ನರಸಿಂಹಗಡದಲ್ಲಿ ಅರಣ್ಯ ಇಲಾಖೆ ಹಾಗೂ ಪುರಾತತ್ವ ಸರ್ವೇಕ್ಷಣ ಇಲಾಖೆ ಸಿಬ್ಬಂದಿಗಳದ್ದೇ ಕಾರುಬಾರು | ಟಿಕೇಟ್ ನೀಡದೆ ಹಣ ವಸೂಲಿ ಮಾಡುವ ಸಿಬ್ಬಂದಿಗಳು, ಟಿಕೆಟ್ ಪಡೆಯದೆ ಗಡಾಯಿಕಲ್ಲು ಪ್ರವೇಶಿಸುವ ಪ್ರವಾಸಿಗರಿಂದ ರಕ್ಷಿತ ಸ್ಮಾರಕಗಳಿಗೆ ಹಾನಿ

ಬೆಳ್ತಂಗಡಿ : ಕಾರ್ಕಳ ವನ್ಯಜೀವಿ ವಿಭಾಗದ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವ ಗಡಾಯಿ ಕಲ್ಲು ರಕ್ಷಿತ ಸ್ಮಾರಕಕ್ಕೆ ರಕ್ಷಣೆಯಿಲ್ಲದಂತೆ ಕಂಡುಬಂದಿದೆ. ಅರಣ್ಯ ಇಲಾಖೆ ಹಾಗೂ ಪುರಾತತ್ವ ಸರ್ವೇಕ್ಷಣ ಇಲಾಖೆ ಸಿಬ್ಬಂದಿಗಳ ಕಳ್ಳಾಟದಿಂದ ಅಧಿಕೃತವಾಗಿ ಟಿಕೇಟ್ ಪಡೆಯದೆ ಪ್ರತೀದಿನ ಪ್ರವಾಸಿಗರು ರಕ್ಷಿತ ಸ್ಮಾಕರ ಜಮಲಾಬಾದ್‌ಗೆ ಪ್ರವೇಶಿಸುತ್ತಿದ್ದು, ಸ್ಮಾರಕ ಸುತ್ತ ಅಸಭ್ಯವಾಗಿ ವರ್ತಿಸುವುದು ಸ್ಮಾರಕಕ್ಕೆ ಹಾನಿಗೈಯುವ ಘಟನೆ ಯಥೇಚ್ಚವಾಗಿ ನಡೆಯುತ್ತಿದೆ.

ಬೆಳ್ತಂಗಡಿ ತಾಲೂಕಿನ ನಡ ಗ್ರಾಮ ವ್ಯಾಪ್ತಿ ವನ್ಯಜೀವಿ ವಿಭಾಗದ ಕುದುರೆ ಮುಖ ರಾಷ್ಟ್ರೀಯ ಉದ್ಯಾನದೊಳಗಿರು ಐತಿಹಾಸಿಕ ನರಸಿಂಹಗಡ ಅತ್ಯಂತ ಆಕರ್ಷಣೆಯ, ಚಾರಣಿಗರಿಗೆ, ಪ್ರವಾಸಿಗರಿಗೆ ಪ್ರಿಯ ತಾಣ. ಸಮುದ್ರ ಮಟ್ಟದಿಂದ 1788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲು. ಇದರ ಮೇಲ್ಭಾಗದಲ್ಲಿ ನರಸಿಂಹಗಡ ಅಥವಾ ಜಮಲಾಗಡ ಎಂಬ ಕೋಟೆ ಇದೆ. 2,800 ಮೆಟ್ಟಿಲುಗಳನ್ನೇರಿದಾಗ ಜಮಲಾಗಡದ ಮೇಲ್ಭಾಗ ತಲುಪಬಹುದು.

ಇಂಡೋ ಸಾರ್ಸೆನಿಕ್ ಶೈಲಿಯನ್ನು ಹೋಲುವ ಶಿಲ್ಪ ಚಿತ್ರಗಳು ಇಲ್ಲಿನ ಒಂದನೇ ಮಹಾ ದ್ವಾರಗಳಲ್ಲಿ ಕಂಡುಬರುತ್ತವೆ. ಗಡಾಯಿಕಲ್ಲಿನ ಮೇಲ್ಭಾಗದಲ್ಲಿ ಎರಡು ಕಟ್ಟಡಗಳನ್ನು ಕಾಣಬಹುದಾಗಿದೆ.

ಸುಣ್ಣದ ಕಲ್ಲಿನ ಗಾರೆಯಿಂದ ಇದನ್ನು ನಿರ್ಮಿಸಿದ್ದು ಶಸ್ತ್ರಾಸ್ರಗಳನ್ನು ಮತ್ತು ಮದ್ದು ಗುಂಡುಗಳನ್ನು ಸಂಗ್ರಹಿಸಲು ನಿರ್ಮಿಸಲಾಗಿದೆ. ಎರಡನೇ ಕಟ್ಟಡದಲ್ಲಿ ಕೋವಿ ಕಿಂಡಿ ಕಾಣಬಹುದು. ಈ ಕಲ್ಲಿನ ಮೇಲ್ಭಾಗದಲ್ಲಿ ಅನೇಕ ಕಟ್ಟಡಗಳ ಅವಶೇಷಗಳು ಸೂಕ್ಷ್ಮವಾಗಿ ಗಮನಿಸಿದರೆ ಕಂಡುಬರುತ್ತವೆ. ಇವೆಲ್ಲವೂ ಸೈನಿಕರು ಉಳಿಯುತ್ತಿದ್ದ ಮತ್ತು ಆಹಾರ ದಾಸ್ತಾನು ಕೊಠಡಿಗಳಾಗಿರಬಹುದೆಂದು ಊಹಿಸಬಹುದಾಗಿದೆ.

