ಕ್ರಿಸ್‌ಮಸ್‌ ಹಬ್ಬದ ವಿಶೇಷ | ಜಗಕೆ ಬೆಳಕಾಗಿ ಅವತರಿಸಿದ ಪ್ರಭು ಯೇಸು ಕ್ರಿಸ್ತ !!

ಕ್ರಿಸ್ಮಸ್ ಹಬ್ಬ ಸಮಸ್ತ ಕ್ರೈಸ್ತ ಬಾಂಧವರಿಗೆ ಅತೀ ಪವಿತ್ರವಾದ ಹಬ್ಬ. ಕ್ರಿಸ್ಮಸ್ ದಿನ ನಮ್ಮ ರಕ್ಷಕ ಅಂದರೆ ನಮ್ಮ ದೇವರಾದ ಪ್ರಭು ಯೇಸು ಕ್ರಿಸ್ತರು ಜನಿಸಿದ ಅತೀ ಸಂಭ್ರಮದ ಹಬ್ಬ. ಸಂತ ಜೋಸೆಫ್ ಹಾಗೂ ಕನ್ಯಾಮರಿಯಮ್ಮನವರ ಪುತ್ರರಾಗಿ ಪ್ರಭು ಯೇಸುಕ್ರಿಸ್ತರು ಜನಿಸುತ್ತಾರೆ. ಪ್ರಭು ಯೇಸು ಕ್ರಿಸ್ತರು ಈ ಭೂಮಿಗೆ ಬಂದದ್ದು ನಮ್ಮ ಹಾಗೂ ಈ ಲೋಕದ ಪಾಪವನ್ನು ಪರಿಹರಿಸುವುದಕ್ಕೋಸ್ಕರ.

”ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ ಸಮಾಧಾನ” ಎಂಬ ಗಾಯನವನ್ನು ದೇವದೂತರು ಪ್ರಭು ಯೇಸು ಕ್ರಿಸ್ತ ಜನಿಸಿದಾಗ ಹಾಡುತ್ತಾರೆ. ಈ ಮೂಲಕ ಕ್ರಿಸ್ತನ ಜನನದ ಶುಭ ಸಂದೇಶ ಎಲ್ಲರಿಗೂ ತಿಳಿಯುತ್ತದೆ. ಪವಿತ್ರ ಗ್ರಂಥ ಬೈಬಲ್ ನಲ್ಲಿ ಉಲ್ಲೇಖಿಸಿದಂತೆ ದೇವರು ನಮ್ಮ ಜೊತೆ ಸದಾ ಇದ್ದಾರೆ.

ನಮ್ಮ ಪಾಪಗಳಿಂದ ಮುಕ್ತಿ ನೀಡಲು ದೇವರು ತನ್ನ ಒಬ್ಬನೇ ಮಗನನ್ನು ಈ ಜಗತ್ತಿಗೆ ಕಳಿಸುತ್ತಾರೆ. ಋಗ್ವೇದದಲ್ಲಿ ಪ್ರಭು ಯೇಸು ಸ್ವಾಮಿಯ ಬಗ್ಗೆ ಸ್ಪಷ್ಟವಾದ ಉಲ್ಲೇಖವಿದೆ. ಅದರಲ್ಲಿ ಹೀಗೆ ಹೇಳುತ್ತದೆ –
ಓಂ ಶ್ರೀ ಕನ್ನಿಕಾಸುತನಾಯ ನಮಃ ಅಂದರೆ ಕನ್ನಿಕೆಯ ಮೂಲಕ ಜನಿಸಿದವನು. ಓಂ ಶ್ರೀ ದರಿದ್ರಾಯ ನಮಃ. ಅಂದರೆ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿದವನು ಮತ್ತು ಜೀವನ ಸಾಗಿಸಿದವನು.ಓಂ ಶ್ರೀ ವೃಕ್ಷಶೂಲಾಯ ನಮಃ ಅಂದರೆ ಮರದ ಶಿಲುಬೆಯಲ್ಲಿ ತನ್ನ ಜೀವ ಅರ್ಪಿಸಿದವನು. ಕೊನೆಯದಾಗಿ ಓಂ ಶ್ರೀ ಪಂಚಕಾಯಾಯ ನಮಃ ಅಂದರೆ ತನ್ನ ದೇಹದಲ್ಲಿ 5 ಗಾಯ ಉಳ್ಳವನು.

ದೇವರು ಮನುಷ್ಯರಾಗಿದ್ದಾರೆ ಹಾಗಾದರೆ ನಾವು ಮನುಷ್ಯರಾಗುವುದು ಯಾವಾಗ ? ಅಂದರೆ ನಮ್ಮ ನೆರೆಹೊರೆಯವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ನಾವು ನಿಜವಾದ ಮನುಷ್ಯರಾಗಲು ಸಾಧ್ಯ. ‘ತುಕ್ಕು ಹಿಡಿಯುವುದಕ್ಕಿಂತ ಸವೆದು ಹೋಗುವುದು ಲೇಸು’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಅಂತೆಯೇ ನಾವು ಸೋಮಾರಿಗಳಾಗದೇ ಪರರ ಸೇವೆಗೆ ನಮ್ಮ ಜೀವನವನ್ನು ಮೀಸಲಿರಿಸಬೇಕು. ಹಿಂದು ಧರ್ಮದಲ್ಲಿ ಇದರ ಬಗ್ಗೆ ಸ್ಪಷ್ಟವಾದ ಉಲ್ಲೇಖವಿದೆ. ಅದರಲ್ಲಿ ಹೇಳುತ್ತೆ – ‘ಸೇವಾ ಪರಮೋಧರ್ಮ.’ ಮದರ್ ತೆರೆಸಾರವರು ಮಾಡಿದ್ದು ಅದನ್ನೇ. ನಾನು ಮಾಡುವುದು ರೋಗಿಗಳ ಸೇವೆಯನ್ನಲ್ಲ, ದರಿದ್ರನಾರಾಯಣ ಸೇವೆ ಎಂದು ಅವರು ಹೇಳಿಕೊಂಡಿದ್ದರು. ಬಡವರಿಗೆ ದೀನದಲಿತರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಇದು ದೇವರು ಮೆಚ್ಚುವ ಕಾರ್ಯ.

ನಮ್ಮ ಸರಳ ಜೀವನದ ಮೂಲಕ ಇತರರಿಗೆ ಮಾದರಿ ವ್ಯಕ್ತಿಗಳಾಗೋಣ. ನಮ್ಮ ಧರ್ಮವನ್ನು ಚೆನ್ನಾಗಿ ಪಾಲಿಸಿ, ಇತರರ ಧರ್ಮಕ್ಕೂ ಗೌರವ ಕೊಡುವುದು ನಮ್ಮ ಧರ್ಮ. ಈ ನಿಟ್ಟಿನಲ್ಲಿ ಅಂತರ್ ಧರ್ಮಿಯ ಸಂವಾದ ಕಾರ್ಯಕ್ರಮ ಪೂರಕವಾಗಿದೆ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಗೊಳ್ಳಲು ಸದಾ ಪ್ರಾರ್ಥಿಸೋಣ. ಈ ಮೂಲಕ ಇನ್ನೊಬ್ಬ ಕ್ರೈಸ್ತ ನಾವಾಗೋಣ. ತಮಗೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

ಬರಹ: ಸುನಿಲ್ ಗೊನ್ಸಾಲ್ವಿಸ್, ಮಂಗಳೂರು.

Leave A Reply

Your email address will not be published.