ಮಂಗಳೂರು ಪ್ರೆಸ್ ಕ್ಲಬ್ : ರಾಷ್ಟ್ರೀಯ ಪತ್ರಿಕಾ ದಿನಾಚರಣೆ

ಮಂಗಳೂರು: ಪತ್ರಕರ್ತರಾಗಿ ಕಚೇರಿಯಲ್ಲಿ ಕೆಲಸ ಮಾಡುವ ಸಂದರ್ಭ ಸಮಯ, ಕೆಲಸದ ಒತ್ತಡವನ್ನು ನೋಡದೆ ಕಾರ್ಯ ನಿರ್ವಹಿಸಬೇಕಾಗಿದೆ. ಈ ಕಾರಣದಿಂದ 20 -20 ಕ್ರಿಕೆಟ್ ತಂಡದಂತೆ ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಈಗ ಆಲ್‌ರೌಂಡರ್‌ಗಳ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ, ವಿಜಯ ಕರ್ನಾಟಕ ಪತ್ರಿಕೆಯ ಸಹಾಯಕ ಸಂಪಾದಕ ಕೃಷ್ಣ ಭಟ್ ಅಳದಂಗಡಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ
‘ಮಾಧ್ಯಮಗಳ ಮುಂದಿರುವ ಸವಾಲು’ ಎಂಬ ವಿಷಯದಲ್ಲಿ ಅವರು ಮಾತನಾಡಿದರು.
ಸುದ್ದಿಮನೆಯಲ್ಲಿ ಎಲ್ಲವನ್ನು ನಿಭಾಯಿಸಬಲ್ಲ ಪತ್ರಕರ್ತರ ಅಗತ್ಯ ಇದೆ. ಪತ್ರಕರ್ತನಾದವನಿಗೆ ಬರವಣಿಗೆಯ ಜತೆಗೆ ವಾಕ್ಚಾರ್ತುಯ್ಯ ಅಗತ್ಯವಾಗಿದೆ. ನಾವು ಬರೆದಿದ್ದನ್ನು ತಿಳಿದುಕೊಂಡಿದ್ದನ್ನು ಇನ್ನೊಬ್ಬರ ಮುಂದೆ ಪ್ರಸ್ತುಪಡಿಸುವ ಕೌಶಲ್ಯವನ್ನು ಕೂಡಾ ಹೊಂದಿರುವುದು ಮುಖ್ಯ. ಟಿವಿ ಮಾಧ್ಯಮದಲ್ಲಿ ಈ ಕಲೆಗಾರಿಕೆ ಪ್ರಮುಖ ಪಾತ್ರ ವಹಿಸುವ ಜತೆಗೆ ಪತ್ರಿಕಾ ಮಾಧ್ಯಮದಲ್ಲೂ ಇದು ಇಂದಿನ ಅಗತ್ಯ ಎಂದು ಅವರು ಹೇಳಿದರು.

ಸಾಮಾಜಿಕ ಸ್ವಾಸ್ಥ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖ: ಡಾ.ಕಿಶೋರ್ ಆಳ್ವ

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಇಂಡಿಯನ್ ಅಸೋಸಿಯೇಶ್ ಆಫ್ ಪೆಥಾಲಜಿಸ್ಟ್‌ನ ಕರ್ನಾಟಕ ಸ್ಟೇಟ್ ಚಾಪ್ಟರ್‌ನ ನೂತನ ಅಧ್ಯಕ್ಷ ಡಾ.ಎನ್. ಕಿಶೋರ್ ಆಳ್ವ ಮಿತ್ತಳಿಕೆ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಎಷ್ಟು ಮಹತ್ತರವೋ, ಸಾಮಾಜಿಕ ಸ್ವಾಸ್ಥ ಕಾಪಾಡುವಲ್ಲಿ ಪತ್ರಕರ್ತರ ಪಾತ್ರವೂ ಹಿರಿದು ಎಂದು ಅಭಿಪ್ರಾಯಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಚೀನಾದಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಾಗ ಈ ಬಗ್ಗೆ ಅಲ್ಲಿನ ಮಾಧ್ಯಮ ಎಚ್ಚರಿಕೆ ವಹಿಸಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲವಾದ ಕಾರಣ ಅದು ಜಗತ್ತಿಗೆ ಪಸರಿಸುವಂತಾಯಿತು. ಆದರೆ ಭಾರತದಲ್ಲಿ ಮಾಧ್ಯಮವು ಸಕಾಲಿಕ ಎಚ್ಚರಿಕೆ, ಜಾಗೃತಿ ಮೂಡಿಸಿ ಜನರಲ್ಲಿ ರೋಗದ ಬಗ್ಗೆ ಮಾಹಿತಿಯನ್ನು ನೀಡಿದ ಕಾರಣ ಹೆಚ್ಚು ಅಪಾಯವಿಲ್ಲದೆ ಜನರಲ್ಲಿ ರೋಗ ಎದುರಿಸುವ ಕ್ಷಮತೆಯನ್ನು ಹೆಚ್ಚಿಸಿ ನಿಯಂತ್ರಿಸಲು ಸಾಧ್ಯವಾಯಿತು ಎಂದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್, ಪತ್ರಕರ್ತರಲ್ಲಿ ಸಾಮಾಜಿಕ ಬದ್ಧತೆ, ಕಳಕಳಿಯ ನಿಲುವು ಸ್ಪಷ್ಟವಾಗಿದ್ದಾಗ ಯಾವುದೇ ಒತ್ತಡಗಳಿಗೆ ಒಳಗಾಗದೆ ತಮ್ಮ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ವೇದಿಕೆಯಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ., ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಆರ್., ಮಾಧ್ಯಮ ಅಕಾಡಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಹಿರಿಯ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.