ಜಮಲಾಬಾದ್ ರಕ್ಷಿತ ಸ್ಮಾರಕ
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಜಮಲಬಾದ್ ಪ್ರಾಚೀನ ಸ್ಮಾರಕಗಳ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿದ್ದು, ಗಡಾಯಿ ಕಲ್ಲನ್ನು ರಕ್ಷಿತ ಸ್ಮಾರಕ ಎಂದು ಘೋಷಿಸಿದೆ. ಈ ಪ್ರದೇಶ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೊಳಪಡುವುದರಿಂದ ಗಡಾಯಿಕಲ್ಲು ಚಾರಣಕ್ಕೆ ವಯಸ್ಕರಿಗೆ 50, ವಿದ್ಯಾರ್ಥಿಗಳಿಗೆ 25 ರೂ. ಟಿಕೇಟ್ ನೀಡಲಾಗುತ್ತದೆ. ಬಹುತೇಕ ಸಂದರ್ಭ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಪ್ರತ್ಯೇಕ ಪ್ರತ್ಯೇಕವಾಗಿ ಟಿಕೇಟ್ ನೀಡಿ ಹಣ ವಸೂಲಿ ನಡೆಸುವುದಕ್ಕೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದೂ ಇದೆ.

ಸಿಬ್ಬಂದಿಗಳದ್ದೇ ಕಾರುಬಾರು

ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ ಸರಾಸರಿ 400-500 ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು, ಇತರೆ ಸಂದರ್ಭ 50-70 ಪ್ರವಾಸಿಗರು ಮಾತ್ರ ಆಗಮಿಸುತ್ತಾರೆ. ಬುಹುತೇಕ ಸಂದರ್ಭ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಪ್ರವಾಸಿಗರಿಂದ ಹಣ ಪಡೆದು ಟಿಕೇಟ್ ನೀಡದೆ ರಕ್ಷಿತ ಸ್ಮಾರಕ ಜಮಲಾಬಾದ್‌ಗೆ ಪ್ರವೇಶ ನೀಡುವುದು ಸಾಮಾನ್ಯ. ಸಿಬ್ಬಂದಿಗಳಲ್ಲಿ ಹಣ ನೀಡಿದ ಪ್ರವಾಸಿಗರು ಟಿಕೇಟ್ ಕೇಳಿದ್ದಲ್ಲಿ ಟಿಕೇಟ್ ಖಾಲಿಯಾಗಿದೆ ಎಂಬುದಾಗಿ ಸಿಬ್ಬಂದಿಗಳು ಉತ್ತರ ನೀಡುತ್ತಾರೆ.

ಸ್ಮಾರಕಕ್ಕೆ ರಕ್ಷಣೆ ಇಲ್ಲ!

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ವನ್ಯಜೀವಿ ವಿಭಾಗದ ಸಿಬ್ಬಂದಿ ಕಳ್ಳಾಟ ಮೇಲಧಿಕಾರಿಗಳಿಗೆ ತಿಳಿದಿಲ್ಲ. ಪ್ರವಾಸಿಗರಿಗೆ ಗುಡ್ಡದ ತುದಿಲ್ಲಿರುವ ಕೋಟೆಗೆ ತೆರಳಲು ಮಾತ್ರ ಅವಕಾಶ, ಆದರೆ ಬಹುತೇಕ ಪ್ರವಾಸಿಗರು ಕುದುರೆ ಮುಖ ರಾಷ್ಟ್ರೀಯ ಉದ್ಯಾನ ಪ್ರವೇಶಿಸಿ ಕಸ, ಪ್ಲಾಸಿಕ್, ಮಧ್ಯದ ಬಾಟಲಿ ತ್ಯಾಜ್ಯ ಬಿಸಾಡುವುದು ಸರ್ವೇಸಾಮಾನ್ಯ. ಪಡ್ಡೆ ಹುಡುಗರಂತೂ ಇಲ್ಲಿನ ಇಂಡೋ ಸಾರ್ಸೆನಿಕ್ ಶೈಲಿಯನ್ನು ಹೋಲುವ ಶಿಲ್ಪ ಚಿತ್ರಗಳನ್ನು ವಿರೂಪಗೊಳಿದ್ದು ಕಂಡುಬಂದಿದೆ.

ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇಲ್ಲಿ ಮೋಜು ಮಸ್ತಿ, ಅನೈತಿಕತೆಯಲ್ಲಿ ತೊಡಗಿಕೊಂಡರೂ ಕೇಳುವವರಿಲ್ಲದ ಸ್ಥಿತಿ ನಿರ್ಮಾಣಗೊಂಡಿದೆ.

ಜಮಾಲಾಬಾದ್‌ನ ಜವಾಬ್ದಾರಿಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಈ ಪ್ರದೇಶ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಒಳಪಡುವುದರಿಂದ ಪ್ರವೇಶಕ್ಕಾಗಿ ಪ್ರವಾಸಿಗರಿಂದ ಶುಲ್ಕ ಪಡೆಯಲಾಗುತ್ತದೆ. ಸಂಗ್ರಹಿಸಿದ ಶುಲ್ಕವನ್ನು ಕರ್ತವ್ಯದಲ್ಲಿರುವ ಸಿಬ್ಬಂದಿ ಇಲಾಖೆಗೆ ತಂದೊಪ್ಪಿಸುತ್ತಾರೆ ಎಂದು ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ತಿಳಿಸಿದ್ದಾರೆ.

Leave A Reply

Your email address will not be published.