ಮನುಷ್ಯನ ಜೀವ ಉಳಿಸಲು ಮತ್ತೆ ಸಹಾಯಕ್ಕೆ ನಿಂತ ಪ್ರಾಣಿ | ವೈದ್ಯಲೋಕದಿಂದ ಮಾನವನಿಗೆ ಹಂದಿಯ ಹೃದಯದ ಕಸಿ ಯಶಸ್ವಿ

ನಿಸ್ವಾರ್ಥ ಪ್ರಾಣಿಗಳು ಕೊಡುತ್ತಲೇ ಹೋಗುತ್ತವೆ. ಮನುಷ್ಯನಿಗೆ ಪಡೆಯುವುದು ಮಾತ್ರ ಗೊತ್ತು. ಹಾಗೆ ಇಲ್ಲೊಂದು ಹಂದಿಮರಿ ವಯಸ್ಕರೊಬ್ಬರ ಜೀವ ಉಳಿಸಿದೆ. ಅಮೆರಿಕಾದ ವೈದ್ಯ ಲೋಕ ಯಶಸ್ವಿಯಾಗಿ ಹಂದಿಯ ಹೃದಯವನ್ನು ರೋಗಿಗೆ ಅಳವಡಿಸುವಲ್ಲಿ  ಯಶಸ್ವಿಯಾಗಿದ್ದಾರೆ.

ವೈದ್ಯಕೀಯ ವಿಜ್ಞಾನದಲ್ಲಿ ಈ ಮೂಲಕ ನೂತನ ಸಾಧನೆ ಮಾಡಲಾಗಿದೆ. ಹಂದಿಯ ಹೃದಯದಿಂದಲೂ ಮಾನವ ಜೀವನ ಉಳಿಸಬಹುದು ಮತ್ತು ಪ್ರಾಣಿಗಳ ಅಂಗಾಂಗಗಳನ್ನು ಬಳಸಿಕೊಂಡು ಪ್ರಾಣ ಉಳಿಸಬಹುದು ಎಂಬುದನ್ನು ಈ ಅನ್ವೇಷಣೆ ಹಾಗೂ ಶಸ್ತ್ರಚಿಕಿತ್ಸೆ ತೋರಿಸಿಕೊಟ್ಟಿದೆ.

57 ವರ್ಷದ ವ್ಯಕ್ತಿಯೊಬ್ಬರಿಗೆ ಕುಲಾಂತರಿ ತಳಿ ಹಂದಿಯ ಹೃದಯವನ್ನು ಅಮೆರಿಕದ ವೈದ್ಯರು ಕಸಿ ಮಾಡಿದ್ದಾರೆ‌. ವೈದ್ಯಕೀಯ ಜಗತ್ತಿನಲ್ಲೇ ಮೊಟ್ಟಮೊದಲ ಪ್ರಕರಣ ಇದಾಗಿದೆ.

ಡೇವಿಡ್ ಬೆನೆಟ್ ಎಂಬ ರೋಗಿಯ ಸ್ಥಿತಿ ತುಂಬಾ ಗಂಭೀರವಾಗಿದ್ದರಿಂದ ಮನುಷ್ಯನ ಅಂಗಾಂಗ ಕಸಿಗೆ ಆತ ಸಮರ್ಪಕ ಅಲ್ಲ ಅಂತಾ ನಿರ್ಧರಿಸಲಾಗಿತ್ತು. ಆದರೆ ಮೆರಿಲ್ಯಾಂಡ್ ವಿಶ್ವವಿದ್ಯಾನಿಲಯದ ಮೆಡಿಕಲ್ ಸ್ಕೂಲ್ ನಲ್ಲಿ ಈ ಐತಿಹಾಸಿಕ ಶಸ್ತ್ರಚಿಕಿತ್ಸೆ ಅಂದರೆ ಪ್ರಾಣಿಗಳ ಅಂಗಾಂಗಳನ್ನು ಮನುಷ್ಯರಿಗೆ ಯಶಸ್ವಿಯಾಗಿ ಕಸಿ ಮಾಡುವ ಹೆಜ್ಜೆಯನ್ನು ಪೂರ್ಣಗೊಳಿಸಿದೆ. ಹಾಗೂ ಇದೊಂದು ವೈದ್ಯಲೋಕದ ಹೊಸ ಮೈಲುಗಲ್ಲು ಎಂದು ಬಣ್ಣಿಸಿದ್ದಾರೆ.

