ಮಕ್ಕಳನ್ನು ಕೆಎಸ್ಆರ್ಟಿಸಿ ಬಸ್ಸಲ್ಲಿ ಕರೆದುಕೊಂಡು ಪ್ರಯಾಣಿಸುವ ಪೋಷಕರೇ ಗಮನಿಸಿ | ಎತ್ತರ ನೋಡದೆ ವಯಸ್ಸಿನ ಪುರಾವೆ ಪ್ರಮಾಣಪತ್ರ ಅಂಗೀಕರಿಸಬೇಕೆಂಬ ಹೊಸ ನಿಯಮ ಜಾರಿಗೆ ತಂದ ಕೆಎಸ್ಆರ್ಟಿಸಿ

ಮಕ್ಕಳನ್ನು ಜೊತೆಗೆ ಕರೆದುಕೊಂಡು ಬಸ್ ನಲ್ಲಿ ಪ್ರಯಾಣಿಸೋ ಪೋಷಕರಿಗೆ ಕೆಎಸ್‌ಆರ್‌ಟಿಸಿ ಮಹತ್ವದ ಮಾಹಿತಿಯನ್ನು ನೀಡಿದೆ.ಮಕ್ಕಳಿಗೆ ಅರ್ಧ ಟಿಕೆಟ್ ನೀಡುವ ಮುನ್ನ, ವಯಸ್ಸಿನ ಪುರಾವೆ ಪ್ರಮಾಣಪತ್ರ ಅಂಗೀಕರಿಸಬೇಕು ಎಂದು ತಿಳಿಸಿದೆ.

ಹೌದು ಮಕ್ಕಳ ದಿನಾಚರಣೆಯ ಪ್ರಯುಕ್ತ ಹುಬ್ಬಳ್ಳಿ ಕೆಎಸ್‌ಆರ್‌ಟಿಸಿ ನಿರ್ವಾಹಕರಿಗೆ ಹೊಸ ಸುತ್ತೋಲೆಯೊಂದನ್ನು ಹೊರಡಿಸಿದ್ದು ಮಕ್ಕಳಿಗೆ ಅರ್ಧ ಟಿಕೆಟ್ ನೀಡುವ ಮುನ್ನ ಅಥವಾ ಅವರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಮುನ್ನ ಬರೇ ಅವರ ಎತ್ತರ ಗಮನಿಸುವುದು ಮಾತ್ರವಲ್ಲದೆ ಮಾನ್ಯ ವಯಸ್ಸಿನ ಪುರಾವೆ ಪ್ರಮಾಣಪತ್ರ ಅಂಗೀಕರಿಸಬೇಕು ಎಂದು ತಿಳಿಸಿದೆ.

30ನೇ ಅಕ್ಟೋಬರ್ 2004ರ ಹಿಂದಿನ ಸುತ್ತೋಲೆಯ ಪ್ರಕಾರ ಮಕ್ಕಳು ಕನಿಷ್ಠ ಪಕ್ಷ 140 ಸೆಂ.ಮೀ ಉದ್ದ ಇದ್ದರೆ ಪೂರ್ಣ ಪ್ರಮಾಣದ ಟಿಕೆಟ್ ಹಾಗೂ 117 ಸೆಂ.ಮೀ ಉದ್ದವಿರುವ ಮಕ್ಕಳಿಗೆ ಅರ್ಧ ಟಿಕೆಟ್ ನೀಡಬೇಕಾಗಿ ಕಂಡಕ್ಟರ್‌ಗಳಿಗೆ ತಿಳಿಸಲಾಗಿತ್ತು. ಇನ್ನು 117 ಸೆಂ.ಮೀ ಇರುವ ಹುಡುಗ ಹಾಗೂ ಹುಡುಗಿ 6 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಅಂತೆಯೇ 140 ಸೆಂ.ಮೀ ಉದ್ದವಿರುವ ಮಕ್ಕಳು 12 ವರ್ಷಗಳನ್ನು ಪೂರೈಸಿರಬೇಕು ಎಂಬುದಾಗಿ ಸುತ್ತೋಲೆ ನಿರ್ವಾಹಕರಿಗೆ ಮಾಹಿತಿ ನೀಡಿತ್ತು.

