ಮೇಕೆದಾಟು ಪಾದಯಾತ್ರೆಗೆ ನಟ ಶಿವರಾಜ್ ಕುಮಾರ್ | ವೀಕೆಂಡ್ ಕರ್ಫ್ಯೂ ಕಾಲದ ಪಾದಯಾತ್ರೆಗೆ ಕ್ಷಣಗಣನೆ

ಬೆಂಗಳೂರು : ಜಿದ್ದಾಜಿದ್ದಿ ಹೋರಾಟಕ್ಕೆ ಕಾರಣವಾಗಿರುವ ಮೇಕೆದಾಟು ಪಾದಯಾತ್ರೆ ಆರಂಭವಾಗಲಿದ್ದು, ಈ ಐತಿಹಾಸಿಕ ಪಾದಯಾತ್ರೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದಾರೆ. ಇಂದಿನಿಂದ ಆರಂಭ ಆಗಲಿರುವ ಪಾದಯಾತ್ರೆಗೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು ಕಾಂಗ್ರೆಸ್ ಶಾಸಕರು, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಹಲವರು ಈ ಪಾದಯಾತ್ರೆ ಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕದಲ್ಲಿ ವೀಕೆಂಡ್‌ಕರ್ಪ್ಯೂ ಸೇರಿದಂತೆ ಹಲವು ಕಠಿಣ ನಿಯಮಗಳು ಜಾರಿಯಲ್ಲಿದ್ದು, ಅವುಗಳನ್ನೆಲ್ಲ ಲೆಕ್ಕಿಸದೇ ಕಾಂಗ್ರೆಸ್ ಪಾದಯಾತ್ರೆ ಮಾಡಿಯೇ ಸಿದ್ಧ ಎಂದು ಹೊರಟಿದ್ದು ಇದು ಕುಡಿಯುವ ನೀರಿಗಾಗಿ ನಡೆಯುವ ಪಾದಯಾತ್ರೆ ಹೀಗಾಗಿ ಎಲ್ಲರೂ ಪಕ್ಷಾತೀತ ವಾಗಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆಕೊಟ್ಟಿದ್ದಾರೆ. ಈ‌ ಮಧ್ಯೆ ಡಿಕೆಶಿ ತಮ್ಮ ಪಾದಯಾತ್ರೆಗೆ ಸ್ಯಾಂಡಲ್ ವುಡ್ ನಟರ ಬೆಂಬಲವನ್ನು ಕೋರಿದ್ದರು. ಈಗಾಗಲೇ‌ ಚಲನಚಿತ್ರ ವಾಣಿಜ್ಯ ಮಂಡಳಿ ಈ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದು, ಪಾದಯಾತ್ರೆಗೆ ಡಾ.ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದಾರಂತೆ.

ನಾಳೆ ಕಾಂಗ್ರೆಸ್ ಹಮ್ಮಿಕೊಂಡಿರುವ ಈ ಪಾದಯಾತ್ರೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಎಲ್ಲ ಹಿರಿ ಕಿರಿಯ ನಾಯಕರು ಪಾಲ್ಗೊಳ್ಳಲಿದ್ದಾರಂತೆ.
ಈ ಮಧ್ಯೆ ಶಿವರಾಜ್ ಕುಮಾರ್ ಅವರಿಂದ ಪಾದಯಾತ್ರೆಗೆ ಚಾಲನೆ ಕೊಡಿಸುವ ಮೂಲಕ ಇದು ಪಕ್ಷಾತೀತವಾದ ಹೋರಾಟ ಎಂಬ ಸಂದೇಶ ಕೊಡಿಸುವ ಪ್ರಯತ್ನದಲ್ಲಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಮೂಲಗಳ ಮಾಹಿತಿ ಪ್ರಕಾರ ಮುಂಜಾನೆ ಶಿವರಾಜ್ ಕುಮಾರ್ ಡಿಕೆಶಿಯವರ ನಿವಾಸಕ್ಕೆ ತೆರಳಲಿದ್ದು ಅಲ್ಲಿಂದ ಮೇಕದಾಟು ಸಂಗಮಕ್ಕೆ ತೆರಳಿ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರಂತೆ.

ಈ ಹಿಂದೆ ಡಾ. ರಾಜ್ ಕುಮಾರ್ ಗೋಕಾಕ್ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ವರನಟ ಪಾಲ್ಗೊಂಡ ಈ ಹೋರಾಟದಿಂದ ಜನರು ಹೆಚ್ಚು ಜಾಗೃತಗೊಂಡಿದ್ದಲ್ಲದೇ ಹೆಚ್ಚು ಜನರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆದರೆ ಈಗ ಕಾಂಗ್ರೆಸ್ ನಾಯಕರು ಸಿದ್ಧವಾಗಿದ್ದು, ರಾಜ್ ಕುಮಾರ್ ಕುಟುಂಬವನ್ನು ಪಾದಯಾತ್ರೆ ಗೆ ಚಾಲನೆ‌ ಕೊಡಿಸುವುದರ ಮೂಲಕ ಜನರನ್ನು ಸೆಳೆಯುವ ತಂತ್ರ ಅನುಸರಿಸುತ್ತಿದೆ. ಈ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಸಜ್ಜಾಗಿದ್ದು, ಶಿವರಾಜ್ಕುಮಾರ್ ಅಂತಹ ಸಜ್ಜನ ನಟ ಕಾಂಗ್ರೆಸ್ನ ಷಡ್ಯಂತರ ಕ್ಕೆ ಬಲಿಯಾಗಿ ಹೋದರ ಎಂಬ ಅನುಮಾನ ಗುಸುಗುಸು ಮಾತುಗಳು ನಡೆಯುತ್ತಿವೆ. ಯಾಕೆಂದರೆ ಮೇಕೆದಾಟು ಯೋಜನೆ ಇಷ್ಟಾನಿಷ್ಟಗಳು ಜನಪರವೂ ಅಲ್ಲವೋ ಎಂಬುದು ಬೇರೆ ಮಾತು. ಆದರೆ ಪ್ರಾರಂಭದಿಂದಲೂ ಇದೊಂದು ರಾಜಕೀಯ ಸ್ಪರ್ಧೆಯ ವಿಷಯವಾಗಿ ಮಾರ್ಪಾಡಾಗಿದ್ದು, ಈಗ ಕರ್ಫ್ಯೂ ಹೇರಿಕೆಯ ಸಂದರ್ಭ ಪಾದಯಾತ್ರೆಯ ಚಿತ್ರ ಏನು ಎನ್ನುವ ಪ್ರಶ್ನೆ ಎದ್ದಿದೆ.

ರಾಮನಗರ ಸೇರಿದಂತೆ ಎಲ್ಲೆಡೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದ್ದು ಪಾದಯಾತ್ರೆ ನಡೆಯೋದೇ ಅನುಮಾನ ಎಂಬ ಮಾತು ಪೊಲೀಸ್ ವಲಯದಿಂದಲೇ ಕೇಳಿ ಬಂದಿದೆ. ಅಲ್ಲದೇ ಸರ್ಕಾರವೂ ಪಾದಯಾತ್ರೆ ತಡೆಯಲು ಅಧಿಕಾರ ಬಳಸಿಕೊಳ್ಳಲು ಸಿದ್ಧತೆ ನಡೆಸಿದೆ. ಇಷ್ಟೆಲ್ಲ ವಿವಾದಗಳಿರೋ ಪಾದಯಾತ್ರೆಯಲ್ಲಿ ಶಿವಣ್ಣ ನೇರವಾಗಿ ಪಾಲ್ಗೊಳ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.