ಹೃದಯ- ಶ್ವಾಸಕೋಶ ಬೈಪಾಸ್ ಮೆಷಿನ್ ನೆರವಿನಲ್ಲಿದ್ದ ಬೆನೆಟ್ ಹಲವು ತಿಂಗಳಿಂದ ಹಾಸಿಗೆ ಹಿಡಿದಿದ್ದರು. ಈ ಕಸಿ ಶಸ್ತ್ರಚಿಕಿತ್ಸೆ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಯಲ್ಲಿತ್ತು. ನಾನು ಇನ್ನೂ ಬದುಕಲು ಬಯಸಿದ್ದೆ ಎಂದು ಮೆರಿಲ್ಯಾಂಡ್ ನಿವಾಸಿ ಶಸ್ತ್ರಚಿಕಿತ್ಸೆಗೂ ಮುನ್ನ ಬೆನೆಟ್ ಪ್ರತಿಕ್ರಿಯಿಸಿದ್ದರು.

ವೈದ್ಯಕೀಯವಾಗಿ ಪ್ರಥಮವಾಗಿ, ವೈದ್ಯರು ಹಂದಿಯ ಹೃದಯವನ್ನು ಮನುಷ್ಯನಿಗೆ ಜೀವವನ್ನು ಉಳಿಸುವ ಕೊನೆಯ ಪ್ರಯತ್ನ ಎಂಬಂತೆ ಕಸಿ ಮಾಡಿದರು. ಈ ಶಸ್ತ್ರಚಿಕಿತ್ಸೆ ನಡೆದ ಮೂರು ದಿನದ ನಂತರ ಮೇರಿಲ್ಯಾಂಡ್ ಆಸ್ಪತ್ರೆ ರೋಗಿ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.

ಮನುಷ್ಯನಲ್ಲಿ ಹಂದಿಯ ಹೃದಯ ನಿಜವಾಗಿಯೂ ಕಾರ್ಯನಿರ್ವಹಿಸುತ್ತದೆಯೇ ಎಂದು ತಿಳಿದುಕೊಳ್ಳಲು ಇನ್ನೂ ಸಮಯ ಬೇಕಾಗುತ್ತದೆ. ಜೀವ ಉಳಿಸಿಕೊಳ್ಳಲು ಕಸಿ ಮಾಡಲು ಪ್ರಾಣಿಗಳ ಅಂಶಗಳನ್ನು ಒಂದು ದಿನ ಬಳಸಿಕೊಳ್ಳುವ ದಶಕಗಳ ಕಾಲದ ಅನ್ವೇಷಣೆಯಲ್ಲಿ ಇದು ಒಂದು ದಿಟ್ಟ ಹೆಜ್ಜೆ. ಈ ಹಿಂದೆ ಕೂಡ ಹಂದಿಯ ಚರ್ಮವನ್ನು ಮನುಷ್ಯನಿಗೆ ಪ್ಲಾಸ್ಟಿಕ್ ಸರ್ಜರಿ ಮಾಡುವಲ್ಲಿ ಪ್ರಯತ್ನ ಸಾಗಿತ್ತು. ಹಂದಿಯ ಮತ್ತು ಮನುಷ್ಯನ ಅಂಗ ರಚನೆಯಲ್ಲಿ ಹಲವು ಈ ತರದ ಸಾಮ್ಯತೆಗಳು ಕಂಡುಬಂದಿದ್ದವು.

ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ನ ವೈದ್ಯರು ಹೇಳುವಂತೆ, ಕಸಿ ಮಾಡುವಿಕೆಯು ತಳೀಯವಾಗಿ ಮಾರ್ಪಡಿಸಿದ ಪ್ರಾಣಿಯ ಹೃದಯವು ತಕ್ಷಣದ ನಿರಾಕರಣೆಯಿಲ್ಲದೇ ಮಾನವನ ದೇಹದಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ತೋರಿಸಿದೆ.

ಬೆನೆಟ್ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದರಿಂದ ಮುಂದಿನ ಕೆಲವು ವಾರಗಳು ನಿರ್ಣಾಯಕವಾಗಿರುತ್ತದೆ ಮತ್ತು ವೈದ್ಯರು ಅವರ ಹೃದಯವು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಾರೆ.

‘ಇದು ಕಾರ್ಯನಿರ್ವಹಿಸಿದರೆ, ಬಳಲುತ್ತಿರುವ ರೋಗಿಗಳಿಗೆ ಈ ಅಂಗಗಳ ಅಂತ್ಯವಿಲ್ಲದ ಪೂರೈಕೆ ಇರುತ್ತದೆ ‘ ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಪ್ರಾಣಿಯಿಂದ ಮನುಷ್ಯನಿಗೆ ಕಸಿ ಕಾರ್ಯಕ್ರಮದ ವೈಜ್ಞಾನಿಕ ನಿರ್ದೇಶಕ ಡಾ.ಮುಹಮ್ಮದ್ ಮುಯಿದ್ದೀನ್ ಹೇಳಿದ್ದಾರೆ.

Leave A Reply

Your email address will not be published.