ಬೆಳ್ತಂಗಡಿ : ಕಪಿಲ ಮೂಲದಲ್ಲಿ ಸಪ್ತಪದಿ ತುಳಿದ ದಂಪತಿ | ವನಸಿರಿಯೇ ಚಪ್ಪರ, ಮಧುವನಗಿತ್ತಿಯಂತೆ ಶೃಂಗಾರಗೊಂಡ ಬರ್ಗುಳ ಅರಣ್ಯ

ಬೆಳ್ತಂಗಡಿ: ಒಂದೆಡೆ ಶಾಂತವಾಗಿ ಹರಿಯುವ ಕಪಿಲಾ ನದಿ, ಪಕ್ಕದಲ್ಲೇ ವಿಶಾಲವಾಗಿ ಹರಡಿರುವ ಪಶ್ಚಿಮಘಟ್ಟದ ಶಿಬಾಜೆ ಅರಣ್ಯವಲಯ. ನದಿ ತಟದಲ್ಲೇ ಪ್ರಕೃತಿಯ ಮಡಿಲಂತೆ ವಿಶಾಲವಾಗಿ ಹರಡಿರುವ ಬರ್ಗುಲ ಎಂಬ ಪ್ರದೇಶ. ಇಂತಹ ಸುಂದರ ಪ್ರಕೃತಿಯ ಮಡಿಲಲ್ಲಿ ಯಾವುದೇ ಆಡಬಂರವಿಲ್ಲದೆ ನವಜೀವನಕ್ಕೆ ಸಪ್ತಪದಿ ತುಳಿದ ದಂಪತಿ, ನೂರಾರು ಪರಿಸರ ಪ್ರೇಮಿ ಬಂಧುಗಳು…….!

ಹೌದು…ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ಗೋಪಿಕಾ ಹಾಗೂ ಕುಂದಾಪುರದ ದಿನೇಶ್ ಯಾವುದೇ ಆಡಬಂರವಿಲ್ಲದೆ ಕೇವಲ ಪ್ರಕೃತಿಯ ಮಡಿಲ್ಲಲೇ ಸಪ್ತಪದಿ ತುಳಿದು ನವಜೀವನಕ್ಕೆ ಕಾಲಿರಿಸಿದ ಅಪರೂಪದ ಸನ್ನಿವೇಶ ಶಿಶಿಲ ಸಮೀಪದ ಬರ್ಗುಲದಲ್ಲಿ ಭಾನುವಾರ ನಡೆಯಿತು.

ಈ ಮದುವೆ ಕಾರ್ಯಕ್ರಮದಲ್ಲಿ ಚಪ್ಪರವಿಲ್ಲ, ಆಡಂಬರದ ವ್ಯವಸ್ಥೆಗಳಿಲ್ಲ. ಕೇವಲ ಪ್ರಕೃತಿಯ ಸೌಂದರ್ಯದಲ್ಲೇ ವಿಶಾಲವಾದ ಹುಲ್ಲುಹಾಸಿನ ನದಿ ಕಿನಾರೆಯಲ್ಲಿ ಮಡಲು, ಬಾಳೆ, ತೆಂಗು ಸೇರಿದಂತೆ ಕುಂಚ ಕಲಾವಿದರು ನಿರ್ಮಿಸಿದ ಪ್ರಾಂಗಣದಲ್ಲೇ ಈ ಶುಭವಿವಾಹ ನಡೆದಿರುವುದು ವಿಶೇಷ.


ಸಪ್ತಪದಿ ತುಳಿದ ದಂಪತಿ

ಬೆಳ್ತಂಗಡಿ ತಾಲೂಕಿನ ಮುಡಂತ್ಯಾರಿನ ಗೋಪಿಕಾ ಮಂಗಳೂರಿನ ಖಾಸಗಿ ಕಾಲೇಜಿನ ಉಪನ್ಯಾಸಕಿ ಹಾಗೂ ಕುಂದಾಪುರದ ದಿನೇಶ್ ಮಂಗಳೂರಿನ ಸರ್ಕಾರಿ ಇಲಾಖೆಯೊಂದರ ಉದ್ಯೋಗಿ. ಇವರಿಬ್ಬರು ತಮ್ಮ ಬಂಧುಗಳೊಂದಿಗೆ ಮಧುವನಗಿತ್ತಿಯಂತೆ ಶೃಂಗಾರಗೊಂಡ ಬರ್ಗುಳ ಅರಣ್ಯ ಪ್ರದೇಶದ ಕಪಿಲಾನದಿ ತಟದಲ್ಲಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಶಿವರಾಮ ಶಿಶಿಲ ಎಂಬವರ ತೋಟ ತಟದಲ್ಲಿ ವಿವಾಹವಾದರು.

