ಕೋಳಿಯ ಕಾಲಿಗೆ ಬ್ಲೇಡ್‌ ಕಟ್ಟದೆಯೇ ಕಾಳಗ ನಡೆಸಲು ಅನುಮತಿ ನೀಡಿದ ಹೈಕೋರ್ಟ್ !!

ಕೋಳಿ ಅಂಕ ನಡೆಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಆದರೂ ತಮಿಳುನಾಡಿನಲ್ಲಿ ಕೋಳಿಯ ಕಾಲಿಗೆ ಬ್ಲೇಡ್‌ ಕಟ್ಟದೆಯೇ ಕಾಳಗ ನಡೆಸಲು ಮಧುರೈ ಹೈಕೋರ್ಟ್ ಅನುಮತಿ ನೀಡಿದೆ.

ತಂಗಮುತ್ತು ಎಂಬುವರು ಪೊಂಗಲ್ ಹಬ್ಬದ ಹಿನ್ನೆಲೆ ಥೇಣಿ ಜಿಲ್ಲೆಯ ಉತ್ತಮಪಾಳ್ಯದಲ್ಲಿ ಹುಂಜಗಳ ಕಾಲಿಗೆ ಬ್ಲೇಡ್‌ಗಳನ್ನು ಕಟ್ಟದೇ ಕೋಳಿ ಕಾಳಗ ನಡೆಸಲು ಯೋಜಿಸಿದ್ದೇವೆ, ಇದಕ್ಕೆ ಅನುಮತಿ ನೀಡಬೇಕು ಎಂದು ಮಧುರೈ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ತಮಿಳುನಾಡು ಸರ್ಕಾರ ಸೂಚಿಸಿದ ಎಲ್ಲ ನಿಯಮಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ನಾವು ಜನವರಿ 16 ರಂದು ಕೋಳಿ ಕಾಳಗ ನಡೆಸಲು ಆಯಾ ಅಧಿಕಾರಿಗಳಿಂದ ಅನುಮತಿ ಕೇಳಿದ್ದೇವೆ. ಅವರು ಕೋಳಿ ಕಾಳಗ ನಡೆಸಲು ನ್ಯಾಯಾಲಯದ ಅನುಮತಿ ಕಡ್ಡಾಯ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆ ಪೊಂಗಲ್ ಹಬ್ಬ ಆಚರಿಸುವ ಸಲುವಾಗಿ ಉತ್ತಮಪಾಳ್ಯದಲ್ಲಿ ಜನವರಿ 16 ಎಂದು ಕಾಳಗ ನಡೆಯಲು ಅನುಮತಿ ನೀಡಬೇಕು ಎಂದು ತಂಗಮುತ್ತು ನ್ಯಾಯಲಯಕ್ಕೆ ಮನವಿ ಮಾಡಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್, ಕೋಳಿ ಕಾಳಗದ ಸಂದರ್ಭದಲ್ಲಿ ಹುಂಜಗಳ ಕಾಲಿಗೆ ಬ್ಲೇಡ್ ಅಥವಾ ಚಾಕುಗಳನ್ನು ಕಟ್ಟಬಾರದು. ಕಾದಾಡುತ್ತಿದ್ದ ಕೋಳಿಗಳು ಜೀವಂತವಾಗಿರಬೇಕು ಎಂದು ಸೂಚಿಸಿ, ಜನವರಿ 16 ಭಾನುವಾರದಂದು ಲಾಕ್‌ಡೌನ್ ಘೋಷಿಸಿರುವುದರಿಂದ ಜ.17 ರಂದು ಕೋಳಿ ಕಾಳಗ ನಡೆಸಲು ನ್ಯಾಯಾಧೀಶರು ಅನುಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.