ತಾನು ಸಾಕುತ್ತಿರುವ ಎಮ್ಮೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ | ಅಷ್ಟಕ್ಕೂ ಆತ ಎಮ್ಮೆಯ ಬಗ್ಗೆ ನೀಡಿರುವ ದೂರು ಏನು ಗೊತ್ತಾ ??

ಪ್ರಪಂಚ ಎಷ್ಟು ವಿಸ್ಮಯ ಅಂದ್ರೆ ಇಲ್ಲಿ ಎಲ್ಲಿ, ಯಾರಿಗೆ, ಹೇಗೆ, ಯಾವಾಗ ಏನು ನಡೆಯುತ್ತೆ ಅನ್ನೋ ಕಲ್ಪನೆಯೇ ಇಲ್ಲ. ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿಚಿತ್ರ ಘಟನೆಗಳು, ಹೊಸ ಹೊಸ ವಿದ್ಯಮಾನಗಳು ಇದ್ದೇ ಇರುತ್ತೆ. ಕೆಲವೊಂದು ಹಾಸ್ಯಮಯವಾಗಿದ್ರೆ ಕೆಲವೊಂದು ವಿಸ್ಮಯಕಾರಿ ಆಗಿರೋದಂತೂ ನಿಜ. ಆದ್ರೆ ಇಲ್ಲಿ ನಡೆದಿರೋ ವಿಷಯ ವಿಶೇಷವಾದ್ರೂ ನಿಜವಾಗಿ ನಡೆದಿರೋ ಘಟನೆ.

ಸಾಮಾನ್ಯವಾಗಿ ನಮಗೆ ತೊಂದರೆಯಾದರೆ ನಾವು ಮೊದಲು ಭೇಟಿಯಾಗೋದು ಪೊಲೀಸರನ್ನು. ಆದರೆ ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಯಾವ ಕಾರಣಕ್ಕೆ ಪೊಲೀಸ್ ಮೆಟ್ಟಿಲೇರಿದ್ದಾನೆ ಎಂಬುದನ್ನು ನೀವೇ ನೋಡಿ! ಅಂತೂ ಈತನ ಕಂಪ್ಲೇಂಟ್ ಎಲ್ಲರನ್ನು ಒಂದು ಕಡೆಯಿಂದ ನಗಿಸಿದರೆ ಇನ್ನೊಂದು ಕಡೆಯಿಂದ ಆಶ್ಚರ್ಯವಾಗಿಸೋದಂತೂ ಖಚಿತ.

ಹೌದು. ಮಧ್ಯಪ್ರದೇಶದ ವ್ಯಕ್ತಿಯೊಬ್ಬ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ಪೊಲೀಸ್ ಠಾಣೆಗೆ ತೆರಳಿ ತನ್ನ ದೂರು ನೀಡಿದ್ದಾನೆ. ಈತನ ದೂರು ನೋಡಿ ಪೊಲೀಸರು ದಂಗಾಗಿ ಹೋಗಿ, ಮಾತು ಬರದೇ ಮೂಕವಿಸ್ಮಿತರಾಗಿದ್ದಾರೆ. ನೀವೇ ಸಹಾಯ ಮಾಡಿ ಎಂದು ಉಪ ಪೊಲೀಸ್‌ ವರಿಷ್ಠಾಧಿಕಾರಿ ಅರವಿಂದ್‌ ಶಾ ಅವರ ತನಕ ತನ್ನ ದೂರು ಒಯ್ದು, ಇಲಾಖೆಗೆ ತಲೆನೋವು ತಂದಿಟ್ಟಿದ್ದಾನೆ.

ಅಷ್ಟಕ್ಕೂ ಈ ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ನಯಾಗಾಂವ್ ಹಳ್ಳಿಯಲ್ಲಿ ನಡೆದಿದೆ. 45 ವರ್ಷದ ರೈತ ಬಬೂಲ್ ಜತವ್ ಮನೆಯಲ್ಲಿ ಎಮ್ಮೆ ಕರು ಹಾಕಿ ಕೆಲ ದಿನ ಕಳೆದರೂ ಹಾಲು ನೀಡುತ್ತಿರಲಿಲ್ಲ. ಕರುವಿಗೆ ಕೊಂಚ ಹಾಲು ನೀಡಿ ಎಮ್ಮೆ ಸುಮ್ಮನಾಗುತ್ತಿತ್ತು. ಅದೆಷ್ಟೇ ಪ್ರಯತ್ನ ಪಟ್ಟರೂ ಎಮ್ಮೆ ಹಾಲು ಮಾತ್ರ ನೀಡುತ್ತಿಲ್ಲ ಎಂದಿದ್ದಾನೆ. ರೈತ ತನ್ನ ಎಲ್ಲಾ ಅನುಭವ ಧಾರೆ ಎರೆದರೂ ಎಮ್ಮೆ ಹಾಲು ನೀಡಲಿಲ್ಲ. ಕೋಪಗೊಂಡ ರೈತ ನೇರವಾಗಿ ಪೊಲೀಸ್​ ಠಾಣೆಗೆ ಬಂದು ಎಮ್ಮೆ ವಿರುದ್ಧ ದೂರು ನೀಡಿದ್ದಾರೆ.

