ಬೆಳ್ತಂಗಡಿ: ಗ್ರಾಹಕರ ಹೆಸರಿನಲ್ಲಿ ನಕಲಿ ಚಿನ್ನ ಅಡವಿಟ್ಟ ‘ಮನ್ಮಥ’ ಪೋಲಿಸ್ ಬಲೆಗೆ

ಚಿನ್ನ ಪರಿವೀಕ್ಷಕನೊಬ್ಬ ಗ್ರಾಹಕರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂ. ವಂಚಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ನಡೆದಿದೆ.

ಆರೋಪಿ ಚಿನ್ನ ಪರಿವೀಕ್ಷಕನನ್ನು ಮನ್ಮಥ ಆಚಾರಿ ಎಂದು ಗುರುತಿಸಲಾಗಿದೆ. ಆತನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅರಸಿನಮಕ್ಕಿ ಶಾಖೆಯಲ್ಲಿ ಚಿನ್ನ ಪರಿವೀಕ್ಷಕನಾಗಿರುವ ಮನ್ಮಥ ಆಚಾರಿ ಎಂಬಾತ 2010ರಿಂದ 2019ರ ವರೆಗೂ ಅರಸಿನಮಕ್ಕಿ, ಶಿಬಾಜೆ, ಹತ್ಯಡ್ಕ ಗ್ರಾಮಸ್ಥರಿಗೆ
ಟೋಪಿ ಹಾಕಿದ್ದಾನೆ. ಬರೋಬ್ಬರಿ 52 ಮಂದಿ ಮನ್ಮಥನ ವಂಚನೆಗೆ ಒಳಗಾಗಿದ್ದು, ಈಗ ಬ್ಯಾಂಕಿನಿಂದ ಪೊಲೀಸ್ ಕೇಸು ಎದುರಿಸುತ್ತಿದ್ದಾರೆ.

ಈ ವಂಚನೆಯಲ್ಲಿ ಬ್ಯಾಂಕ್ ಸಿಬ್ಬಂದಿ ಮತ್ತು ಮ್ಯಾನೇಜರುಗಳು ಕೂಡ ಶಾಮೀಲಾಗಿದ್ದಾರೆ. ಕಳೆದ ಬಾರಿ ಮನ್ಮಥ ಆಚಾರಿಯಿಂದಾಗಿ ಚಿನ್ನ ಅಡವಿಟ್ಟು ವಂಚನೆಗೆ ಒಳಗಾಗಿದ್ದ ಶಿಬಾಜೆಯ ಅಶ್ವಥ್ ಎಂಬವರು ಬ್ಯಾಂಕಿನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೂಡ ನಡೆದಿತ್ತು.

ಇನ್ನು ಬ್ಯಾಂಕ್ ಮ್ಯಾನೇಜರ್ ಚಿನ್ನ ಪರಿವೀಕ್ಷಕನಿಗೆ ವಿರುದ್ಧ ಕ್ರಮಕೈಗೊಳ್ಳುವ ಬದಲು 52 ಮಂದಿಯ ವಿರುದ್ಧವೇ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಆರೋಪಿ ಮನ್ಮಥ ಆಚಾರಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು,ಈ ವೇಳೆ, ತಾನೇ 52 ಮಂದಿಯ ಹೆಸರಲ್ಲಿ ನಕಲಿ ಚಿನ್ನವಿಟ್ಟು ವಂಚನೆ ಎಸಗಿದ್ದಾಗಿ ಲಿಖಿತ ಹೇಳಿಕೆ ನೀಡಿದ್ದಾನೆ. ಆ ಮೂಲಕ ತನ್ನ ವಂಚನೆಯನ್ನು ಒಪ್ಪಿಕೊಂಡಿದ್ದಾನೆ. ಹೀಗಿದ್ದರೂ,ಬ್ಯಾಂಕ್ ಸಿಬ್ಬಂದಿ ಮಾತ್ರ ಗ್ರಾಹಕರಲ್ಲಿ ಹಣ ಮರಳಿಸುವಂತೆ ಹೇಳುತ್ತಿದ್ದಾರೆ. ಅಲ್ಲದೆ, ಈ ಗ್ರಾಹಕರ ಖಾತೆಗಳನ್ನೇ ಸೀಝ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.