20 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿದ್ದ ನಕ್ಸಲ್ ಹೊಸಗದ್ದೆ ಪ್ರಭಾ ಶರಣಾಗತಿ | 2010ರಲ್ಲಿ ಸತ್ತಿದ್ದಾಳೆ ಎಂದವಳು ಏಕಾಏಕಿ ಪೊಲೀಸರಿಗೆ ಶರಣಾಗತಿ

ಕಳೆದ 20 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಕಾಡು ಅಲೆಯುತ್ತಾ ನಕ್ಸಲ್ ಸಂಘಟನೆಯನ್ನು ಬಲಪಡಿಸುತ್ತಿದ್ದ ಬಿ. ಜಿ. ಕೃಷ್ಣಮೂರ್ತಿ ಕೇರಳ ಪೊಲೀಸರ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ಬೆನ್ನಲ್ಲೇ ಕೃಷ್ಣಮೂರ್ತಿಯ ಪತ್ನಿ ಹೊಸಗದ್ದೆ ಪ್ರಭಾ ತಮಿಳುನಾಡಿನ ಪೊಲೀಸರಿಗೆ ಶರಣಾಗಿದ್ದಾಳೆ.

ಈ ಮೂಲಕ ಮಲೆನಾಡಿನ ನಕ್ಸಲ್‌ ಹೋರಾಟದ ಕೊನೆಯ ಕೊಂಡಿ ಕಳಚಿ ಬಿದ್ದಂತಾಗಿದೆ. ಪ್ರಭಾ ಶರಣಾಗತಿಯ ಮೂಲಕ ಕಟ್ಟರ್ ನಕ್ಸಲರು ಕೂಡ ತಮ್ಮ ಹಾದಿಯಲ್ಲಿ ಯಶಸ್ಸು ಸಿಗದು ,ಕಾಡಿನ ಹೋರಾಟಕ್ಕಿಂತ ನಾಡಿನ ನಡುವಿನ ಹೋರಾಟವೇ ಮೇಲು ಎಂದು ಭಾವಿಸಿದಂತೆ ಕಾಣುತ್ತಿದೆ.

ಒಟ್ಟಾರೆಯಾಗಿ ಹೊಸಗದ್ದೆ ಪ್ರಭಾ ಶರಣಾಗತಿಯ ಮೂಲಕ ಮಲೆನಾಡಿನ ನಕ್ಸಲ್ ಚಟುವಟಿಕೆಗೆ ಬಹುತೇಕ ಫುಲ್‌ಸ್ಟಾಪ್ ಬಿದ್ದಂತಾಗಿದೆ. ಆದರೆ ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ನಕ್ಸಲ್ ಬಿ. ಜಿ. ಕೃಷ್ಣಮೂರ್ತಿ ಕೇರಳದ ವೈಯನಾಡು ಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆಯ ವೇಳೆ ಸೆರೆ ಸಿಕ್ಕರೆ, ಇತ್ತ ಆತನ ಸಂಗಾತಿ ಪ್ರಭಾ ತಮಿಳುನಾಡಿನ ಪೊಲೀಸರಿಗೆ ಶರಣಾಗಿದ್ದಾಳೆಂದರೆ ಈ ಇಬ್ಬರು ತಮ್ಮ ಸಂಗಾತಿಗಳೊಂದಿಗೆ ಕರ್ನಾಟಕ ತೊರೆದು ಬೇರೆ ಕಡೆ ಬೇರೂರಿ ಬಹಳ ಸಮಯವಾಗಿದೆ ಎಂಬುದು ಕೂಡ ಬೆಳಕಿಗೆ ಬಂದಂತಾಗಿದೆ.

ಪ್ರಭಾ 2010 ರಿಂದ ಎಲ್ಲಿಯೂ ಪೊಲೀಸರಿಗೆ ಕಾಣಿಸಿರಲಿಲ್ಲ. ಅಥವಾ ಪೊಲೀಸರ ಅರಿವಿಗೆ ಈಕೆಯ ಚಲನವಲನಗಳು ಕಂಡು ಬಂದಿರಲಿಲ್ಲ. ಹೀಗಾಗಿ ಈಕೆ ಮೃತಳಾಗಿರಬೇಕು ಎಂದು ಭಾವಿಸಲಾಗಿತ್ತು. ಬಿ. ಜಿ. ಕೃಷ್ಣಮೂರ್ತಿಯ ಸೆರೆಯ ಬಳಿಕ, ಆಕೆಯ ಜೊತೆ ಈಕೆಯ ಬದಲಿಗೆ ಸಾವಿತ್ರಿ ಎಂಬಾಕೆ ಇದ್ದುದನ್ನು ನೋಡಿದ ಹೊರ ಜಗತ್ತು ಈಕೆ ನಿಜಕ್ಕೂ ಇಲ್ಲ ಎಂದೇ ಭಾವಿಸಿತ್ತು.