ಇತ್ತೀಚೆಗೆ ಬಿಡುಗಡೆ ಮಾಡಿರುವ ಸುತ್ತೋಲೆಯ ಪ್ರಕಾರ, ಕೆಎಸ್‌ಆರ್‌ಟಿಸಿಯ ಮುಖ್ಯ ಟ್ರಾಫಿಕ್ ನಿರ್ವಾಹಕರು ನಿರ್ವಾಹಕರಿಗೆ ಸೂಚನೆ ನೀಡಿದ್ದು ಮಕ್ಕಳು ತಮ್ಮ ವಯಸ್ಸಿನ ಪುರಾವೆಯ ದಾಖಲೆಯನ್ನು ಹೊಂದಿದ್ದರೆ ಎತ್ತರವನ್ನು ಪರಿಶೀಲಿಸುವ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ. ವಯಸ್ಸನ್ನು ದೃಢೀಕರಿಸಿದ ನಂತರ ಇನ್ನಾವುದೇ ಮಾನದಂಡಗಳನ್ನು ಬಳಸುವ ಅಗತ್ಯವಿಲ್ಲವೆಂದು ಸುತ್ತೋಲೆಯಲ್ಲಿ ಕೂಡ ತಿಳಿಸಲಾಗಿದೆ.

ಇದೇ ಸುತ್ತೋಲೆಯನ್ನು ಕೆಕೆಆರ್‌ಟಿಸಿ (ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ) ಹೊರಡಿಸಿದ್ದು, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಇನ್ನೂ ಈ ಸುತ್ತೋಲೆಯನ್ನು ಪರಿಗಣಿಸಬೇಕಾಗಿದೆ. ಈ ಕುರಿತು ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿರುವ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮುಖ್ಯ ಟ್ರಾಫಿಕ್ ನಿರ್ವಾಹಕರಾದ ರಾಜೇಶ್ ಹುದ್ದಾರ್, 2-3 ದಿನಗಳೊಳಗಾಗಿ ಹೇಳಿಕೆಯನ್ನು ಪ್ರಕಟಿಸುವುದಾಗಿ ಮಾಹಿತಿ ನೀಡಿದ್ದಾರೆ.

ಸುತ್ತೋಲೆಯನ್ನು ಸ್ವಾಗತಿಸಿರುವ ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕರಾದ ರವಿ ಭಂಡಾರಿ, ಕೆಲವು ಮಕ್ಕಳು ಎತ್ತರವನ್ನು ಅಳೆಯುವ ಸಮಸ್ಯೆಯ ಕುರಿತು ದೂರು ನೀಡಿದ್ದರು ಎಂದು ತಿಳಿಸಿದ್ದಾರೆ. ಬಸ್‌ನೊಳಗೆ ಮಕ್ಕಳ ಎತ್ತರವನ್ನು ಅಳೆದು ನಂತರ ಅವರಿಗೆ ಅರ್ಧ ಟಿಕೆಟ್ ಇಲ್ಲವೇ ಪೂರ್ಣ ಟಿಕೆಟ್ ಅನ್ನು ನೀಡಲಾಗುತ್ತಿತ್ತು. ಇದು ಕೆಲವೊಂದು ಮಕ್ಕಳಿಗೆ ಕಸಿವಿಸಿಯನ್ನುಂಟು ಮಾಡುತ್ತಿತ್ತು ಎಂದು ರವಿ ಭಂಡಾರಿ ತಿಳಿಸಿದ್ದಾರೆ.

ಮಕ್ಕಳ ಎತ್ತರ ಅಳೆಯುವುದು ಅವೈಜ್ಞಾನಿಕವಾದ ವಿಧಾನವಾಗಿದೆ. ಮಕ್ಕಳ ವಯಸ್ಸನ್ನು ದಾಖಲೆಯ ಮೂಲಕ ದೃಢೀಕರಿಸುವುದು ವ್ಯವಸ್ಥಿತವಾದ ಕ್ರಮವಾಗಿದೆ ಹಾಗೂ ಈ ಕ್ರಮ ಅನುಮೋದಿಸಬಹುದಾದುದು. ವಯಸ್ಸಿನ ಪುರಾವೆ ಇಲ್ಲದೇ ಹೋದಲ್ಲಿ ಪ್ರಕರಣವನ್ನು ಆಧರಿಸಿ ಅನಿಶ್ಚತತೆಯ ಪ್ರಯೋಜನವನ್ನು ಒದಗಿಸಬೇಕಾಗುತ್ತದೆ ಎಂದು ಬೆಂಗಳೂರಿನ ನಗರ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಅಂಜಲಿ ರಾಮಣ್ಣ ತಿಳಿಸಿದ್ದಾರೆ.

Leave A Reply

Your email address will not be published.