ಕೃಷಿ ವ್ಯಾಪಾರಸ್ಥರಿಗೆ ಗುಡ್ ನ್ಯೂಸ್ | ಆ್ಯಪ್ ಮೂಲಕ ಸಾಲ ಒದಗಿಸಲಿದೆ ಹೊಸ ಸ್ಟಾರ್ಟಪ್ ‘ಅಗ್ರಿಫೈ’ !! | ಸಾಲ ಪಡೆಯಲು ಏನು ಮಾಡಬೇಕು?? ಇಲ್ಲಿದೆ ಮಾಹಿತಿ

ಯಾವುದೇ ರೀತಿಯ ಹೊಸ ಯೋಜನೆಗಳ ಪ್ರಾರಂಭ ಮಾಡಬೇಕೆಂದರೆ ಅದಕ್ಕೆ ಹಣ ಬೇಕೇ ಬೇಕು. ಅದಕ್ಕಾಗಿ ಸಾಲ ಕೂಡ ಮಾಡಬೇಕಾಗುತ್ತದೆ. ಆದರೆ ಸಾಲ ಕೊಡುವವರಾರು? ಪ್ರತಿದಿನ ಕಣ್ಣಿನ ಮುಂದೆ ಕಾಣುವ ಬ್ಯಾಂಕ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್ಸ್ ಕೊಟ್ಟು ಮುಗಿಸಲು ಸಾಧ್ಯವಿಲ್ಲ. ದೊಡ್ಡ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಾ ತಿಂಗಳ ವೇತನ ಪಡೆಯುವವರಿಗೆ ಬ್ಯಾಂಕ್‌ಗಳು ನಾ ಮುಂದು ತಾ ಮುಂದು ಎಂದು ಕ್ರೆಡಿಟ್ ಕಾರ್ಡ್, ಸಾಲಸೌಲಭ್ಯ ನೀಡುತ್ತವೆ. ಆದರೆ, ದೇಶದ ಬೆನ್ನೆಲುಬು ಎನಿಸಿಕೊಂಡಿರುವ ಕೃಷಿ ಕ್ಷೇತ್ರದವರಿಗೆ ಸಾಲ ಎಂಬುದು ಸುಲಭದ ಮಾತಲ್ಲ.

ಕೃಷಿಕನ ಸಂಕಷ್ಟಗಳು ಒಂದೆರಡಲ್ಲ. ಸರಿಯಾದ ಸಮಯಕ್ಕೆ ಮಳೆ ಬರುವುದಿಲ್ಲ, ಒಂದು ವೇಳೆ ಮಳೆ ಬಂದರೆ ಬೀಜ ಮತ್ತು ರಸಗೊಬ್ಬರ ಸಿಗುವುದಿಲ್ಲ. ಎಷ್ಟೋ ಬಾರಿ ಹಣಕಾಸಿನ ಮುಗ್ಗಟ್ಟಿನಿಂದಲೇ ತಡವಾಗಿ ಬಿತ್ತನೆ ಮಾಡಿ ಬೆಳೆ ನಷ್ಟದಂತಹ ಸಮಸ್ಯೆಗಳಿಗೆ ಒಳಗಾಗಿ ಸಾಲದ ಸುಳಿಯಲ್ಲಿ ಸಿಲುಕುತ್ತಾನೆ. ಗ್ರಾಮೀಣ ಭಾಗದ ರೈತರು ಈಗಲೂ ತಮಗೆ ಸಾಲ ಸೌಲಭ್ಯ ಬೇಕು ಎಂದರೆ ಬ್ಯಾಂಕ್‌ಗಳಿಗಿಂತ ಹೆಚ್ಚಾಗಿ ಬೀಜ, ರಸಗೊಬ್ಬರ ಮಾರಾಟ ಮಾಡುವ ಕೃಷಿ ವ್ಯಾಪಾರಸ್ಥರನ್ನೇ ಅವಲಂಬಿಸಿದ್ದಾರೆ.

