ಉಪ್ಪಿನಂಗಡಿ ಅಹಿತಕರ ಘಟನೆ ಖಂಡಿಸಿ ಡಿ. 17 ರಂದು ಪಿಎಫ್‌ಐನಿಂದ ಎಸ್ಪಿ ಕಚೇರಿ ಚಲೋ

ಮಂಗಳೂರು:ಅಕ್ರಮವಾಗಿ ಬಂಧಿಸಿದ ಪಾಪ್ಯುಲರ್ ಫ್ರಂಟ್ ನಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ನಾಗರಿಕರ ಮೇಲೆ ನಿರ್ದಯವಾಗಿ ಲಾಠಿಚಾರ್ಚ್ ನಡೆಸಿದ ಉಪ್ಪಿನಂಗಡಿ ಪೊಲೀಸರ ಕೃತ್ಯವನ್ನು ಖಂಡಿಸಿ ಸರ್ವ ನಾಗರಿಕರನ್ನು ಒಗ್ಗೂಡಿಸಿ ಡಿ. 17 ರಂದು ಎಸ್ಪಿ ಕಚೇರಿ ಚಲೋ ನಡೆಸಲಿರುವುದಾಗಿ ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಎಕೆ ಅಶ್ರಫ್ ತಿಳಿಸಿದ್ದಾರೆ.

ಮಂಗಳೂರು ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪೊಲೀಸರ ಲಾಠಿ ಕೇವಲ ಮುಸ್ಲಿಮರ ಮೇಲೆ ಮಾತ್ರ ಯಾಕೆ ಪ್ರಯೋಗ ಮಾಡಲಾಗುತ್ತದೆ ಎಂಬುದಕ್ಕೆ ಇಲಾಖೆ ಉತ್ತರ ನೀಡಬೇಕು. ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮೂರು ಮಂದಿಯನ್ನು ಅಕ್ರಮವಾಗಿ ಬಂಧಿಸಿದ್ದರು. ಆದರೆ ಬಂಧನದ ವೇಳೆ ಯಾವುದೇ ಸೂಚನೆಯನ್ನು ನೀಡಿರಲಿಲ್ಲ ಮತ್ತು ಯಾವ ಕಾರಣಕ್ಕಾಗಿ ಬಂಧಿಸಲಾಗುತ್ತಿದೆ ಎಂಬ ಮಾಹಿತಿಯನ್ನೂ ನೀಡಿರಲಿಲ್ಲ. ಅಕ್ರಮ ಬಂಧನವನ್ನು ಖಂಡಿಸಿ ಪ್ರತಿಭಟನಕಾರರು ಬೆಳಗ್ಗೆ ಠಾಣೆ ಮುಂದೆ ಜಮಾಯಿಸಿದಾಗಲಷ್ಟೇ ಸ್ಥಳೀಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕರೆ ತಂದಿದ್ದೇವೆಂದು ಪೊಲೀಸರು ಸಮಜಾಯಿಷಿ ನೀಡಿದ್ದರು. ಆದರೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರಲ್ಲಿ ಎಳ್ಳಷ್ಟೂ ಆಧಾರವಿರಲಿಲ್ಲ.

ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದು ಧರಣಿ ಕುಳಿತರು. ಕತ್ತಲು ಆವರಿಸಿದರೂ ಪ್ರತಿಭಟನಕಾರರು ಅಲ್ಲಿಂದ ಕದಲದೇ ಇದ್ದಾಗ ರಾತ್ರಿ ಸುಮಾರು 7ರ ವೇಳೆಗೆ ಓರ್ವ ನಾಯಕರನ್ನು ಬಿಡುಗಡೆಗೊಳಿಸಿದ್ದರು. ಇನ್ನಿಬ್ಬರನ್ನು ಸ್ವಲ್ಪ ಸಮಯದ ನಂತರ ಬಿಡುಗಡೆಗೊಳಿಸುವುದಾಗಿ ಪೊಲೀಸ್ ಅಧಿಕಾರಿ ಭರವಸೆ ನೀಡಿದ್ದರು.

ಆದರೆ ತುಂಬಾ ಸಮಯದ ನಂತರವೂ ಅವರನ್ನು ಬಿಡುಗಡೆಗೊಳಿಸುವ ಲಕ್ಷಣ ಕಂಡು ಬರಲಿಲ್ಲ. ಅವರಿಬ್ಬರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸುವ ಸೂಚನೆ ಕಂಡು ಬಂದಾಗ, ಉಳಿದಿಬ್ಬರು ಅಮಾಯಕರನ್ನು ಬಿಡುಗಡೆಗೊಳಿಸುವಂತೆ ಮತ್ತೆ ಪ್ರತಿಭಟನೆಯನ್ನು ಮುಂದುವರಿಸಲಾಗಿತ್ತು. ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿರುವಾಗ ಪೊಲೀಸರು ಯಾವುದೇ ಸೂಚನೆ ನೀಡದೇ ಯದ್ವಾತದ್ವಾ ಲಾಠಿ ಬೀಸಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಪ್ರತಿಭಟನಕಾರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಶ್ರಫ್ ಆರೋಪಿಸಿದ್ದಾರೆ.

ಬರ್ಬರ ಲಾಠಿಚಾರ್ಜ್ ನಿಂದಾಗಿ ಪ್ರತಿಭಟನಕಾರರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಮುಸ್ಲಿಮರ ಧಾರ್ಮಿಕ ಗುರು ಸೈಯ್ಯದ್ ಆತೂರ್ ತಂಗಳ್ ರವರ ತಲೆಗೆ ಗಂಭೀರ ಗಾಯವಾಗಿದೆ. ಗಾಯದ ತೀವ್ರತೆಯನ್ನು ಗಮನಿಸಿದರೆ ಪೊಲೀಸರು ಲಾಠಿಗೆ ಬದಲಾಗಿ ಯಾವುದೋ ಮಾರಕಾಸ್ತ್ರ ಬಳಸಿರುವ ಬಗ್ಗೆ ಸಂಶಯ ಮೂಡುತ್ತದೆ. ಇದೇ ವೇಳೆ ಲಾಠಿ ಏಟಿಗೆ ಯುವಕನೋರ್ವ ಪ್ರಜ್ಞೆ ಕಳೆದುಕೊಂಡು ರಸ್ತೆಯಲ್ಲಿ ಬಿದ್ದಿದ್ದ ಕರುಣಾಜನಕ ದೃಶ್ಯವೂ ಕಂಡು ಬಂತು. ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಮತ್ತು ಸುಮಾರು 40ರಷ್ಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪೊಲೀಸರು ಆ್ಯಂಬುಲೆನ್ಸ್ ಮೇಲೆಯೂ ಲಾಠಿ ಬೀಸಿ ಆತಂಕದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಿಎಫ್ ಐ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್, ಮಂಗಳೂರು ನಗರ ಅಧ್ಯಕ್ಷರಾದ ಖಾದರ್ ಕುಳಾಯಿ, ಪುತ್ತೂರು ತಾಲೂಕು ಅಧ್ಯಕ್ಷ ಜಾಬಿರ್ ಅರಿಯಡ್ಕ ಉಪಸ್ಥಿತರಿದ್ದರು.

Leave A Reply

Your email address will not be published.