ತುಳುನಾಡಿನ ಜನಮನಸ್ಸು ಗೆದ್ದ ‘ದೇವೆರೆ ಕಿನ್ನಿ’!! ಮತ್ತೊಮ್ಮೆ ತಾಯಿಯ ನಿಷ್ಕಲ್ಮಶ ಮಡಿಲಿನಲ್ಲಿ ಜೋಗುಳ ಕೇಳುವಂತೆ ಮಾಡಿದ ಹಾಡಿನ ಹಿಂದಿದೆ ಮಮತೆಯ ಚಿತ್ರಣ!!

ಕೆಲ ದಿನಗಳಿಂದ ಅದೊಂದು ಹಾಡು ಜೋಗುಳದ ರೀತಿಯಲ್ಲಿ ಎಲ್ಲೆಡೆಯಿಂದಲೂ ಕೇಳುತ್ತಿದೆ. ವಾಟ್ಸಪ್ ಸ್ಟೇಟಸ್ ಗಳಲ್ಲಿ,ಶಾಲೆಗೆ ತೆರಳುವ ಮಕ್ಕಳ ಬಾಯಿಂದ ಹಿಡಿದು ಸಣ್ಣ ಪುಟ್ಟ ಕೆಲಸದಲ್ಲಿ ಮಗ್ನರಾಗಿರುವ ಕೆಲ ಯುವಕ-ಯುವತಿಯರ ಬಾಯಲ್ಲಿ, ಇತರ ಸುತ್ತಮುತ್ತಲ ಪ್ರದೇಶಗಳಲ್ಲಿ ಹಾಗೂ ಮಾತೆಯರ ಬಾಯಲ್ಲೂ ಅದೇ ಹಾಡು. ಅಷ್ಟರ ಮಟ್ಟಿಗೆ ಅದೊಂದು ಆಲ್ಬಮ್ ಸಾಂಗ್ ಎಲ್ಲರ ಮನಗೆದ್ದು, ಅತೀ ಹೆಚ್ಚು ವೀಕ್ಷಣೆ ಹೊಂದಿ ತನ್ನ ಇರುವಿಕೆಯನ್ನು ಗುರುತಿಸಿಕೊಂಡಿದೆ.ಇತ್ತೀಚಿನ ದಿನಗಳಲ್ಲಿ ಬರುವ ಹಲವಾರು ಆಲ್ಬಮ್ ಸಾಂಗ್ ಗಳಿಗಿಂತಲೂ ಈ ಹಾಡಿನಲ್ಲಿ ಅದೇನೋ ಮಮತೆ, ಪ್ರೀತಿ ಹೆಚ್ಚಾಗಲು ಕಾರಣವೇನೆಂದು ಹುಡುಕಹೊರಟಾಗ ಸಿಕ್ಕಿರುವುದಿಷ್ಟು.!!

ಹೌದು.ಕಳೆದ ಕೆಲ ದಿನಗಳ ಹಿಂದೆ ತೆರೆಕಂಡ ‘ದೇವೆರೆ ಕಿನ್ನಿ’ ಎಂಬ ತುಳು ಹಾಡು ಇದೀಗ ತುಳುನಾಡು ಮಾತ್ರವಲ್ಲದೇ ಉಳಿದೆಡೆಗಳಲ್ಲೂ ಜನರ ಮನಗೆದ್ದಿದೆ. ಕೇಳಲು ಮೃದುವಾಗಿ, ಇಂಪಾಗಿ ಜೋಗುಳದಂತೆ ಕೇಳುವ ಈ ಹಾಡಿನಲ್ಲಿ ತಾಯಿಯ ಮಮತೆ ಎದ್ದು ಕಾಣುತ್ತದೆ.ಅದೊಂದು ಕನ್ನಡ ಭಾವಗೀತೆಯ ಸಾಲಿಗೆ ತುಳು ಪದ ರಚಿಸಿದ ಸಾಹಿತಿಯ ಕಲ್ಪನೆಗೆ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಾತು ವ್ಯಕ್ತವಾಗಿದೆ.

