ಕಡಬ: ಬ್ಯಾಂಕ್ ನಲ್ಲಿ ಅಡವಿಟ್ಟ ಕಿವಿಯೋಲೆ ನಾಪತ್ತೆ | ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಿಲೇರಿದ ಮೇಲೆ ಕಿವಿಯೋಲೆ ವಾಪಸ್ ನೀಡಿದ ಬ್ಯಾಂಕ್ ಸಿಬ್ಬಂದಿ !??

ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನದಲ್ಲಿ ಕಿವಿಯೋಲೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ವಾರಸುದಾರರು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಸಮಜಾಯಿಷಿ ನೀಡಿ ನಾಪತ್ತೆಯಾಗಿದ್ದ ಕಿವಿಯೋಲೆಯನ್ನು ಬ್ಯಾಂಕ್ ಸಿಬ್ಬಂದಿ ಹಿಂತಿರುಗಿಸಿದ ವಿಚಿತ್ರ ಘಟನೆ ಕಡಬದಲ್ಲಿ ನಡೆದಿದೆ.

ಪುತ್ತೂರು ಸಮೀಪದ ಕೋಡಿಂಬಾಳ ಗ್ರಾಮದ ಮಡ್ಯಡ್ಕ ನಿವಾಸಿ ಪುಷ್ಪಲತಾ ಎಂಬುವರು ಸ್ಥಳೀಯ ಕೆನರಾ ಬ್ಯಾಂಕ್‌ನಲ್ಲಿ ತಮ್ಮ ಚಿನ್ನದೊಡವೆಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ಕೆಲ ದಿನಗಳ ಬಳಿಕ ಒಡವೆಗಳನ್ನು ಪರಶೀಲಿಸಿದಾಗ ಅದರಲ್ಲಿ ಕಿವಿಯೋಲೆಯೊಂದು ನಾಪತ್ತೆಯಾಗಿತ್ತು.

ಅದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಅದನ್ನೊಪ್ಪದ ಬ್ಯಾಂಕ್ ಸಿಬ್ಬಂದಿ ನೀವು ಅಡವಿಟ್ಟ ಚಿನ್ನ ಇಷ್ಟೇ ಎಂದು ವಾದಿಸಿದ್ದರು. ಕೊನೆಗೆ ಪುಷ್ಪಲತಾ ಅವರು ಮಂಗಳೂರು ರೀಜನಲ್ ಅಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದು, ಅವರು ಕೂಡ ಅದನ್ನು ಅಲ್ಲಗಳೆದರು. ಇದರಿಂದ ಕೋಪಗೊಂಡ ಗ್ರಾಹಕಿ ಕಡಬ ಠಾಣೆಗೆ ದೂರು ನೀಡಿದ್ದಾರೆ.

ಈ ದೂರಿನ ವಿಚಾರಣೆಗಾಗಿ ಪುಷ್ಪಲತಾ ಅವರನ್ನು ಠಾಣೆಗೆ ಕರೆದಾಗ, ಅದೇ ಸಮಯಕ್ಕೆ ಠಾಣೆಗೆ ಬಂದ ಬ್ಯಾಂಕ್ ಸಿಬ್ಬಂದಿ ನಿಮ್ಮ ಕಿವಿಯೋಲೆ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಬ್ಯಾಂಕ್‌ನ ಹಳೆಯ ಮ್ಯಾನೇಜರ್ ಅದನ್ನು ಬೇರೆ ಲಾಕರ್‌ನಲ್ಲಿ ಇಟ್ಟ ಕಾರಣ ಅದು ನಾಪತ್ತೆಯಾಗಿತ್ತು. ತಪಾಸಣೆ ಬಳಿಕ ಕಿವಿಯೋಲೆ ಸಿಕ್ಕಿದೆ ಎಂದು ಬ್ಯಾಂಕ್ ಸಿಬ್ಬಂದಿ ಸಮಜಾಯಿಷಿ ನೀಡಿದ್ದಾರೆ.

ಬ್ಯಾಂಕ್ ಸಿಬ್ಬಂದಿ ಮೇಲೆ ದೂರು ನೀಡಿದ ಬಳಿಕ ಚಿನ್ನದೊಡವೆಯನ್ನು ವಾಪಸ್ ನೀಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಗ್ರಾಹಕರಿಗೆ ಸರಿಯಾಗಿ ಸೇವೆ ನೀಡದ ವಿಚಾರದಲ್ಲಿ ಒಂದಿಲ್ಲೊಂದು ಆರೋಪವನ್ನು ಹೊತ್ತಿರುವ ಕಡಬ ಕೆನರಾ (ಸಿಂಡಿಕೇಟ್) ಬ್ಯಾಂಕ್ ಇದೀಗ ಚಿನ್ನದ ವಿಚಾರಲ್ಲಿ ಆದ ಎಡವಟ್ಟಿನಿಂದ ಮತ್ತಷ್ಟು ಜನರ ಅವಿಶ್ವಾಸಕ್ಕೆ ಕಾರಣವಾಗಿದೆ

Leave A Reply

Your email address will not be published.