ಆದರೆ ಏಕಾಏಕಿ ಈಕೆ ಈಗ ಶರಣಾಳಾಗಿದ್ದಾಳೆ. ಮಲೆನಾಡಿನ ಆರಂಭಿಕ ನಕ್ಸಲ್ ಚಳವಳಿಯಲ್ಲಿ ಕಾಣಿಸಿಕೊಂಡ ಸಿರಿಮನೆ ನಾಗರಾಜ್ ಮತ್ತಿತರರು ಶರಣಾಗತಿಯ ಮೂಲಕ ಮುಖ್ಯವಾಹಿನಿಗೆ ಬಂದ ಬಳಿಕವೂ ಬಿ. ಜಿ. ಕೃಷ್ಣಮೂರ್ತಿಯಾಗಲೀ ಅಥವಾ ಈತನ ಪತ್ನಿ ಹೊಸಗದ್ದೆ ಪ್ರಭಾ ಮತ್ತವರ ತಂಡವಾಗಲೀ ಶರಣಾಗತಿಗೆ ನಿರಾಕರಣೆ ಮಾಡಿ ತಮ್ಮ ನಕ್ಸಲ್ ಹಾದಿಯಲ್ಲಿಯೇ ಸಾಗಿ ಹೋಗಿದ್ದರು.

ಆದರೆ ಏಕಾಏಕಿಯಾಗಿ ಈಗ ಶರಣಾಗಿತಿಯಾಗಿದ್ದಾಳೆ.ಇದು ನಕ್ಸಲ್ ಬಿ.ಜಿ. ಕೃಷ್ಣಮೂರ್ತಿಯ ಬಂಧನವೇ ಕಾರಣ ಎನ್ನಲಾಗುತ್ತಿದೆ.

ಬಿ. ಜಿ. ಕೃಷ್ಣಮೂರ್ತಿಯ ಆರೋಗ್ಯದ ಕುರಿತು ಸಾಕಷ್ಟು ವಿಷಯ ಹರಿದಾಡುತ್ತಿತ್ತು. ಆತ ತೀವ್ರ ಅಸ್ವಸ್ಥನಾಗಿದ್ದಾನೆ ಎಂಬ ಮಾತು ಕೇಳಿ ಬರುತ್ತಿತ್ತು. ಈತ ಮೃತಪಟ್ಟಿರಬಹುದು ಎಂಬ ಸುದ್ದಿಯೂ ಇತ್ತು. ಆದರೆ ಈಗ ಸಿಕ್ಕಿರುವ ಫೋಟೋ ನೋಡಿದ ಬಳಿಕ ಈತ ಆರೋಗ್ಯವಾಗಿಯೇ ಇದ್ದಂತಿದೆ.

ಹೊಸಗದ್ದೆ ಪ್ರಭಾ ಸತ್ತಿದ್ದಾಳೆ ಎಂಬ ಸುದ್ದಿ ಹರಡಿತ್ತು

2010 ರಲ್ಲಿ ನಕ್ಸಲ್‌ ಪ್ರಭಾ ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಗ್ರಾಮದ ಮುಖಂಡರೊಬ್ಬರಿಗೆ ಪ್ರಭಾ ಸಾವನ್ನಪ್ಪಿದ್ದಾಳೆ. ಈಕೆಗೆ ಶ್ರದ್ಧಾಂಜಲಿ ಅರ್ಪಿಸಿ ಎಂದು ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆ ಮಾಡಿದ್ದರು. ಹೀಗಾಗಿ, ಅಂದು ಗ್ರಾಮಸ್ಥರೆಲ್ಲಾ ಪ್ರಭಾ ಮನೆ ಮುಂದೆ ಜಮಾಯಿಸಿದ್ದರು. ಪೊಲೀಸರು ಕೂಡ ಪ್ರಭಾ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಏಕೆಂದರೆ ಆಕೆ ಎಲ್ಲಿಯೂ ಕಾಣಸಿಕ್ಕಿರಲಿಲ್ಲ. ಆದರೆ, ಆಕೆಯ ಶವ ಸಿಗದೇ ಸಾವನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಆಗಿನ ಎಸ್‌ಪಿ ಮುರುಗನ್‌ ಹೇಳಿದ್ದರು.

ಆದರೆ, ನಕ್ಸಲ್‌ ಪ್ರಭಾ ಕೇರಳದಲ್ಲಿ ನಕ್ಸಲ್‌ ಸಂಘಟನೆಯಲ್ಲಿ ಸಕ್ರಿಯಳಾಗಿರುವ ಬಗ್ಗೆ ಇತ್ತೀಚೆಗೆ ಪೊಲೀಸರಿಗೆ ಮಾಹಿತಿ ದಟ್ಟವಾಗಿ ಸಿಕ್ಕಿತ್ತು. ಪತಿ ಬಿ.ಜಿ. ಕೃಷ್ಣಮೂರ್ತಿ, ಪ್ರಭಾ, ಸಾವಿತ್ರಿ, ವಿಕ್ರಂ ಗೌಡ ಸೇರಿದಂತೆ ಮಲೆನಾಡಿನ ನಕ್ಸಲರೆಲ್ಲರೂ ಕೇರಳದಲ್ಲಿ ಆಶ್ರಯ ಪಡೆದಿದ್ದರು.

ಹೊಸಗದ್ದೆ ಪ್ರಭಾ ವಿರುದ್ಧ ರಾಜ್ಯದಲ್ಲಿ 40ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ. ಶಿವಮೊಗ್ಗದಲ್ಲಿ ತಲ್ಲೂರು ಅಂಗಡಿ ಬಸ್‌ ಸುಟ್ಟಪ್ರಕರಣ ಸೇರಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿದೆ. ಆಕೆಯನ್ನು ಹುಡುಕಿಕೊಟ್ಟವರಿಗೆ ಐದು ಲಕ್ಷ ಬಹುಮಾನ ಘೋಷಿಸಲಾಗಿತ್ತು.

Leave A Reply

Your email address will not be published.