ರಾರಾಜಿಸಿದ ತುಳುನಾಡ ವೈಭವ
ಕಪಿಲ ಮೂಲದಲ್ಲಿ ಶಾಸ್ತ್ರಬದ್ದವಾಗಿ ಸಪ್ತಪದಿ ತುಳಿದ ದಂಪತಿಗಳ ಸ್ವಾಗತಕ್ಕೆ ಜಿಲ್ಲೆಯ ಖ್ಯಾತ ಕಲಾವಿದ ಹಾಗೂ ಪರಿಸರ ಹೋರಾಟಗಾರ ದಿನೇಶ್ ಹೊಳ್ಳ, ಸಚಿನ್ ಬಿಡೆ, ಶಶಿಧರ್ ಶೆಟ್ಟಿ ನೇತೃತ್ವದ ತಂಡದಿಂದ ವಿಶಾಲ ಸ್ವಾಗತ ಕಮಾನು ತೆಂಗಿನ ಗರಿಗಳಿಂದ ರೂಪುಗೊಂಡಿತ್ತು. ತುಳುನಾಡ ಜಾನಪದ ಕಲಾಪ್ರಕಾರಗಳು, ಆಟಿ ಕಲೆಂಜನ ಕೊಡೆ, ತೆಂಗಿನ ಗರಿಗಳಿಂದ ಮಾಡಿರುವ ವಿವಿಧ ಕಲಾಕೃತಿ ನೋಡುಗರನ್ನು ಆಕರ್ಷಿಸಿತು. ಈ ಶುಭಕಾರ್ಯ ಚಪ್ಪರ, ಗೋಡೆ ರಹಿತ ಕಾರ್ಯಕ್ರಮವಾಗಿದ್ದು, ಪಶ್ಚಿಮಘಟ್ಟದ ತಪ್ಪಲಿನ ವನಸಿರಿಯೇ ಚಪ್ಪರವಾಗಿ ರೂಪುಗೊಂಡಿತ್ತು.


ಹಾಲ್‌ಗಳಲ್ಲಿ ವೈಭವದಲ್ಲಿ ಮದುವೆ ಕಾರ್ಯ ಮಾಡಿ ಸಂಪತ್ತು, ಪರಿಸರ, ಆಹಾರ ಪೋಲು ಮಾಡುವ ಬದಲು ಪ್ರಕೃತಿಯ ಮಧ್ಯೆ ಸುಂದರವಾಗಿ ಹಾಗು ಪಾರಂಪರಿಕವಾಗಿ ಶುಭಕಾರ್ಯ ನಡೆಸುವುದು ಮುಂದಿನ ಅನಿವಾರ್ಯತೆ. ಈ ನಿಟ್ಟಿನಲ್ಲಿ ವನಸಿರಿಯೇ ಚಪ್ಪರ, ಮಧುವನಗಿತ್ತಿಯಂತೆ ಶೃಂಗಾರಗೊಂಡ ಬರ್ಗುಳ ಪ್ರದೇಶದಲ್ಲಿ ವಿಶಿಷ್ಟ ರೀತಿಯಲ್ಲಿ ಗೋಪಿಕಾ ಹಾಗೂ ದಿನೇಶ್ ದಂಪತಿಗಳು ನವಜೀವನಕ್ಕೆ ಕಾಲಿರಿಸಿದ್ದು ಸಂತಸ ತಂದಿದೆ.
ಶಿವರಾಮ ಶಿಶಿಲ, ಶಿಕ್ಷಕ ಹಾಗೂ
ರಾಷ್ಟ್ರ ಪ್ರಶಸ್ತಿ ವಿಜೆತ ಕಲಾವಿದ


Leave A Reply

Your email address will not be published.