ತಿರುಪತಿ ತಿಮ್ಮಪ್ಪನಿಗೆ ಜಲದಿಗ್ಬಂಧನ | ನದಿಯಂತಾಗಿವೆ ರಸ್ತೆಗಳು, ಕೊಚ್ಚಿಹೋದವು ಅದೆಷ್ಟೋ ವಾಹನಗಳು !!!| ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಮಳೆಯ ಆರ್ಭಟ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಊರೇ ನೀರಿನಲ್ಲಿ ಮುಳುಗಿ ಹೋಗೋ ಪರಿಸ್ಥಿತಿಗೆ ಬಂದು ನಿಂತಿದೆ. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಎಲ್ಲೆಲ್ಲೂ ಮಳೆಯದ್ದೇ ಹಾವಳಿ.ಅದರಲ್ಲೂ ತಿರುಪತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹದ ಸ್ಥಿತಿ ಉಂಟಾಗಿದ್ದು,ಜನರಿಗೆ ಆತಂಕ ತಂದೊಡ್ಡಿದೆ.

https://twitter.com/Itsmytirupati/status/1461331008154861571?s=20

ಬುಧವಾರ ರಾತ್ರಿಯಿಂದ ತಿರುಮಲ ಮತ್ತು ತಿರುಪತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ತಿರುಪತಿ ತಿಮ್ಮಪ್ಪನಿಗೆ ಸಂಕಷ್ಟದ ಸ್ಥಿತಿ ಬಂದೊದಗಿದೆ.ತಿರುಮಲ ಬೆಟ್ಟದ ಬುಡದಲ್ಲಿರುವ ಕಪಿಲೇಶ್ವರ ಸ್ವಾಮಿ ದೇಗುಲದ ಬಳಿ ಬೆಟ್ಟದ ಮೇಲಿನಿಂದ ಮಳೆ ನೀರು ಜಲಪಾತದ ರೀತಿಯಲ್ಲಿ ಧುಮ್ಮಿಕ್ಕುತ್ತಿರುವ ದೃಶ್ಯಗಳು ಮೈ ಜುಮ್ಮೆನಿಸುವಂತಿದೆ.ನಗರದ ಹೊರವಲಯದಲ್ಲಿ ಹರಿಯುವ ಸ್ವರ್ಣಮುಖಿ ನದಿಯಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅಕ್ಕಪಕ್ಕದ ಹಳ್ಳಿಗಳ ಜನವಸತಿ ಪ್ರದೇಶಗಳಿಗೆ ನುಗ್ಗಿದ್ದು,ಹಲವು ಹಳ್ಳಿಗಳಲ್ಲಿ ಸೊಂಟದ ಮಟ್ಟದವರೆಗೂ ನೀರು ತುಂಬಿದೆ. ಅಲ್ಲದೆ ಮನೆಗಳಿಗೆ ನೀರು ನುಗ್ಗಿದ್ದು,ಎಲ್ಲ ಸಾಮಾಗ್ರಿಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.

ತಿರುಪತಿ ಶ್ರೀ ವೆಂಕಟೇಶ್ವರ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಅನಿರ್ದಿಷ್ಟಾವಧಿಗೆ ಬಂದ್‌ ಮಾಡಲಾಗಿದ್ದು,ಪಾದಯಾತ್ರೆ ಮುಖಾಂತರ ದೇವಸ್ಥಾನಕ್ಕೆ ಹೋಗುವ ಮಾರ್ಗಗಳನ್ನು ಮುಚ್ಚಲಾಗಿದೆ. ಪ್ರವಾಹದಿಂದ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಗಳ ಮೇಲೆ ಗುಡ್ಡ ಕುಸಿದು ಬಿದ್ದಿದೆ. ರಸ್ತೆ ಮೇಲೆ ಬಿದ್ದಿರುವ ಕಲ್ಲು, ಬಂಡೆ ಹಾಗೂ ಮಣ್ಣು ತೆರವು ಕಾರ್ಯಾಚರಣೆಯೂ ನಡೆಯುತ್ತಿದೆ. ಆದರೆ ಭಾರಿ ಮಳೆ ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡುತ್ತಿದೆ.

ತಿರುಮಲ , ಚಿತ್ತೂರು ಸೇರಿದಂತೆ ತಿರುಪತಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.ಪ್ರವಾಹದಿಂದ ರಸ್ತೆಗಳೆಲ್ಲಾ ನದಿಗಳಾಂತಾಗಿದೆ. ಆಂಧ್ರಪ್ರದೇಶದ ಸಿಎಂ ಜಗನ್​ ಮೋಹನ್​ ರೆಡ್ಡಿ ತುರ್ತು ಸಭೆ ಕರೆದು ಪ್ರವಾಹ ಪರಿಸ್ಥಿತಿ ಎದುರಿಸುವ ಕುರಿತು ಚರ್ಚೆ ನಡೆಸಿದ್ದಾರೆ.ಪ್ರವಾಹ ಪೀಡಿತ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ, ಆಹಾರ ಸಾಮಾಗ್ರಿಗಳ ಪೂರೈಕೆ ಸೇರಿದಂತೆ ಪರಿಸ್ಥಿತಿ ನಿಭಾಯಿಸಲು ತಂಡಗಳನ್ನು ರಚಿಸಲಾಗಿದೆ.ಇನ್ನೂ ಎರಡು ದಿನಗಳ ಕಾಲ ಇದೇ ರೀತಿಯ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಕೆ ನೀಡಿದೆ. ಬುಧವಾರ, ಗುರುವಾರ ಸುರಿದ ಮಳೆಯಿಂದಾಗಿ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದ್ದು,ಇನ್ನೂ ಎರಡು ದಿನ ಮಳೆಯಾದರೆ ತಿರುಪತಿ ತಿಮ್ಮಪ್ಪನೇ ಕಾಪಾಡಬೇಕು ಅಂತಿದ್ದಾರೆ ಇಲ್ಲಿನ ಜನ.

Leave A Reply

Your email address will not be published.