ಕುಂ ಪಾಳೇಗಾರಿಕೆಯಲ್ಲಿ ಮತ್ತೊಂದು ವಿಕೆಟ್ ಢಂ !!

ಮೈಸೂರು: ಮೈಸೂರು ಭಾಗದಲ್ಲಿ ಜೆಡಿಎಸ್​ನಿಂದ ಮತ್ತೊಂದು ವಿಕೆಟ್ ಪತನಗೊಳ್ಳೋದು ಪಕ್ಕಾ ಆಗಿದೆ. ಇನ್ನು ಮೂರು ದಿನದಲ್ಲಿ ಜೆಡಿಎಸ್​ಗೆ ಅಧಿಕೃತವಾಗಿ ರಾಜೀನಾಮೆ ಕೊಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹೇಳಿದ್ದಾರೆ.

ಜೆಡಿಎಸ್‌ನಿಂದ ಗೆಲುವು ಸಾಧಿಸಿರುವ ವಿಧಾನ ಪರಿಷತ್ ಸದಸ್ಯರು ಮೂರು ದಿನದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು. ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಸಂದೇಶ್ ನಾಗರಾಜ್, “ಎಚ್. ಡಿ. ಕುಮಾರಸ್ವಾಮಿಗೆ ನನ್ನ ಅಗತ್ಯ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಮೂರು ದಿನದಲ್ಲಿ ಜೆಡಿಎಸ್‌ಗೆ ಅಧಿಕೃತವಾಗಿ ರಾಜೀನಾಮೆ ನೀಡುತ್ತೇನೆ” ಎಂದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದೇನೆ. ಪಕ್ಷ ಸೇರುವಾಗ ಪತ್ರಿಕಾಗೋಷ್ಠಿಯಲ್ಲಿ ನಾನು ಜೆಡಿಎಸ್ ಪಕ್ಷ ಬಿಡೋದು ಏಕೆ ಎಂಬುದನ್ನು ವಿವರಿಸುತ್ತೇನೆ ಎಂದು ಸಂದೇಶ್ ನಾಗರಾಜ್ ಸ್ಪಷ್ಟಪಡಿಸಿದರು.

“ಕಳೆದ ಮೂರು ವರ್ಷಗಳಿಂದ ಮಾನಸಿಕವಾಗಿ ನಾನು ಬಿಜೆಪಿಯಲ್ಲಿ ಇದ್ದೇನೆ. ಎಚ್. ಡಿ. ಕುಮಾರಸ್ವಾಮಿಗೆ ನನ್ನ ಅಗತ್ಯ ಇಲ್ಲ ಎಂಬುದು ಅವರ ಮಾತು, ನಡೆಯಲ್ಲಿ ಗೊತ್ತಾಗುತ್ತಿದೆ. ಅಗತ್ಯ ಇಲ್ಲದ ಕಡೆ ಯಾಕೆ ಇರಲಿ?” ಎಂದು ಸಂದೇಶ್ ನಾಗರಾಜ್ ಪ್ರಶ್ನೆ ಮಾಡಿದರು. ಮೂರು ವರ್ಷಗಳಿಂದ ನಾನು ಜೆಡಿಎಸ್ ನಾಯಕರ ಸಂಪರ್ಕದಲ್ಲಿ ಇಲ್ಲ. ವಿಧಾನ ಪರಿಷತ್‌ನಲ್ಲಿ ವಿಧೇಯಕಗಳು ಮಂಡನೆಯಾದಾಗ ಬಿಜೆಪಿ ಪರವಾಗಿ ಕೈ ಎತ್ತಿದ್ದೇನೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಸಂದೇಶ ನಾಗರಾಜ್ ಹೇಳಿದ್ದಾರೆ.

ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿರುವ ನಾಲ್ವರು ವಿಧಾನ ಪರಿಷತ್ ಸದಸ್ಯರು ನಿವೃತ್ತಿಯಾಗಲಿದ್ದಾರೆ. ಅವರ ಸ್ಥಾನಕ್ಕೆ ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಇವರಲ್ಲಿ ಎನ್. ಅಪ್ಪಾಜಿ ಗೌಡ (ಮಂಡ್ಯ) ಮತ್ತೊಮ್ಮೆ ಜೆಡಿಎಸ್‌ನಿಂದ ಕಣಕ್ಕಿಳಿಯಬಹುದು.

