ಗಾಯಗೊಂಡ ಕೋತಿಗೆ ತುರ್ತು ಚಿಕಿತ್ಸೆ ನೀಡಿದ ಆಟೋ ಚಾಲಕ !! | ಬೀದಿನಾಯಿಗಳ ದಾಳಿಯಿಂದ ಗಾಯಗೊಂಡಿದ್ದಕ್ಕೆ ಸಿಪಿಆರ್ ಮಾಡಿ ಮರುಜೀವ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಸದ್ಯ ವೈರಲ್ ಆಗಿರುವ ವೀಡಿಯೋ ಮನುಷ್ಯನಿಗೆ ‌ಪ್ರಾಣಿ ಜೊತೆಗಿನ ನಂಟನ್ನು ವಿವರಿಸಿ ಹೇಳುವಂತಿದೆ. ಮೂಕ ಪ್ರಾಣಿಯ ರೋದನೆ ನೋಡಲಾಗದೆ ಅದಕ್ಕೆ ನೀಡಿದ ಸ್ಪಂದನೆಯ ಈ ವಿಡಿಯೋ ಎಲ್ಲರ ಮನಗೆದ್ದಿದೆ.

ಗಾಯಗೊಂಡ ಕೋತಿಯನ್ನು ಗಮನಿಸಿದ ವ್ಯಕ್ತಿಯೊಬ್ಬರು ಅದಕ್ಕೆ ತುರ್ತು ಚಿಕಿತ್ಸೆಯನ್ನು ನೀಡಲು ಮುಂದಾಗಿರುವ ವೀಡಿಯೋ ಇದಾಗಿದೆ. ರಸ್ತೆಯಲ್ಲಿ ಅಪಘಾತಕ್ಕೊಳಗಾದ ಮನುಷ್ಯರನ್ನೇ ತಿರುಗಿ ನೋಡದ ಈ ಕಾಲಘಟ್ಟದಲ್ಲಿ ಕೋತಿಯ ಜೀವ ರಕ್ಷಣೆಗಾಗಿ ಅದಕ್ಕೆ ಉಸಿರು ಕೊಡುತ್ತಿರುವ ವೀಡಿಯೋ ಎಲ್ಲರನ್ನು ಆಕರ್ಷಿಸಿದೆ. ವೈರಲ್ ಆದ ಈ ವೀಡಿಯೋವನ್ನು ನೆಟ್ಟಿಗರು ಕೂಡ ಮೆಚ್ಚಿಕೊಂಡಿದ್ದಾರೆ.

ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಂಗವೊಂದಕ್ಕೆ ಆಟೋ ಚಾಲಕರೊಬ್ಬರು ಸಿಪಿಆರ್‌ ಮಾಡಿ ಜೀವ ಉಳಿಸಿದ ಘಟನೆ ತಮಿಳುನಾಡಿನ ಪೆರಂಬಲೂರಿನಲ್ಲಿ ನಡೆದಿದೆ.  ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಆಟೋ ಚಾಲಕನ ಮಾನವೀಯ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 38 ವರ್ಷದ ಆಟೋ ಚಾಲಕ ಪ್ರಭು ಅವರು ಅಸ್ವಸ್ಥಗೊಂಡು ಬಿದ್ದಿದ್ದ ಮಂಗನ ಜೀವ ಉಳಿಸುವ ಸಲುವಾಗಿ ಅದರ ಹೃದಯಕ್ಕೆ ಚೆಸ್ಟ್‌ ಕಂಪ್ರೇಶನ್‌ ಮಾಡಿದ್ದಾರೆ.

ಕಠಿಣ ಮತ್ತು ಪ್ರಾಯಶಃ ಮಾರಣಾಂತಿಕ ಪರಿಸ್ಥಿತಿಯು ಉದ್ಭವಿಸಿದಾಗ, ತುಂಬಾ ಜನಕ್ಕೆ ಏನು ಮಾಡಬಹುದು ಎಂಬ ಯೋಚನೆಯೂ ಬಾರದೆ ಅಲ್ಲೇ ನಿಂತು ಬಿಡುತ್ತಾರೆ. ಆದರೆ ಇವರು ತಮ್ಮ ಸಮಯ ಪ್ರಜ್ಞೆ ಮೆರೆದು ಕೋತಿಯ ಜೀವ ಉಳಿಸಿದ್ದಾರೆ. ಆ ಪ್ರದೇಶದಲ್ಲಿ ಬೀದಿನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಕೋತಿಗೆ ಸಿಪಿಆರ್ ಮಾಡಿ ಮರುಜೀವ ನೀಡಲು ಆಟೋ ಚಾಲಕ ಪ್ರಭು ನಿರ್ಧರಿಸಿದ್ದಾರೆ. ಇವರು ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕೋತಿ ಪ್ರಜ್ಞೆ ತಪ್ಪಿ ಬಿದ್ದಿತ್ತು. ಈ ಕೋತಿಗೆ ಸಹಾಯ ಮಾಡಲು ತಕ್ಷಣ ತಮ್ಮ ಬೈಕನ್ನು ಮಧ್ಯದಲ್ಲಿ ನಿಲ್ಲಿಸಿದ ಅವರು ಕೋತಿಗೆ ಸಿಪಿಆರ್‌ ಮಾಡಿದ್ದಾರೆ.

ಕೋತಿಯೊಂದಿಗೆ ಮಾತನಾಡುತ್ತಲೇ ಅವರು ಅದರ ಎದೆಯನ್ನು ಸವರಿ ಸಮಾಧಾನಪಡಿಸುವ ಚಿತ್ರಣ ವೀಡಿಯೋದಲ್ಲಿದೆ. ನಂತರದಲ್ಲಿ ಕೋತಿ ಸ್ವಲ್ಪಮಟ್ಟಿಗೆ ಪ್ರತಿಕ್ರಿಯಿಸಲು ಪ್ರಾರಂಭಿಸಿದೆ. ನಂತರ ಪ್ರಭು ಅದನ್ನು ಪಶುವೈದ್ಯರ ಬಳಿಗೆ ಸಾಗಿಸಿದ್ದಾರೆ. ಪ್ರಭು ಅವರ ಈ ಕಾರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ ವಿಭಿನ್ನವಾಗಿ ಕೊಂಡಾಡಲಾಗುತ್ತಿದೆ.

Leave A Reply

Your email address will not be published.