ಪ್ರೌಢಾವಸ್ಥೆ ತಲುಪಿದ ಮುಸ್ಲಿಂ ಹುಡುಗಿಗೆ ತಾನು ಇಷ್ಟಪಟ್ಟ ಹುಡುಗನನ್ನು ಮದುವೆಯಾಗುವ ಮುಕ್ತ ಸ್ವಾತಂತ್ರ್ಯವಿದೆಯೆಂದು ತೀರ್ಪು ನೀಡಿದ ಹೈಕೋರ್ಟ್ !!

ಮುಸ್ಲಿಂ ಹುಡುಗಿಯರಿಗೆ ನ್ಯಾಯಾಲಯ ಅರ್ಹ ತೀರ್ಪೊಂದನ್ನು ನೀಡಿದೆ. ಪ್ರೌಢಾವಸ್ಥೆ ತಲುಪಿದ ಯಾವುದೇ ಮುಸ್ಲಿಂ ಬಾಲಕಿಗೆ ತಾನು ಇಷ್ಟಪಡುವ ಹುಡುಗನನ್ನು ಮದುವೆಯಾಗುವ ಮುಕ್ತ ಸ್ವಾತಂತ್ರ್ಯವಿದೆ ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ತೀರ್ಪು ನೀಡಿದೆ.

ಕುಟುಂಬದವರ ವಿರೋಧದ ನಡುವೆಯೂ 33 ವರ್ಷದ ಹಿಂದೂ ವ್ಯಕ್ತಿಯೊಬ್ಬನನ್ನು ಮದುವೆಯಾದ 17 ವರ್ಷದ ಮುಸ್ಲಿಂ ಯುವತಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಆದೇಶಿಸಿದ ಕೋರ್ಟ್‌, ಇಂತಹದ್ದೊಂದು ತೀರ್ಪು ಪ್ರಕಟಿಸಿತು.

ಮುಸ್ಲಿಂ ವಿಧಿ ವಿಧಾನದ ಪ್ರಕಾರ ಮದುವೆಯಾಗಿರುವ ಈ ಜೋಡಿಗೆ ಹುಡುಗಿಯ ಮನೆಯವರಿಂದ ಬೆದರಿಕೆ ಎದುರಾಗಿತ್ತು. ರಕ್ಷಣೆ ಬಯಸಿ ದಂಪತಿ ಹೈಕೋರ್ಟ್‌ ಮೊರೆ ಹೋಗಿದ್ದರು. ”ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಇವರ ಮದುವೆ ಸರಿಯಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮದುವೆಯಾಗಲು ಬಯಸುವ ಹುಡುಗಿಗೆ 15 ವರ್ಷ ತುಂಬಿದ್ದರೆ ಸಾಕಾಗುತ್ತದೆ. ಆದರೆ
ಇಲ್ಲಿ ಹುಡುಗಿಗೆ 17 ವರ್ಷ ತುಂಬಿದೆ. ಇನ್ನು ಹುಡುಗನ ವಯಸ್ಸು ಕೂಡ ಪ್ರೌಢಾವಸ್ಥೆ ದಾಟಿದೆ. ಈ ಪ್ರಕರಣದಲ್ಲಿ ಮುಸ್ಲಿಂ ಕಾನೂನಿನ ಆಶಯಗಳು ಸಂಪೂರ್ಣ ಈಡೇರಿವೆ. ಇದಕ್ಕೆ ವಿರೋಧ ಮಾಡುವ ಯಾವುದೇ ಹಕ್ಕು ಮನೆಯವರಿಗೆ ಇಲ್ಲ. ತಮ್ಮ ಮರ್ಜಿ ಪಾಲನೆಯಾಗಿಲ್ಲ ಎನ್ನುವ ಕಾರಣ ಅವರು ವಿರೋಧ ಮಾಡುವುದನ್ನು ಕೋರ್ಟ್‌ ಒಪ್ಪುವುದಿಲ್ಲ” ಎಂದು ನ್ಯಾಯಪೀಠ ಹೇಳಿತು.

ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ಪ್ರೌಢಾವಸ್ಥೆ ತಲುಪುವ ಮುಸ್ಲಿಂ ಯುವತಿಯು ತನಗೆ ಇಷ್ಟವಾಗುವ ಹುಡುಗನನ್ನು ಮದುವೆಯಾಗಬಹುದಾಗಿದೆ. 15ರ ಪ್ರಾಯವನ್ನು ಪ್ರೌಢಾವಸ್ಥೆ ಎಂದು ಮುಸ್ಲಿಂ ಕಾನೂನು ಗುರುತಿಸಿದೆ.

Leave A Reply

Your email address will not be published.