ಸರ್ಕಾರಿ ಶಾಲೆಯ ನೀರಿನ ಟ್ಯಾಂಕಿಗೆ ವಿಷಕಾರಿ ರಾಸಾಯನಿಕ ಬೆರೆಸಿದ ದುಷ್ಕರ್ಮಿಗಳು | ಶಾಲಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ 115 ವಿದ್ಯಾರ್ಥಿಗಳು ಅಪಾಯದಿಂದ ಪಾರು

ಮಡಿಕೇರಿ: ಮಡಿಕೇರಿ ತಾಲೂಕಿನ
ಸುಂಟಿಕೊಪ್ಪದ ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ಗೆ ದುಷ್ಕರ್ಮಿಗಳು ವಿಷಕಾರಿ ರಾಸಾಯನಿಕ ಬೆರೆಸಿದ ಘಟನೆ ನಡೆದಿದೆ.

ಶಾಲೆಯ ಸಿಬ್ಬಂದಿಯೊಬ್ಬರ ಸಮಯ ಪ್ರಜ್ಞೆಯಿಂದ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ.ಈ ಸಂಬಂಧ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಸುಂಟಿಕೊಪ್ಪ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬೆಳಗ್ಗೆ ಶೌಚಾಲಯ ಸ್ವಚ್ಛಗೊಳಿಸುವಾಗ ಪ್ರಕರಣ ಬೆಳಕಿಗೆ ಬಂದಿದೆ.ಲತಾ ಎಂಬ ಸಿಬ್ಬಂದಿ , ಶೌಚಾಲಯ ಸ್ವಚ್ಚಗೊಳಿಸಲು ಹೋದಾಗ ನೀರಿನ ಓವರ್‌ಟ್ಯಾಂಕ್‌ನ ಮುಚ್ಚಳ ತೆರೆದಿದ್ದು, ಟ್ಯಾಂಕ್‌ನಿಂದ ದುರ್ವಾಸನೆ ಬರುತ್ತಿರುವುದು ಕಂಡು ಬಂದಿದೆ.ಸದ್ಯ ಇವರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಕೂಡಲೇ ಆಡಳಿತ ಮಂಡಳಿಯವರು ತಾಲೂಕು
ಶಿಕ್ಷಣಾಧಿಕಾರಿ ಹಾಗೂ ಸುಂಟಿಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದು,ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ
ಪರಿಶೀಲಿಸಿದಾಗ ಟ್ಯಾಂಕ್ ನೀರಿನಲ್ಲಿ ದುಷ್ಕರ್ಮಿಗಳು
ವಿಷಕಾರಿ ರಾಸಾಯನಿಕ ಬೆರೆಸಿರುವುದು ಪತ್ತೆಯಾಗಿದೆ.

ಈ ನೀರನ್ನು ಅದೃಷ್ಟವಶಾತ್ ಶೌಚಾಲಯದ ಉದ್ದೇಶಕ್ಕೆ
ಮಾತ್ರ ಬಳಸಲಾಗಿದ್ದು, ಯಾವ ವಿದ್ಯಾರ್ಥಿಯೂ ಸೇವಿಸಿಲ್ಲ.ಇದರಿಂದ ಶಾಲೆಯಲ್ಲಿ ಕಲಿಯುತ್ತಿರುವ ಸುಮಾರು 115 ವಿದ್ಯಾರ್ಥಿಗಳು ಲತಾ ಅವರ ಉತ್ತಮ ಕಾರ್ಯದಿಂದ ಅಪಾಯದಿಂದ ಪಾರಾಗಿದ್ದಾರೆ. ಈ ಹಿಂದೆ ಕೆಲ ಕಿಡಿಗೇಡಿಗಳು ಶಾಲೆಯ ಆವರಣದಲ್ಲಿ ಇಟ್ಟಿದ್ದ ಪುಸ್ತಕಗಳನ್ನೂ ಸುಟ್ಟು ಹಾಕಿದ್ದರು ಎಂದು ಮಾಹಿತಿ ತಿಳಿದಿದೆ.

Leave A Reply

Your email address will not be published.