ಸಾಲ ನೀಡದ್ದಕ್ಕೆ ಸಿಟ್ಟಿನಿಂದ ಬ್ಯಾಂಕ್ ಗೆ ಬೆಂಕಿ ಇಟ್ಟ ಭೂಪ !!

ಸಾಲ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಟ್ಟುಗೊಂಡ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬ್ಯಾಂಕ್ ಗೆ ಬೆಂಕಿ ಹಚ್ಚಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗೊಂಡ ಗ್ರಾಮದಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ನಿವಾಸಿ 33 ವರ್ಷದ ವಸೀಮ್ ಮುಲ್ಲಾ ಎಂಬಾತ ಬ್ಯಾಂಕ್ ಗೆ ಬೆಂಕಿ ಹಚ್ಚಿದ್ದು, ಪರಿಣಾಮ ರೂ.16 ಲಕ್ಷ ಮೌಲ್ಯ ಆಸ್ತಿ ಹಾನಿಗೊಳಗಾಗಿದ್ದು, ಅದೃಷ್ಟವಶಾತ್ ಯಾವುದೇ ನಗದು ಬೆಂಕಿಗಾಹುತಿಯಾಗಿಲ್ಲ ಎಂದು ತಿಳಿದುಬಂದಿದೆ.

ಸಾಲಕ್ಕಾಗಿ ಆರೋಪಿ ವಸೀಮ್ ಅರ್ಜಿ ಸಲ್ಲಿಸಿದ್ದ. ಆದರೆ, ಮ್ಯಾನೇಜರ್ ಈ ಅರ್ಜಿಯನ್ನು ನಿರಾಕರಿಸಿದ್ದರು. ಇದರಿಂದ ತೀವ್ರವಾಗಿ ಬೇಸರಗೊಂಡಿದ್ದ ವಸೀಮ್, ಕೋಪಗೊಂಡು ಬ್ಯಾಂಕ್ ನ ಕಿಟಕಿ ಬಾಗಿಲು ತೆಗೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆ ಬಳಿಕ ಸ್ಥಳೀಯ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯಲ್ಲಿ ಅಗ್ನಿ ಅವಘಡದಲ್ಲಿ ಕ್ಯಾಶ್ ಕೌಂಟರ್, ಕ್ಯಾಬಿನ್, ಸಿಸಿಟಿವಿ, ಐದು ಕಂಪ್ಯೂಟರ್‌ಗಳು, ಪಾಸ್‌ಬುಕ್ ಪ್ರಿಂಟರ್, ಸ್ಕ್ಯಾನರ್, ಪ್ರಿಂಟರ್, ನಗದು ಎಣಿಸುವ ಯಂತ್ರ, ಫ್ಯಾನ್, ಲೈಟ್‌ಗಳು, ಕೆಲವು ದಾಖಲೆಗಳು ಮತ್ತು ಪೀಠೋಪಕರಣಗಳು ಸೇರಿದಂತೆ ಒಟ್ಟು ರೂ.16 ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.