ಅಡಿಕೆಯ ಜತೆಗೆ ಪರ್ಯಾಯ ಬೆಳೆಗೆ ಒತ್ತು , ಸರಕಾರ ಗಂಭೀರ ಚಿಂತನೆ -ಎಸ್.ಅಂಗಾರ

ಪುತ್ತೂರು : ಡಿಕೆ ಹಳದಿ ರೋಗ ಪೀಡಿತ ಪ್ರದೇಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಜೆಟ್‌ನಲ್ಲಿ ಘೋಷಿಸಲಾಗಿರುವ 25 ಕೋ.ರೂ. ಪ್ಯಾಕೇಜ್‌ ಮೊತ್ತದಲ್ಲಿ ಪರ್ಯಾಯ ಬೆಳೆಗೆ ಉತ್ತೇಜನ ನೀಡಲು ತೋಟಗಾರಿಕೆ ಇಲಾಖೆ ಸಚಿವರ ಉಪಸ್ಥಿತಿಯಲ್ಲಿ ಮುಂದಿನ 15 ದಿನಗಳಲ್ಲಿ ಜಿಲ್ಲೆಯಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಹೇಳಿದ್ದಾರೆ.

ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಸುಳ್ಯ, ಪುತ್ತೂರು ತಾಲೂಕಿನಲ್ಲಿ ಹಳದಿ ರೋಗದಿಂದ ಅಡಿಕೆ ಬೆಳೆಗಾರರಿಗೆ ಭಾರೀ ನಷ್ಟ ಉಂಟಾಗಿದೆ. ಹಾಗಾಗಿ ಅಡಿಕೆಯ ಜತೆಗೆ ಪರ್ಯಾಯ ಬೆಳೆಗೆ ಒತ್ತು ನೀಡುವ ಅನಿವಾರ್ಯತೆ ಇದ್ದು ಈ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಸಚಿವರು ಹೇಳಿದರು.

ಸ್ಥಳೀಯ ಮೀನು ತಳಿ ಅಭಿವೃದ್ಧಿಗೆ ಆದ್ಯತೆ
ಕರಾವಳಿಯಲ್ಲಿ ಒಳನಾಡು ಮೀನುಗಾರಿಕೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಯಾಗಾರ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ಮೀನುಗಾರಿಕೆ ವಿ.ವಿ.ಯ ತಜ್ಞರಿಂದ ತರಬೇತಿ ನೀಡಲು ಸೂಚಿಸಲಾಗುತ್ತದೆ. ಸ್ಥಳೀಯ ಮಲೆಜಿ ಮತ್ತು ಮೊಡೆಂಜಿ ತಳಿಗೆ ಪ್ರೋತ್ಸಾಹ ನೀಡಿ ಮೀನು ತಳಿ ಉತ್ಪಾದನೆಗೆ ಒತ್ತು ನೀಡಲಾಗುವುದು ಎಂದು ಸಚಿವರು ಹೇಳಿದರು.

ಬಿಪಿಎಲ್‌ ಕಾರ್ಡ್‌ ಸದ್ಯದಲ್ಲೇ ನಿರ್ಧಾರ
ವರ್ಷದ ಹಿಂದೆ ಅರ್ಜಿ ಸಲ್ಲಿಸಿದ್ದರೂ ಬಿಪಿಎಲ್‌ ಕಾರ್ಡ್‌ ದೊರೆಯದಿರುವ ಪ್ರಶ್ನೆಗೆ ಉತ್ತರಿಸಿದ ಸಚಿವರು ಬಿಪಿಎಲ್‌ ಕಾರ್ಡ್‌ ವಿತರಣೆ ಹಾಗೂ ಅಪೂರ್ಣ ಸ್ಥಿತಿಯಲ್ಲಿರುವ ಮನೆಗಳಿಗೆ ಸಹಾಯಧನ ಮೊತ್ತದ ಬಾಕಿ ಪಾವತಿ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

2018, 2019ರ ಸಾಲಿನಲ್ಲಿ ಸಹಾಯಧನ ದಲ್ಲಿ ಮನೆ ನಿರ್ಮಾಣ ಆರಂಭಿಸಿ ಅಡಿಪಾಯ, ಗೋಡೆ ಹಂತದಲ್ಲಿ ಬಾಕಿಯಾಗಿರುವ ಮನೆ ಗಳಿಗೆ ಸಹಾಯಧನ ಪಾವತಿಸುವ ಬಗ್ಗೆಯು ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಶಾಸಕ ಸಂಜೀವ ಮಠಂದೂರು, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ನಗರಸಭಾಧ್ಯಕ್ಷ ಕೆ. ಜೀವಂಧರ್‌ ಜೈನ್‌, ಪುಡಾ ಅಧ್ಯಕ್ಷ ಭಾಮಿ ಅಶೋಕ್‌ ಶೆಣೈ, ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು, ಸುಳ್ಯ ಮಂಡಲ ಕಾರ್ಯದರ್ಶಿ ರಾಕೇಶ್‌ ರೈ ಕೆಡೆಂಜಿ ಉಪಸ್ಥಿತರಿದ್ದರು.

Leave A Reply

Your email address will not be published.