ಅಕಾಲಿಕ ಮಳೆಗೆ ತತ್ತರಿಸಿ ಹೋದ ಕರಾವಳಿಯ ಅಡಿಕೆ ಬೆಳೆಗಾರರು!! | ಅಂಗಳದಲ್ಲೇ ಕೊಳೆತು ಹೋಗುತ್ತಿದೆ ಕ್ವಿಂಟಾಲ್ ಗಟ್ಟಲೆ ಅಡಿಕೆ

ನವೆಂಬರ್ ತಿಂಗಳ ಅಕಾಲಿಕ ಮಳೆಗೆ ಇಡೀ ದಕ್ಷಿಣ ಭಾರತವೇ ತತ್ತರಿಸಿಹೋಗಿದೆ. ಅದೆಷ್ಟೋ ಜನ ಸೂರು ಕಳೆದುಕೊಂಡು, ಅನ್ನ ಆಹಾರವಿಲ್ಲದೆ ಪರದಾಡುತ್ತಿದ್ದಾರೆ. ಹಲವೆಡೆ ಪ್ರವಾಹದ ಪರಿಸ್ಥಿತಿಯೇ ಎದುರಾಗಿದೆ. ಹೀಗಿರುವಾಗ ರೈತರ ಸ್ಥಿತಿ ನೋಡಲಸಾಧ್ಯ. ಬೆಳೆದ ಬೆಳೆಗಳೆಲ್ಲ ನೀರಲ್ಲಿ ನೀರಾಗಿ ಹೋಗಿದೆ. ಅದರಲ್ಲೂ ಅಡಿಕೆ ಬೆಳೆಗಾರರ ಸ್ಥಿತಿ ಕೇಳಲೇಬೇಡಿ.

ಅಕಾಲಿಕ ಮಳೆ ಕರಾವಳಿ ಭಾಗದ ಕೃಷಿಕರ ನೆಮ್ಮದಿ ಕೆಡಿಸಿದೆ. ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಬಂಪರ್ ಬೆಲೆಯಿದ್ದರೂ, ಭಾರೀ ಮಳೆ ಸುರಿಯುತ್ತಿರುವುದು ಅಡಿಕೆ ಬೆಳೆಗಾರರಿಗೆ ನಿರಾಸೆ ಮೂಡಿಸಿದೆ.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಕೃಷಿಕರು ತಮ್ಮ ಜೀವನಕ್ಕಾಗಿ ನಂಬಿರುವುದು ಅಡಿಕೆ ಬೆಳೆಯನ್ನೇ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ಅಡಿಕೆಯ ಮೊದಲ ಕೊಯ್ಲು ಮುಗಿಸಿದ ಕೃಷಿಕರು, ಅಡಿಕೆಯನ್ನು ಒಣಹಾಕಲು ಅಂಗಳದಲ್ಲಿ ಅಡಿಕೆ ಹರಡಿಕೊಂಡಿರುತ್ತಾರೆ. ಆದರೆ ನಿರಂತರವಾಗಿ ಸುರಿದ ಭಾರೀ ಮಳೆಯು ಅಡಿಕೆ ಅಂಗಳದಲ್ಲೇ ಕೊಳೆಯುವಂತೆ ಮಾಡಿದೆ.

ಅಡಿಕೆ ಒಣಗಲು ಸಾಮಾನ್ಯವಾಗಿ 40 ದಿನಗಳು ಬೇಕು. ಆದರೆ ಈ ಬಾರಿ ವರುಣ ಅಡಿಕೆ ಬೆಳೆಗಾರರಿಗೆ ಕೃಪೆ ತೋರಿಲ್ಲ. ಹಾಗಾಗಿ ಕೃಷಿಕರ ಫಸಲು ಮಳೆಯಲ್ಲಿ ತೋಯ್ದು ಹೋಗಿದೆ. ಕೊಯ್ಲು ಆದ ಅಡಿಕೆ ಅಂಗಳದಲ್ಲೇ ಮಳೆಗೆ ಕೊಳೆತು ಹೋಗಿದೆ. ಅಡಿಕೆಗಳೆಲ್ಲಾ ಮಳೆಯಲ್ಲಿ ಕೊಳೆತು ಕಪ್ಪಾಗಿದ್ದು, ಕೃಷಿಕನಿಗೆ ಕೈಗೆ ಬಂದ ಫಸಲು ಬಾಯಿಗೆ ಬರದಂತಾಗಿದೆ.

