ಎಲ್ಲಾ ಮಾದರಿಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಎಬಿ ಡಿ ವಿಲಿಯರ್ಸ್

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ, ಇಂಡಿಯನ್ ಪ್ರೀಮಿಯರ್ ಲೀಗ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ದೂರವಾಗುವುದಾಗಿ ಟ್ವಿಟರ್ ನಲ್ಲಿ ಘೋಷಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಈಗಾಗಲೇ ವಿದಾಯ ಘೋಷಿಸಿರುವ ಎಬಿ ಡಿವಿಲಿಯರ್ಸ್ ಅವರು ಐಪಿಎಲ್ ನಲ್ಲಿ ಆರ್ ಸಿಬಿ ತಂಡದಲ್ಲಿ ಆಡುತ್ತಿದ್ದರು.ಇದೀಗ ಐಪಿಎಲ್ ಸೇರಿದಂತೆ ಎಲ್ಲಾ ಲೀಗ್ ಗಳಿಗೆ ವಿದಾಯ ಘೋಷಿಸಿದ್ದಾರೆ.

“ಇದೊಂದು ಅದ್ಭುತ ಪ್ರಯಾಣವಾಗಿದೆ, ಆದರೆ ನಾನು ಎಲ್ಲಾ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇದುವರೆಗೆ ನಾನು ಶುದ್ಧವಾದ ಆನಂದ ಮತ್ತು ಕಡಿವಾಣವಿಲ್ಲದ ಉತ್ಸಾಹದಿಂದ ಆಟವನ್ನು ಆಡಿದ್ದೇನೆ. ಈಗ, 37 ನೇ ವಯಸ್ಸಿನಲ್ಲಿ, ಆ ಜ್ವಾಲೆಯು ಇನ್ನು ಮುಂದೆ ಪ್ರಕಾಶಮಾನವಾಗಿ ಉರಿಯುವುದಿಲ್ಲ. ಅದು ನಾನು ಒಪ್ಪಿಕೊಳ್ಳಲೇಬೇಕಾದ ವಾಸ್ತವ. ಇದು ಹಠಾತ್ತಾಗಿ ಕಂಡರೂ ಸಹ, ನಾನು ಇಂದು ಈ ಘೋಷಣೆ ಮಾಡುತ್ತಿದ್ದೇನೆ. ಕ್ರಿಕೆಟ್ ನನ್ನ ಮೇಲೆ ಅಸಾಧಾರಣ ಪ್ರೀತಿ ತೋರಿದೆ. ಟೈಟಾನ್ಸ್, ಅಥವಾ ಪ್ರೋಟೀಸ್, ಅಥವಾ ಆರ್ ಸಿಬಿ, ಅಥವಾ ಪ್ರಪಂಚದಾದ್ಯಂತ ಆಡುತ್ತಿರಲಿ, ಆಟವು ನನಗೆ ಊಹಿಸಲಾಗದ ಅನುಭವಗಳನ್ನು ಮತ್ತು ಅವಕಾಶಗಳನ್ನು ನೀಡಿದೆ, ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ಅದೇ ಹಾದಿಯಲ್ಲಿ ಸಾಗಿದ ಪ್ರತಿಯೊಬ್ಬ ತಂಡದ ಸಹ ಆಟಗಾರ, ಪ್ರತಿ ಎದುರಾಳಿ, ಪ್ರತಿ ತರಬೇತುದಾರ, ಪ್ರತಿಯೊಬ್ಬ ಫಿಸಿಯೋ ಮತ್ತು ಪ್ರತಿಯೊಬ್ಬ ಸಿಬ್ಬಂದಿ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾನು ದಕ್ಷಿಣ ಆಫ್ರಿಕಾದಲ್ಲಿ, ಭಾರತದಲ್ಲಿ, ನಾನು ಎಲ್ಲೇ ಆಡಿದರೂ ನನಗೆ ದೊರೆತ ಬೆಂಬಲದಿಂದ ನಾನು ವಿನಮ್ರನಾಗಿದ್ದೇನೆ ಎಂದು ” ಎಂದು ಬರೆದುಕೊಂಡಿರುವ ಎಬಿ ಡಿವಿಲಿಯರ್ಸ್ ಹಿಂದಿ ಭಾಷೆಯಲ್ಲೂ ಧನ್ಯವಾದ ಎಂದು ಬರೆದಿದ್ದಾರೆ.

Leave A Reply

Your email address will not be published.