ಈ ರೀತಿಯ ಕೃಷಿ ವ್ಯಾಪಾರಸ್ಥರೂ ಸಹ ಸೀಮಿತವಾಗಿಯೇ ತಮ್ಮ ವ್ಯವಹಾರ ನಡೆಸುತ್ತಾರೆ. ಅವರಲ್ಲಿರುವ ಸೀಮಿತ ಹಣಕಾಸು ವ್ಯವಸ್ಥೆಯಡಿ ಕೆಲವೇ ಕೆಲವು ರೈತರೊಂದಿಗೆ ವ್ಯವಹಾರ ನಡೆಸುತ್ತಾರೆ. ಇಂತಹ ಕೃಷಿ ವ್ಯಾಪಾರಸ್ಥರನ್ನು ಗುರುತಿಸಿ ಅವರ ಸಿಬಿಲ್ ಸ್ಕೋರ್ ಹೆಚ್ಚಿಸುವ ಮೂಲಕ, ಸಾಲ ಸೌಲಭ್ಯದ ನೆರವು ಒದಗಿಸಿ ಆ ಮೂಲಕ ರೈತರಿಗೆ ಸಕಾಲಕ್ಕೆ ಎಲ್ಲ ನೆರವೂ ಸಿಗುವಂತಹ ಉದ್ದೇಶದೊಂದಿಗೆ ‘ಅಗ್ರಿಫೈ’ ಸ್ಟಾರ್ಟಪ್‌ ಕಾರ್ಯ ಆರಂಭಿಸಿದೆ. ಈಗಾಗಲೇ ಹಲವು ಜಿಲ್ಲೆಗಳ ರೈತರು ಅಗ್ರಿಫೈ ಮೂಲಕ ಸಾಲಸೌಲಭ್ಯ ಪಡೆದಿದ್ದಾರೆ.

ಏನಿದು ಅಗ್ರಿಫೈ??

ಎಪಿಎಂಸಿ ಮಾರುಕಟ್ಟೆಗಳಗಳಲ್ಲಿ ಇರುವಂತಹ ಇಂತಹ ಕೃಷಿ ವ್ಯಾಪಾರಸ್ಥರು ಸೀಮಿತ ರೈತರಿಗೆ ಆ ವರ್ಷಕ್ಕೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಒದಗಿಸುತ್ತಾರೆ. ವರ್ಷದ ಬೆಳೆ ಬಂದ ನಂತರ ಅದನ್ನು ಅವರ ಬಳಿಯೇ ಮಾರಾಟ ಮಾಡಬೇಕು. ಹಿಂದೆ ತಾವು ನೀಡಿದ ಸಾಲವನ್ನು ಮರುಪಾವತಿ ಮಾಡಿಕೊಂಡು ಬಾಕಿ ಹಣ ರೈತನಿಗೆ ಕೊಡುತ್ತಾರೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪದ್ಧತಿ, ಹೆಚ್ಚಿನ ಕಡೆ ರೈತರು ಇದೇ ವ್ಯವಸ್ಥೆಯನ್ನು ಈಗಲೂ ಅವಲಂಬಿಸಿದ್ದಾರೆ.

ಸ್ಟಾರ್ಟಪ್ ಎಂದರೆ ಹೆಚ್ಚಾಗಿ ತಂತ್ರಜ್ಞಾನ ಆಧಾರಿತವಾಗಿ ಇರುವುದು ಸಾಮಾನ್ಯ. ಆದರೆ, ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿದ್ದಂತಹ ಅಭಿಲಾಷ್ ತಿರುಪತಿ, ಕೆ.ಆರ್. ರಘುಚಂದ್ರ ಮತ್ತು ಮಿತಿಲೇಶ್ ಕುಮಾರ್ ಎಂಬುವವರು ಅಗ್ರಿನ್ನೋವ್ ಟೆಕ್ನಾಲಜೀಸ್ ಪ್ರೈ.ಲಿ. ಎಂಬ ಕಂಪನಿ ಸ್ಥಾಪಿಸಿ ಆ ಮೂಲಕ ‘ಅಗ್ರಿ ಫೈ’ ಹೆಸರಿನಲ್ಲಿ ಕೃಷಿ ಕ್ಷೇತ್ರದ ಒಟ್ಟಾರೆ ಬೆಳವಣಿಗೆಗಾಗಿ ಸ್ಟಾರ್ಟಪ್ ಯೋಜನೆಗಳನ್ನು ರೂಪಿಸಿದ್ದಾರೆ.

