ಉಪ್ಪಿನಂಗಡಿ : ಮುಂದುವರಿದ ಸೆಕ್ಷನ್, ಸಹಜ ಸ್ಥಿತಿಗೆ ಪೇಟೆ,ಬಿಗಿ ಪೊಲೀಸ್ ಬಂದೋಬಸ್ತ್

ಉಪ್ಪಿನಂಗಡಿ: ನಿನ್ನೆ ಪ್ರತಿಭಟನೆ, ಲಾಠಿಚಾರ್ಜ್ ಗೆ ಕಾರಣವಾಗಿದ್ದ ಉಪ್ಪಿನಂಗಡಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ಬುಧವಾರ ಪೇಟೆ ಶಾಂತ ಸ್ಥಿತಿಯಲ್ಲಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಉಪ್ಪಿನಂಗಡಿಗೆ ಉಡುಪಿ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ಪೊಲೀಸರನ್ನು ಕರೆಸಲಾಗಿದ್ದು, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಇಲ್ಲಿನ ಹಳೆಗೇಟ್‌ನ ಸುಬ್ರಹ್ಮಣ್ಯ ಕ್ರಾಸ್ ಬಳಿ ಇತ್ತೀಚೆಗೆ ನಡೆದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆದು ಮಂಗಳವಾರ ಉಪ್ಪಿನಂಗಡಿ ಠಾಣೆಗೆ ಕರೆದುಕೊಂಡು ಬಂದಿದ್ದರು.

ವಶಕ್ಕೆ ಪಡೆದವರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಪಿಎಫ್‌ಐ ಕಾರ್ಯಕರ್ತರು ಮಂಗಳವಾರ ಬೆಳಗ್ಗೆಯಿಂದ ಉಪ್ಪಿನಂಗಡಿಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಸಂಜೆಯ ವೇಳೆ ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡುವುದಾಗಿ ಪೊಲೀಸರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದ್ದರು.

ಈ ನಡುವೆ ಉಪ್ಪಿನಂಗಡಿ ಠಾಣೆಗೆ ಆಗಮಿಸಿದ ಪುತ್ತೂರು ತಹಶೀಲ್ದಾರ್ ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಉಪ್ಪಿನಂಗಡಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದರು.
ಇದೇವೇಳೆ ವಶಕ್ಕೆ ಪಡೆದವರಲ್ಲಿ ಓರ್ವ ಪಿಎಫ್ ಐ ಮುಖಂಡನನ್ನು ಮಾತ್ರ ರಾತ್ರಿ ಪೊಲೀಸರು ಬಿಡುಗಡೆಗೊಳಿಸಿದ್ದರು. ಅದರೆ ಉಳಿದಿಬ್ಬರನ್ನೂ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾತ್ರಿ 9:30ರ ಸುಮಾರಿಗೆ ಪ್ರತಿಭಟನಾಕಾರರು ಮತ್ತೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಜಮಾಯಿಸಿದರು.

ಈ ವೇಳೆ ಪೊಲೀಸರು ಗುಂಪನ್ನು ಚದುರಿಸಲು ಲಾಠಿಚಾರ್ಜ್ ನಡೆಸಿದ್ದಾರೆ. ಇದರಿಂದ 10ಕ್ಕೂ ಅಧಿಕ ಪ್ರತಿಭಟನಾಕಾರರಿಗೆ ತೀವ್ರ ಗಾಯಗಳಾಗಿವೆ. ನಾಲ್ವರು ಪೊಲೀಸರು ಕೂಡಾ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.