ಸಾಹಿತಿ: ಅಮರನಾಥ್ ಪೂಪಡಿಕಲ್ಲ್

ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮನನ್ನು ಕುರಿತು ಹೇಳುವ ಮುಗ್ಧ ಮಾತುಗಳನ್ನು ಹಾಡಿನ ರೂಪದಲ್ಲಿ ತರಲಾಗಿದೆ. ಹೊತ್ತು ಮುಳುಗಿತು, ಸುತ್ತಲೂ ಕತ್ತಲೆ ಆವರಿಸಿದೆ, ಈ ಹೊತ್ತಲ್ಲಿ ಬೊಬ್ಬೆ ಹಾಕಬೇಡ ಮಗುವೇ(ಪೊರ್ತು ಕಂತ್ಡ್ ಬಾಲೆ, ಸೂತ್ತ ಕತ್ತಲೆ ಛಾಯೆ)ಎಂದು ಪ್ರಾರಂಭವಾಗುವ ಹಾಡು ಮುಂದಕ್ಕೆ ಸಾಗಿ ಹಠ ಮಾಡದೆ ಉಣ್ಣು ಎನ್ನುವ ಕೊಂಡಾಟದ ಮಾತುಕೂಡ ಬರುತ್ತದೆ. ಎಲ್ಲವೂ ತಾಯಿ ತನ್ನ ಮಗುವಿಗೆ ಜೋಗುಳದ ರೀತಿಯಲ್ಲಿ ಹೇಳುವುದನ್ನು ಹಾಡಿನಲ್ಲಿ ಚಿತ್ರಿಸಲಾಗಿದೆ.

ಗಾಯಕಿ: ತ್ರೀಕ್ಷಾ ಮಾಡೂರ್

ಮಗುವಿಗೆ ಬಾಲ್ಯದ ಶಾಲೆ ಮನೆಯೇ ಆಗಿದ್ದು, ಮನೆಯಿಂದಲೇ ಮಗು ಉತ್ತಮ ಅಭ್ಯಾಸ ಕಲಿಯತೊಡಗುತ್ತದೆ. ಅಂತೆಯೇ ಈ ಹಾಡಿನಲ್ಲಿ ಆ ಪ್ರಸಂಗವನ್ನು ಚಿತ್ರೀಸಲಾಗಿದ್ದು ಬಣ್ಣ ಬಣ್ಣದ ಲೋಕದಲ್ಲಿ ದಾರಿತಪ್ಪಬೇಡ, ಜನra ಮನಸ್ಸು ಗೆಲ್ಲಬೇಕೇ ಹೊರತು ದ್ವೇಷವಲ್ಲ ಎಂಬುವುದನ್ನೂ ಹೇಳಲಾಗಿದೆ.

ಈ ಸುಂದರ ಹಾಡು ಅಮರನಾಥ್ ಪೂಪಡಿಕಲ್ಲ್ ಅವರ ಸಾಹಿತ್ಯದಲ್ಲಿ, ತ್ರೀಕ್ಷಾ ಮಾಡೂರ್ ಅವರ ಸ್ವರದಲ್ಲಿ ತೆರೆಕಂಡಿದ್ದು, ಅತೀ ಹೆಚ್ಚು ವೀಕ್ಷಣೆ ಕಂಡಿದೆ.ತೆರೆಗೆ ಬಂದ ಬಳಿಕ ಹಾಡನ್ನು ಆಲಿಸಿದ ಹಲವರಿಗೆ ತನ್ನ ತಾಯಿಯ ನೆನಪು ಆಗಿದ್ದಂತೂ ಸತ್ಯ.ಅದೇನೇ ಇರಲಿ,ಈ ಹಾಡನ್ನು ಕೇಳುತಿದ್ದರೆ ಮತ್ತೊಮ್ಮೆ ತಾಯಿಯ ನಿಷ್ಕಲ್ಮಶ ಮಡಿಲಿನಲ್ಲಿ ಮಲಗಿ ಜೋಗುಳ ಕೇಳಬೇಕು ಎಂದೆನಿಸದೆ ಇರದು.

ದೇವೆರೆ ಕಿನ್ನಿ ಹಾಡು ಆಲಿಸಲು ಇಲ್ಲಿ ಕ್ಲಿಕ್ ಮಾಡಿ https://youtu.be/EdzMaugsLcA

Leave A Reply

Your email address will not be published.