ಮಂಗಳೂರು | ಮನೆಯನ್ನೇ ಎತ್ತಿ 3 ಅಡಿ ಮೇಲಕ್ಕೆ ಇಟ್ಟ ನಿವೃತ್ತ ಬ್ಯಾಂಕ್ ಉದ್ಯೋಗಿ | ಮನೆಗೆ ಮಳೆನೀರು ನುಗ್ಗುವುದನ್ನು ಕಂಡು ಬೇಸತ್ತು ತಂತ್ರಜ್ಞಾನದ ಮೊರೆ ಹೋದ ಸಾಹಸಿ

ಮಂಗಳೂರು : ಚರಂಡಿ ನೀರು ಮನೆಗೆ ನುಗ್ಗುವುದನ್ನು ಕಂಡು ಬೇಸತ್ತ ಮಂಗಳೂರಿನ ವ್ಯಕ್ತಿಯೋರ್ವರು ತನ್ನ ಮನೆಯನ್ನೇ ಎತ್ತಿ ಮೂರಡಿ ಮೇಲಕ್ಕೆ ಇಡುವ ಸಾಹಸ ಮಾಡಿದ್ದಾರೆ. ಅದರಲ್ಲಿ ಸಕ್ಸಸ್ ಕೂಡಾ ಕಂಡಿದ್ದಾರೆ.

ಹಾಗೆ ಮನೆಯಲ್ಲೇ ಮೂರಡಿ ಎತ್ತಿ ಇಟ್ಟವರು ಮಂಗಳೂರಿನ ಸುರೇಶ್ ಉಡುಪ. ಮಂಗಳೂರು ವ್ಯಾಪ್ತಿಯ ತಗ್ಗುಪ್ರದೇಶದ ನಿಂದ ಕೂಡಿದ ಮಾಲೆಮಾರ್ ‌ನ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಸುರೇಶ್ ಉಡುಪ ಎಂಬುವವರು ಮನೆಗೆ ನೀರು ನುಗ್ಗುವುದನ್ನು ತಪ್ಪಿಸಲು ಈ ರೀತಿ ಮಾಡಿದ್ದಾರೆ.
ಮಳೆಗಾಲದಲ್ಲಿ ಅವರ ಮನೆಯೊಳಗೆ ನೀರು ನುಗ್ಗುತ್ತಿತ್ತು. ಏನು ಮಾಡಲು ತೋಚದೆ ಅವರು ಬೇಸತ್ತು ಕೊನೆಗೆ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಸುರೇಶ್ ಅವರು ತನ್ನ ಇಡೀ ಮನೆಯನ್ನೇ ಜಾಕ್ ಕೊಟ್ಟು ಮೂರಡಿ ಲಿಫ್ಟ್ ಮಾಡಿಸಿದ್ದಾರೆ.

ಏನೀ ತಂತ್ರಜ್ಞಾನ ?
ಇದು ಇಡೀ ಮನೆಯನ್ನು ಒಂದೇ ಬಾರಿಗೆ ಹಂತ-ಹಂತವಾಗಿ ಜಾಕ್ ನ ಸಹಾಯದಿಂದ ಮೇಲಕ್ಕೆ ಎತ್ತುವುದು. ಇದರಲ್ಲಿ
ಮೊದಲ ಹಂತದಲ್ಲಿ ಮನೆಯ ಗೋಡೆಯ ಫ್ಲಿಂತ್ ಪಿಲ್ಲರ್ ನ ಅಡಿಭಾಗದಲ್ಲಿ 2 ಅಡಿ ಆಳವನ್ನು ಅಗೆಯಲಾಗುತ್ತದೆ. ಅಲ್ಲಿ ಬೆಡ್ ಮತ್ತು ಕಬ್ಬಿಣದ ರಾಡ್ ಅಳವಡಿಕೆ ಮಾಡಲಾಗುತ್ತದೆ. ನಂತರದಲ್ಲಿ ಮನೆಯ ಸುತ್ತಲೂ ಸುಮಾರು 200 ರಷ್ಟು ಜಾಕ್ ಅಳವಡಿಸಿ, ಈ ಜಾಕ್ ನ್ನು ತಿರುಗಿಸಿದಾಗ ಮನೆ ನಿಧಾನವಾಗಿ ಮಿಲಿ ಮೀಟರ್ ಲೆಕ್ಕದಲ್ಲಿ ಮೇಲಕ್ಕೆ ಜರುಗುತ್ತದೆ.