ಅಗ್ರಿ ಫೈ ಮೂಲಕ ಈಗಾಗಲೇ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೇರಳದಲ್ಲಿ ಕೃಷಿ ಟ್ರೇಡರ್ಸ್‌ಗಳನ್ನು ಹುಡುಕಿ ಅವರಿಗೆ ಸಾಲದ ನೆರವು ಒದಗಿಸುತ್ತದೆ. ರೈತರಿಗೆ ಸಾಲಸೌಲಭ್ಯ ನೀಡುವಂತಹ ವ್ಯಾಪಾರಸ್ಥರಿಗೆ ಸಾಲಸೌಲಭ್ಯ ಒದಗಿಸಿ ಆ ಮೂಲಕ ಹೆಚ್ಚಿನ ರೈತರಿಗೆ ಸಾಲದ ನೆರವು ಒದಗಿಸಬೇಕು ಎಂಬುದು ಅಗ್ರಿಫೈನ ಮುಖ್ಯ ಉದ್ದೇಶ.

ನೀವೂ ಸಹ ಕೃಷಿ ಕ್ಷೇತ್ರದಲ್ಲಿ ಟ್ರೇಡರ್ಸ್ ಆಗಿದ್ದು, ನಿಮಗೂ ಸಾಲಸೌಲಭ್ಯ ದೊರಕಬೇಕು ಎಂಬ ಇಚ್ಛೆ ಇದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೃಷಿ ಖಾತಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಅಲ್ಲಿ ಕೇಳಿರುವ ವಿವರಗಳನ್ನು ಭರ್ತಿ ಮಾಡುವ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅಗ್ರಿಫೈ ಕಡೆಯಿಂದ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ಬ್ಯಾಂಕ್ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಿಂದ ನಿಮಗೆ ಸಾಲದ ನೆರವು ಒದಗಿಸಿಕೊಡುತ್ತಾರೆ. ಇನ್ನು ನಿಮ್ಮ ಸಿಬಿಲ್ ಸಂಖ್ಯೆ ಕಡಿಮೆ ಇದ್ದರೂ ಸಹ ನಿಮ್ಮ ವಹಿವಾಟು ಪರಿಗಣಿಸಿ ಸಾಲದ ನೆರವು ಒದಗಿಸಲೂ ಪ್ರಯತ್ನಿಸಲಾಗುತ್ತದೆ.

ಕೃಷಿ ಖಾತಾ ಆ್ಯಪ್ ಮೂಲಕ ರೈತರಿಗೆ ಮತ್ತು ಟ್ರೇಡರ್ಸ್‌ಗಳಿಗೆ ಕೇವಲ ಸಾಲದ ನೆರವು ನೀಡುವುದಷ್ಟೇ ಅಲ್ಲದೆ, ರೈತರ ಅಗತ್ಯಕ್ಕೆ ತಕ್ಕಂತೆ ದೈನಂದಿನ ಮತ್ತು ತಾಂತ್ರಿಕ ಮಾಹಿತಿಗಳನ್ನೂ ಒದಗಿಸಲಾಗುವುದು. ಯಾವುದೇ ಜಿಲ್ಲೆ ಅಥವಾ ಹೋಬಳಿಯ ರೈತ ತನ್ನ ಜಮೀನು ಮತ್ತು ತಾನು ಬೆಳೆಯುವ ಬೆಳೆಯ ವಿವರವನ್ನು ದಾಖಲಿಸಿದರೆ ಅಲ್ಲಿ ಮಳೆ ಯಾವಾಗ ಬರುತ್ತದೆ, ಈ ವರ್ಷ ಯಾವ ಬೆಳೆ ಹೇಗೆ ಇಳುವರಿ ಕೊಡಬಹುದು, ಯಾವ ಬೆಳೆಗೆ ಮಾರುಕಟ್ಟೆಯ ದರ ಎಷ್ಟಿರಬಹುದು, ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಬೇಡಿಕೆ ಸೃಷ್ಟಿಸುವಂತ ಧಾನ್ಯ ಅಥವಾ ತೋಟಗಾರಿಕಾ ಬೆಳೆ ಯಾವವು, ಬೆಳೆಗೆ ತಗುಲಬಹುದಾದ ರೋಗದ ಮಾಹಿತಿ ಮತ್ತು ಅದಕ್ಕೆ ಪರಿಹಾರ ಹೀಗೆ ಹತ್ತು ಹಲವು ಪ್ರಯೋಜನಗಳನ್ನು ರೈತರೂ ಪಡೆದುಕೊಳ್ಳಬಹುದು ಅಗ್ರಿಫೈ ಸ್ಥಾಪಕರು ತಿಳಿಸಿದ್ದಾರೆ.

Leave A Reply

Your email address will not be published.