ನನ್ನ ಪರಿಸ್ಥಿತಿ ಯಾರಿಗೂ ಬರದಿರಲಿ… ಬೈಕೊಂದರ ರೋದನ! | ಇದು ಕಂಡು ಬಂದಿದ್ದು ಮಂಗಳೂರು ಪುರಭವನದಲ್ಲಿ

ಮಂಗಳೂರು : “ನನ್ನ ಹೆಸರು ಬಜಾಜ್ ಕೆಟಿಎಂ ಡ್ಯೂಕ್. 2016ರಲ್ಲಿ ನನ್ನ ಮಾಲಕ ನನ್ನನ್ನು ಖರೀದಿಸಿದ್ದ. ಆದರೆ ಕಳೆದೆರಡು ವರ್ಷಗಳಿಂದ ನನಗೆ ಇನ್ಶೂರೆನ್ಸ್ ಮಾಡಿಸಿರಲಿಲ್ಲ. ಹೀಗಿರುವಾಗ 4-10-2021ರಂದು ನನ್ನ ಮೇಲೆ ಇಬ್ಬರು ಕುಳಿತುಕೊಂಡು ಹೋಗುವಾಗ ಅಪಘಾತವಾಗಿ ಅವರಿಬ್ಬರೂ ಮರಣ ಹೊಂದಿರುತ್ತಾರೆ. ಈಗ ನನ್ನನ್ನು ಪೊಲೀಸ್ ಠಾಣೆಯಲ್ಲಿ ಹರಾಜಿಗೆ ಇಡಲಾಗಿದೆ. ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬರದಿರಲಿ”.

ಹೀಗೊಂದು ದ್ವಿಚಕ್ರ ವಾಹನದ ರೋದನದ ಬರಹ ಕಂಡುಬಂದಿದ್ದು,ಮಂಗಳೂರಿನಪುರಭವನದ ಆವರಣದಲ್ಲಿರುವ ಮಿನಿ ಸಭಾಂಗಣದ ಆವರಣದಲ್ಲಿ.

ತನ್ನ ಕೊರಳ ಪಟ್ಟಿಯಲ್ಲಿ ಇಂತಹ ಬರಹವನ್ನು ಹೊತ್ತು ಅನಾಥವಾಗಿ ಕಂಡುಬಂದ ಈ ಬೈಕ್ ಅಪಘಾತದ ಗಂಭೀರತೆಯ ಜತೆಗೆ, ಲಕ್ಷಾಂತರ ಖರ್ಚು ಮಾಡಿ ಖರೀದಿಸಿದ ಬೈಕ್‌ನ ಪ್ರಸಕ್ತ ಪರಿಸ್ಥಿತಿಯನ್ನೂ ಸಾರ್ವಜನಿಕರಿಗೆ ತಿಳಿಸುವಂತಿತ್ತು.

ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಆಶಯದಂತೆ ಪೊಲೀಸ್ ಇಲಾಖೆಯ ವಿವಿಧ ಸೇವಾ ಘಟಕಗಳಾದ ಪೊಲೀಸ್ ಬ್ಯಾಂಡ್, ಅಪರಾಧ ಪತ್ತೆ ವಿಭಾಗ, ಸೈಬರ್ ಕ್ರೈಂ, ಸಂಚಾರಿ ಘಟಕ, ಡ್ರಗ್ಸ್ ಮತ್ತು ನಾರ್ಕೋಟಿಕ್ಸ್ ಘಟಕ, ನಗರ ಸಶಸ್ತ್ರ ಘಟಕ, ಶ್ವಾನದಳ, ಅಗ್ನಿಶಾಮಕ ದಳಗಳ ಕುರಿತು ಅರಿತುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಜತೆಗೆ ವಶಪಡಿಸಿಕೊಂಡ ವಸ್ತುಗಳ ಹಸ್ತಾಂತರ, ವಾಹನ ಹರಾಜು ನಡೆಸಲಾಯಿತು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಡಿಸಿಪಿ ದಿನೇಶ್ ಕುಮಾರ್, ನಗರ ಶಸಸ್ತ್ರಪಡೆಯ ಡಿಸಿಪಿ ಚೆನ್ನಬಸಪ್ಪ ಬಸಪ್ಪ ಹಡಪದ, ಎಸಿಪಿ ದಕ್ಷಿಣ ರಂಜಿತ್ ಬಂಡಾರು ಇದ್ದರು. ಬರ್ಕೆ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗಂ ಕಾರ್ಯಕ್ರಮ ನಿರೂಪಿಸಿದರು. ಡಿಸಿಪಿ ಹರಿರಾಂ ಶಂಕರ್ ವಂದಿಸಿದರು.

Leave A Reply

Your email address will not be published.