ನಿಷ್ಕಲ್ಮಶ ಮನಸ್ಸಿನಿಂದ ತನ್ನದೇ ಮಕ್ಕಳಂತೆ ನಾಯಿ ಮರಿಗಳಿಗೆ ಮೊಲೆ ಹಾಲುಣಿಸುತ್ತಿದೆ ಈ ಗೋ ಮಾತೆ | ಹಸಿವೆಯಿಂದ ನರಳುತ್ತಿರುವ ನಾಲ್ಕು ಶ್ವಾನ ಮರಿಗಳನ್ನು ಹುಡುಕಿ ಹಸಿವು ನೀಗಿಸುತ್ತಿರುವ ತಾಯಿ ಪ್ರೀತಿಯ ಈ ದೃಶ್ಯ ವೈರಲ್

ಹಸಿವಿನಿಂದ ಬಳಲುತ್ತಿರುವರನ್ನು ಕಂಡು ಅದೆಷ್ಟೋ ಜನರು ಯಾವುದೇ ಸಹಾಯ ಮಾಡದೆ ಅವರ ಸಹವಾಸ ನಮಗ್ಯಾಕೆ ಎಂದು ಹಾಗೆ ಹೋಗುತ್ತಾರೆ. ಆದರೆ ಮಾನವೀಯ ಗುಣವುಳ್ಳವರು ಹಸಿವಿನ ಕಷ್ಟ ಅರಿತು ಹೊಟ್ಟೆ ತುಂಬಿಸಿ ಮಾನವೀಯ ಕಾಳಜಿ ತೋರುತ್ತಾರೆ. ಆದರೆ, ಮಾನವೀಯ ಕಾಳಜಿ ತೋರಿ ಹಸಿವು ನೀಗಿಸುವ ಸಂಖ್ಯೆ ಈಗ ವಿರಳವಾಗಿದೆ. ಆದರೆ, ಪೇಠ ಅಮ್ಮಾಪುರ ಗ್ರಾಮದಲ್ಲಿ ಗೋವು ಶ್ವಾನಗಳ ಹಸಿವಿನ ಕೂಗಿಗೆ ಸ್ಪಂದಿಸಿ ಹಸಿವು ನೀಗಿಸುತ್ತಿದೆ.

ನಿತ್ಯವೂ ಹಸಿವಿನಿಂದ ಬಳಲುತ್ತಿರುವ ಶ್ವಾನ ಮರಿಗಳಿಗೆ ಗೋವು ತಾಯಿಯ ಪ್ರೀತಿ ತೋರಿ ಶ್ವಾನ ಮರಿಗಳಿಗೆ ಹಾಲು ಉಣಿಸಿ ಹೊಟ್ಟೆ ತುಂಬಿಸುವ ಮೂಲಕ ಮಾತೃಪ್ರೇಮ ಮೆರೆಯುತ್ತಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಈ ಮನಕಲುಕುವ ತಾಯಿ ಪ್ರೀತಿ ಕಾಣಬಹುದಾಗಿದೆ. ಕನಕಪ್ಪ ಕಟ್ಟಿಮನಿ ಅವರಿಗೆ ಸೇರಿದ ಗೋವು ಕಳೆದ ಐದು ದಿನಗಳಿಂದ ಶ್ವಾನದ ಮರಿಗಳಿಗೆ ಹಾಲು ಉಣಿಸುತ್ತಿದೆ.