ಗ್ರಾಮಸ್ಥರು ಎಮ್ಮೆಗೆ ವಾಮಾಚಾರ ಮಾಡಿದ್ದಾರೆ. ಮಾಟ ಮಂತ್ರ ಮಾಡಿದ ಕಾರಣ ಎಮ್ಮೆ ಹಾಲು ನೀಡುತ್ತಿಲ್ಲ ಎಂದಿದ್ದಾರೆ. ಇದರಿಂದ ರೈತ ಬಬೂಲ್ ಜತವ್ ವಾಮಾಚಾರ ತೆಗೆಯಲು ಹಲವರನ್ನು ಸಂಪರ್ಕಿಸಿದ್ದಾನೆ. ಊರಿನ ಮಾಟಗಾರರು, ಜ್ಯೋತಿಷಿಗಳು, ಪೂಜಾರಿಗಳನ್ನು ಭೇಟಿಯಾಗಿ ಸಲಹೆ ಕೇಳಿದ್ದಾನೆ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ದಿಕ್ಕು ತೋಚದೆ ನಯಾಂಗಾವ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.

ಮೊದಲು ರೈತ ತೆರಳಿ ಪೊಲೀಸ್ ಠಾಣೆಯಲ್ಲಿ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲ ಅಂತ ದೂರು ನೀಡಿದ್ದಾನೆ. ಒಂದು ದಿನವಾದರೂ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲದ ಕಾರಣ ಮತ್ತೆ ಮರುದಿನ ತನ್ನ ಎಮ್ಮೆಯೊಂದಿಗೆ ಪೊಲೀಸ್​ ಠಾಣೆಗೆ ತೆರಳಿ ಅಲ್ಲೇ ಕಟ್ಟಿ ಬಿಟ್ಟಿದ್ದಾನೆ. ಠಾಣೆ ಮುಂದೆ ಹಾಲು ಕರೆಯಲು ಪ್ರಯತ್ನಿಸಿ ತನ್ನ ಗೋಳು ತೋಡಿಕೊಂಡಿದ್ದಾನೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾನೆ. ಪೊಲೀಸರು ಪಶು ವೈದ್ಯರಿಗೆ ಮಾಹಿತಿ ನೀಡಿ ಎಮ್ಮೆಯ ಸಮಸ್ಯೆ ಪರಿಹರಿಸಲು ಸೂಚಿಸಿದ್ದಾರೆ.

ತಕ್ಷಣವೇ ಪಶು ವೈದ್ಯರು ಬಬೂಲ್ ರೈತನ ಮನೆಗೆ ಭೇಟಿ ನೀಡಿ,ಪರೀಕ್ಷೆ ನಡೆಸಿ ಕೆಲ ಸೂಚನೆ ಜೊತೆಗೆ ಔಷಧಿಗಳನ್ನು ನೀಡಿದ್ದಾರೆ. ಇದಾದ ಬಳಿಕ ಮರುದಿನದಿಂದಲೇ ಪೋಲಿಸರ ಭಯಕ್ಕೋ ಏನು ಎಮ್ಮೆ ತಕ್ಷಣ ಝರ-ಝರ ಬಕೆಟ್ ತುಂಬಾ ನೊರೆ-ನೊರೆ ಹಾಲು ಕೊಟ್ಟಿದ್ದೇ ಕೊಟ್ಟಿದ್ದು. ಇದರಿಂದ ಖುಷಿಗೊಂಡ ರೈತ ಪೊಲೀಸ್​ ಠಾಣೆಗೆ ತೆರಳಿ ಧನ್ಯವಾದ ತಿಳಿಸಿದ್ದಾರೆ.

Leave A Reply

Your email address will not be published.