ಹಾಗಾಗಿ ಮಾರುಕಟ್ಟೆಗಳಲ್ಲಿ ಕಪ್ಪಾದ ಅಡಿಕೆಗೆ ಧಾರಣೆಯೂ ಕಡಿಮೆಯಿದೆ. ಹೀಗಾಗಿ ಭಾರೀ ನಷ್ಟದ ಚಿಂತೆ ಕೃಷಿಕರಲ್ಲಿ ಆವರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಸಲು ಹೆಚ್ಚಾಗುವ ಖುಷಿ ಕೃಷಿಕರಲ್ಲಿತ್ತು. ಆದರೆ ನವೆಂಬರ್‌ನ ನಿರಂತರ ಮಳೆಯಿಂದಾಗಿ ಕೊಳೆ ರೋಗ ಉಂಟಾಗಿ ಇಳುವರಿ ಕಡಿಮೆಯಾಗುವ ಆತಂಕ ಒಂದೆಡೆಯಾಗಿದರೆ, ಇನ್ನೊಂದೆಡೆ ಮುಂದಿನ ವರ್ಷ ಫಸಲು ನೀಡುವ ಹಿಂಗಾರು ಮಳೆಗೆ ಕೊಳೆಯುತ್ತಿದೆ.

ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಅಡಿಕೆ ಬೆಳೆಗಾರರು ಸೋಲಾರ್ ಟರ್ಪಾಲಿನ ಮೊರೆ ಹೋಗಿದ್ದಾರೆ. ಆದರೆ ಒಂದು ಸೋಲಾರ್ ಟರ್ಪಾಲ್ ಅಡಿಕೆ ಒಣಗಿಸಲು ಸಾಲುತ್ತಿಲ್ಲ. ಹಿಂದಿನ ಕಾಲದಲ್ಲಿ ಮನೆಯ ಚಾವಣಿಯಾದರೂ ಒಣಗಿಸಲು ಸಹಾಯವಾಗುತ್ತಿತ್ತು, ಆದರೆ ಈಗ ಚಾವಣಿ ಇರುವ ಮನೆಗಳಲ್ಲಿದೆ. ಬೇರೆ ಯಾವುದೇ ಜಾಗವಿಲ್ಲದೆ ಕೃಷಿಕರು ಅಡಿಕೆ ಒಣಗಿಸಲು ಹರಸಾಹಸ ಪಡುತ್ತಿದ್ದು, ಹೆಚ್ಚು ಬಂಡವಾಳವನ್ನು ಉಪಯೋಗಿಸಬೇಕಾಗಿದೆ.

ಕರಾವಳಿಯಲ್ಲಿ ಬಿಟ್ಟು ಬಿಟ್ಟು ಮಳೆ ಸುರಿದ ಹಿನ್ನಲೆಯಲ್ಲಿ ಭತ್ತದ ಬೆಳೆಗಾರರಿಗೂ ನಷ್ಟವುಂಟಾಗಿದೆ. ಕಟಾವಿಗೆ ಬಂದ ಭತ್ತ ಭಾರೀ ಗಾಳಿ ಮಳೆಗೆ ನೆಲಕಚ್ಚಿದರೆ, ಇತ್ತ ಕಟಾವು ಮಾಡಿಟ್ಟ ಭತ್ತ ಮಳೆಗೆ ನೆನೆದು ಮೊಳಕೆ ಬಂದಿದೆ. ಹೀಗಾಗಿ ಸರ್ಕಾರ ಕರಾವಳಿಯ ಕೃಷಿಕರ ಕಡೆಗೂ ಗಮನ ಹರಿಸಬೇಕೆಂದು ಭತ್ತ ಬೆಳೆಗಾರರು ಮನವಿ ಮಾಡಿದ್ದಾರೆ.

Leave A Reply

Your email address will not be published.