ಈ ಬೆಳವಣಿಗೆ ಹೊಸದೇನಲ್ಲ. ಕಳೆದ ವಾರ ಪತ್ರಿಕಾಗೋಷ್ಠಿ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ಪಕ್ಷ ಬಿಟ್ಟು ಹೋಗುವುದು ಹೊಸದೇನಲ್ಲ. ಇದರಿಂದ ಜೆಡಿಎಸ್‌ಗೆ ಯಾವುದೇ ಶಾಕ್ ಆಗುವುದಿಲ್ಲ ಎಂದು ಹೇಳಿದ್ದರು. ಸಿದ್ದರಾಮಯ್ಯ, ರಮೇಶ್ ಕುಮಾರ್ ಯಾವ ಪಕ್ಷದಲ್ಲಿದ್ದರು? ಜೆಡಿಎಸ್ ಪಕ್ಷ ನಿಂತಿರುವುದು ನಾಯಕರಿಂದ ಅಲ್ಲ. ನಮ್ಮ ಲಕ್ಷಾಂತರ ಕಾರ್ಯಕರ್ತರಿಂದ. ಒಂದು ಕಡೆ ಸಂಘಟನೆ ಮತ್ತೊಂದು ಕಡೆ ಜೆಡಿಎಸ್ ಮನೆ ಖಾಲಿಯಾಗುತ್ತಿದೆ ಎಂದು ಸುದ್ದಿಗಳು ಬರುತ್ತಿವೆ. ನಮಗೆ ಇದರಲ್ಲಿ ಯಾವುದೇ ಶಾಕ್ ಇಲ್ಲ ಎಂದು ತಿಳಿಸಿದ್ದರು.

ಅಕ್ಟೋಬರ್ 10ರಂದು ಬೆಂಗಳೂರಿನ ಬಿಜೆಪಿ ಕಚೇರಿಗೆ ಸಂದೇಶ್ ನಾಗರಾಜ್ ಆಗಮಿಸಿದ್ದರು. ಅಂದು ಮಾಧ್ಯಮಗಳ ಜೊತೆ ಮಾತನಾಡಿ, “ಮೂರನೇ ಬಾರಿಗೆ ಮೈಸೂರು-ಚಾಮರಾಜನಗರ ಸ್ಥಳೀಯ ಸಂಸ್ಥೆಗಳಿಂದ ಗೆದ್ದು ಬರುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

“ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವುದು ಖಚಿತವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನಸ್ಸು ಮಾಡಬೇಕು. ಯಡಿಯೂರಪ್ಪ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ” ಎಂದು ಹೇಳಿದ್ದರು.

25 ಸ್ಥಾನಗಳು ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 14ರಂದು ಫಲಿತಾಂಶ ಘೋಷಣೆಯಾಗಲಿದೆ. ಈಗಾಗಲೇ 2 ಬಾರಿ ಎಂಎಲ್‌ಸಿಯಾಗಿರುವ ಸಂದೇಶ ನಾಗರಾಜ್ 3ನೇ ಬಾರಿ ಟಿಕೆಟ್ ಪಡೆಯಲಿದ್ದಾರೆಯೇ ಎಂಬುದನ್ನು ಕಾಲ ನಿರ್ವಹಿಸಲಿದೆ.

ಈ ಕೆಳಗಿನ ಪ್ರದೇಶಗಳಲ್ಲಿ ಚುನಾವಣೆ ನಡೆಯಲಿದೆ.
ಬೀದರ್ 1, ಕಲಬುರಗಿ 1, ವಿಜಯಪುರ 2, ಬೆಳಗಾವಿ 2, ಉತ್ತರ ಕನ್ನಡ 1, ಧಾರವಾಡ 2, ರಾಯಚೂರು 1, ಬಳ್ಳಾರಿ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಚಿಕ್ಕಮಗಳೂರು 1, ಹಾಸನ 1, ತುಮಕೂರು 1, ಮಂಡ್ಯ 1, ಬೆಂಗಳೂರು 1, ಬೆಂಗಳೂರು ಗ್ರಾಮಾಂತರ 1, ಕೋಲಾರ 1, ಕೊಡಗು 1, ಮೈಸೂರು 2 ಸ್ಥಾನಗಳಿಗೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ.

Leave A Reply

Your email address will not be published.