ಆಟೋ ರಿಕ್ಷಾಗಳಿಂದ ನಗದು ಕಳವು ಪ್ರಕರಣ ಆರೋಪಿಯನ್ನು ಬಂಧಿಸಿದ ಪುತ್ತೂರು ಪೊಲೀಸರು

ಪುತ್ತೂರು:ತಿಂಗಳ ಹಿಂದೆ ಪುತ್ತೂರು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಟ್ಟಡ ಮತ್ತು ಏಳ್ಳುಡಿಯಲ್ಲಿ ನಿಲ್ಲಿಸಲಾಗಿದ್ದ ಆಟೋ ರಿಕ್ಷಾಗಳಿಂದ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಪುತ್ತೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪುತ್ತೂರು ಕೆಮ್ಮಿಂಜೆ ನಿವಾಸಿ ಮಹಮ್ಮದ್ ಸಾಲೆಕ್ ಬಂಧಿತ ಆರೋಪಿಯಾಗಿದ್ದು ಜ.10ರಂದು ರಾತ್ರಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಡಿ.9ರಂದು ಏಳ್ಳುಡಿಯಲ್ಲಿ ರಾಮ್‌ರಾಜ್ ಸಂಸ್ಥೆಯ ಮುಂದೆ ನಿಲ್ಲಿಸಿದ್ದ ಆಟೋ ರಿಕ್ಷಾದಿಂದ ರೂ.9,400 ನಗದು ಕಳವಾಗಿತ್ತು.ಡಿ.31ರಂದು ಎಪಿಎಂಸಿ ರಸ್ತೆ ಕ್ರಿಸ್ಟೋಫರ್ ಕಾಂಪ್ಲೆಕ್ ನ ಆಟೋ ರಿಕ್ಷಾ ದುರಸ್ತಿ ಕೇಂದ್ರದ ಬಳಿ ನಿಲ್ಲಿಸಲಾಗಿದ್ದ ರಿಕ್ಷಾದಿಂದ ರೂ.14,600 ಕಳವಾಗಿತ್ತು.ಈ ಎರಡೂ ಕೃತ್ಯವನ್ನು ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವ ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.ಕಳವಿಗೆ ಸಂಬಂಧಿಸಿ ವಿಳ್ಳುಡಿಯಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾದ ಚಾಲಕ ರಾಕೇಶ್ ರೈ ಪರ್ಪುಂಜ ಮತ್ತು ಕ್ರಿಸ್ಟೋಫರ್ ಬಿಲ್ಡಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾದ ಚಾಲಕ ಚಿರಂಜೀವಿ ಬೆಳ್ಳಾರೆ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಅವರ ನಿರ್ದೇಶನದಂತೆ ಡಿವೈಎಸ್ಪಿ ಡಾ.ಗಾನಾ ಪಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಎಸ್.ಐ ನನಾತಾಜ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ನ್ಯಾಯಾಂಗ ಬಂಧನ: ಬಂಧಿತ ಆರೋಪಿಯನ್ನು ಜ.11ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave A Reply

Your email address will not be published.