ಶ್ವಾನವು 4 ಮರಿಯನ್ನು ಹಾಕಿದ್ದು ನಾಲ್ಕು ಮರಿಗಳಿಗೆ ಹಾಲು ಕೊರತೆಯಾಗುತ್ತಿದೆ. ತಾಯಿ ಶ್ವಾನಕ್ಕೆ ತನ್ನ ನಾಲ್ಕು ಮರಿಗಳಿಗೆ ಹೊಟ್ಟೆ ತುಂಬಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಾಯಿ ಮರಿಗಳು ಆಕಳಿನ ಮೊಲೆ ಹಾಲು ಕುಡಿಯಲು ಮುಂದಾಗಿದ್ದಾವೆ. ಮೊದಲ ದಿನವು ಗೋ ಮಾತೆಯು ಶ್ವಾನ ಮರಿಗಳಿಗೆ ಹಾಲು ಉಣಿಸಿ ಹೊಟ್ಟೆ ತುಂಬಿಸಿತು. ಇದನ್ನೇ ರೂಢಿ ಮಾಡಿಕೊಂಡ ಶ್ವಾನ ಮರಿಗಳು ಗೋ ಮಾತೆ ಕಂಡು ಬೆನ್ನ ಹಿಂದೆ ಹೋಗಿ ಹಾಲು ಸೇವನೆ ಮಾಡುತ್ತಿದ್ದಾವೆ. ಬೆಳಿಗ್ಗೆ ಹಾಗೂ ಸಂಜೆ ಎರಡು ವೇಳೆ ಗೋ ಮಾತೆ ಹಾಲುಣಿಸುತ್ತಿದೆ.

ಆಕಳು ಹೊರಗಡೆ ಮೇವು ತಿಂದು ಬಂದ ನಂತರ ಗ್ರಾಮದ ವಾಲ್ಮೀಕಿ ವೃತ್ತದ ಸಮೀಪದಲ್ಲಿ ಇರುವ ಶ್ವಾನ ಮರಿಗಳನ್ನು ಹುಡುಕಿಕೊಂಡು ಬಂದು ಶ್ವಾನ ಮರಿಗಳಿಗೆ ಹಾಲುಣಿಸುತ್ತದೆ. ಒಂದು ವೇಳೆ ಶ್ವಾನಗಳು ಕಾಣದಿದ್ದರೆ ಗೋವು ಕನಕಪ್ಪ ಮನೆಗೆ ಬರುತ್ತದೆ. ಅವಾಗ ಶ್ವಾನ‌ ಮರಿಗಳು ಗೋವು ಇರುವ ಕನಕಪ್ಪ ಮನೆ ಕಡೆ ಬಂದು ಹಾಲು ಕುಡಿಯುತ್ತವಂತೆ. ಗೋವು ತನ್ನ ಕರುವಿಗೆ ಹಾಲು ಕುಡಿಯುವುದನ್ನು ಬಿಟ್ಟಿದೆಯಂತೆ. ತನ್ನ ಕರುವಿಗೆ ಹಾಲುಣಿಸದಿದ್ದರೂ ನಾಲ್ಕು ಶ್ವಾನ ಮರಿಗಳಿಗೆ ಹಾಲುಣಿಸಿ ತಾಯಿ ಮಮತೆ ತೊರುತ್ತಿದೆ. ಗೋ ಮಾತೆಯೇ ಶ್ವಾನ ಮರಿಗಳಿಗೆ ತಾಯಿ ಸ್ವರೂಪಿಯಾಗಿದೆ. ಈ ದೃಶ್ಯ ಕಂಡು ಊರ ಜನರು ನಿಬ್ಬೆರಗಾಗಿದ್ದಾರೆ.

ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ಆದರೆ, ಈ ಗೋ ಮಾತೆಯು ಅದಕ್ಕೆ ತದ್ವಿರುದ್ಧವಾಗಿದೆ. ಈ ದೃಶ್ಯವನ್ನು ಊರವರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಗೋ ಮಾತೆಯ ಶ್ವಾನಗಳ ಪ್ರೀತಿಯ ವೀಡಿಯೋ ಎಲ್ಲೆಡೆ ವೈರಲ್ ಆಗಿ ಮೆಚ್ಚುಗೆಗೆ ಪಾತ್ರವಾಗಿದೆ.

Leave A Reply

Your email address will not be published.