷಕ್ಕೆ ಮುಜುಗರವಾಗುವುದನ್ನು ತಡೆಯಬಹುದು. ಜನರ ಅಭಿಪ್ರಾಯ, ನ್ಯಾಯಾಂಗದ ಸೂಚನೆಗೆ ಗೌರವ ನೀಡುವುದು ನಮ್ಮ ಕರ್ತವ್ಯ. ಹಾಗಾಗಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಕೋವಿಡ್ ಕಡಿಮೆಯಾದ ಬಳಿಕ ಮತ್ತೆ ಪ್ರಾರಂಭಿಸೋಣ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಆದರೆ ಈ ವೇಳೆ ಮೌನಕ್ಕೆ ಶರಣಾಗಿರುವ ಡಿ.ಕೆ.ಶಿವಕುಮಾರ್, ಪಾದಯಾತ್ರೆ ಮುಂದುವರೆಸುವ ಬಗ್ಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಪಾದಯಾತ್ರೆಗೆ ಯು.ಟಿ.ಖಾದರ್ ಸೇರಿದಂತೆ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದರೆ ಇನ್ನು ಕೆಲ ನಾಯಕರು ಕೋವಿಡ್ ನಿಯಮ ಪಾಲಿಸಿಕೊಂಡು ಕೆಲವರು ಮಾತ್ರ ಪಾದಯಾತ್ರೆ ಮುಂದುವರೆಸೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಪ್ರತಿಭಟನೆ ಮುಂದುವರಿಸಬೇಕೇ? ಬೇಡವೇ ಎಂಬುದರ ಬಗ್ಗೆ ಕಾಂಗ್ರೆಸ್‌ನಲ್ಲೇ ಗೊಂದಲ ಇತ್ತು. ಕೆಲ ನಾಯಕರು ಕೋವಿಡ್‌ ಇರುವ ಕಾರಣ ಸ್ಥಗಿತ ಮಾಡುವುದು ಉತ್ತಮ ಎಂದು ಸಲಹೆ ನೀಡಿದರೆ ಕೆಲ ನಾಯಕರು ಮುಂದುವರಿಸುವುದು ಉತ್ತಮ ಎಂದಿದ್ದರು.ರೈತರ ಹೋರಾಟದ ವಿಚಾರದಲ್ಲಿ ಪ್ರತಿಭಟಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ ಈ ವಿಚಾರವನ್ನು ಕೋರ್ಟ್‌ನಲ್ಲಿ ಪ್ರಸ್ತಾಪ ಮಾಡಿ ಪ್ರತಿಭಟನೆಯನ್ನು ಮುಂದುವರಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಒಟ್ಟಾರೆ ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಾಯಕರು ಆರಂಭಿಸಿದ್ದ ಬೃಹತ್ ಪಾದಯಾತ್ರೆ ಕೋವಿಡ್ ಕಾರಣದಿಂದ ಕೇವಲ 5 ದಿನಕ್ಕೆ ಅಂತ್ಯವಾದಂತಾಗಿದೆ.

Leave A Reply