ಈ ರೀತಿ ಮನೆಯನ್ನು ಪಂಚಾಂಗದ ಸಮೇತ ಮೇಲಕ್ಕೆತ್ತುವಾಗ ಯಾವುದೇ ಕ್ರ್ಯಾಕ್ ಗಳಾಗದೆ ಮನೆ ಎತ್ತರಕ್ಕೆ ಹೋಗುತ್ತದೆ. ಮನೆ ಪೂರ್ವನಿರ್ಧಾರಿತ ಎತ್ತರಕ್ಕೆ ಬಂದನಂತರ, ಒಂದೊಂದೇ ಜಾಕ್ ಗಳನ್ನು ತೆಗೆದು ತಳಪಾಯಕ್ಕೆ ಕಬ್ಬಿಣ, ಸಿಮೆಂಟು ಅಳವಡಿಸಿ ಕೆಂಪುಕಲ್ಲಿನಿಂದ ಭದ್ರವಾಗಿ ಕಟ್ಟಲಾಗಿದೆ. ಈ ವೇಳೆ ಗೋಡೆಯ ಸುತ್ತಲೂ ಯಾವುದೇ ಅಡೆತಡೆಗಳಿಲ್ಲದಂತೆ ನೋಡಿಕೊಳ್ಳಲಾಗಿದೆ‌.

ಈ ರೀತಿ ತಂತ್ರಜ್ಞಾನದ ಸಹಾಯದಿಂದ ಮನೆಯನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ, ಮನೆಯ ಪೇಂಟ್ ಕೂಡ ಸ್ವಲ್ಪವೂ ಕದಲಿಲ್ಲ. ಮನೆ ಒಳಗೆ ಇಟ್ಟ ಉಪ್ಪಿನ ಭರಣಿಗಳು ಅಡುಗೆಮನೆಯ ಕಪಾಟಿನಲ್ಲಿ ಒಟ್ಟೋತ್ತಾಗಿ ಇಟ್ಟ ಪಾತ್ರೆ ಪಗಡೆಗಳು ಸಹ ಕದಲದೆ, ಸದ್ದುಮಾಡದೆ ಮನೆ ಮೆಲಕ್ಕೆರಿ ಬೀಗುತ್ತಾ ನಿಂತಿದೆ. ಹಾಗೆಂದು ಮನೆಯೊಡತಿ ಮಾಲತಿ ಪ್ರಸಾದ್ ಅವರು ಹೆಮ್ಮೆಯಿಂದ ಬೀಗಿ ನುಡಿದರು.

ಉತ್ತರಪ್ರದೇಶ ಮೂಲದವರಾದ ರಾಹುಲ್ ಚೌಹಾನ್ ಎಂಬುವರ ಬಿಎಸ್ ಎಲ್ ಹೌಸ್ ಲಿಫ್ಟಿಂಗ್ ಸಂಸ್ಥೆ ಮನೆಯನ್ನೇ ಮೇಲೆತ್ತುವ ಕಾರ್ಯವನ್ನು ವಹಿಸಿಕೊಂಡಿದೆ. 12 ಕಾರ್ಮಿಕರು ಹರಿಯಾಣ ಮೂಲದವರು ಹೌಸ್ ಲಿಫ್ಟಿಂಗ್ ಕಾರ್ಯ ಮಾಡಿದ್ದಾರೆ. 1000 ಚದರ ಅಡಿ ಮನೆಯನೆ ಒಂದು ತಿಂಗಳೊಳಗೆ ಸಂಪೂರ್ಣ ಲಿಫ್ಟ್ ಮಾಡಲಾಗಿದೆ. ಮನೆಗೆ ಯಾವುದೇ ರೀತಿಯ ಡ್ಯಾಮೇಜ್ ಆಗುವುದಿಲ್ಲ ಎಂದು ಅಗ್ರಿಮೆಂಟ್ ಕೂಡ ಮಾಡಲಾಗಿತ್ತು.

Leave A Reply

Your email address will not be published.