ಜನ್ಮ ಕೊಡುವಾಕೆ ಕಣ್ಣು ಮುಚ್ಚಿದರೂ ಗರ್ಭದಲ್ಲಿ ಜೀವಂತವಾಗಿದ್ದ ಕಂದನನ್ನು ಉಳಿಸಿದ ವೈದ್ಯರು

ಗದಗ:ತಾಯಿ ಮತ್ತು ಮಗುವಿನ ಸಂಬಂಧ ಜಗತ್ತಿನ ಎಲ್ಲಾ ಸಂಬಂಧಕ್ಕೂ ಮೀರಿದ್ದು. ಆದರೆ ಋಣಾನುಬಂಧ ಯಾವ ರೀತಿ ಮಾಡಿದೆ ಎಂದರೆ ತನ್ನ ಪುಟ್ಟ ಕಂದನನ್ನು ತನ್ನ ಗರ್ಭದಲ್ಲೇ ಜೀವಂತ ಉಳಿಸಿ ಆಕೆ ಕಣ್ಣು ಮುಚ್ಚಿದ್ದಾಳೆ.ಹೌದು ಹೆರಿಗೆ ನೋವಿನ ವೇಳೆ ತಾಯಿ ಮೃತಪಟ್ಟಿದ್ದು, ಆದರೆ, ಗರ್ಭದಲ್ಲಿ ಮಗು ಜೀವಂತವಾಗಿರುವ ಹಿನ್ನೆಲೆಯಲ್ಲಿ ವೈದ್ಯರು ಮೃತದೇಹದ ಗರ್ಭದಲ್ಲಿದ್ದ ಮಗುವನ್ನು ಹೊರ ತೆಗೆದು ರಕ್ಷಿಸಿದ್ದಾರೆ.

ರೋಣ ತಾಲೂಕಿನ ಮುಶಿಗೇರಿಯ ತುಂಬು ಗರ್ಭಿಣಿ ಅನ್ನಪೂರ್ಣ ಅಬ್ಬಿಗೇರಿ ಅವರಿಗೆ ನ.4ರಂದು ಆರೋಗ್ಯದಲ್ಲಿ ಏರುಪೇರಾಗಿತ್ತು. ಆಕೆ ತುಂಬು ಗರ್ಭಿಣಿಯಾಗಿದ್ದು, ಮೂರ್ಛೆ ರೋಗ ಕಾಣಿಸಿಕೊಂಡು ಆಕೆ ತೀವ್ರ ಅಸ್ವಸ್ಥಳಾಗಿದ್ದಳು. ಕುಟುಂಬಸ್ಥರು ಇರುವ ಆಸ್ಪತ್ರೆಗಳಿಗೆಲ್ಲ ಅಲೆದಾಡಿ ಕೊನೆಗೆ ಗದಗದ ಡಿಎಂಎಂ ಹೆರಿಗೆ ಆಸ್ಪತ್ರೆಗೆ ಬರುವಷ್ಟರಲ್ಲಿ ಅನ್ನಪೂರ್ಣ ಅವರ ಉಸಿರು ನಿಂತು ಹೋಗಿತ್ತು.

ಮೃತ ಮಹಿಳೆ ಗರ್ಭಿಣಿಯಾಗಿರುವುದರಿಂದ ವಿಶೇಷ ಕಾಳಜಿ ವಹಿಸಿದ ಸರ್ಕಾರಿ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಸ್ಕ್ಯಾನಿಂಗ್ ನಡೆಸಿದಾಗ ಮಗುವಿನ ಹೃದಯ ಬಡಿತ ಇರುವುದು ಗೊತ್ತಾಗಿದೆ. ಹೀಗಾಗಿ ಮಗುವನ್ನು ರಕ್ಷಿಸಲು ವೈದ್ಯರು ಮುಂದಾಗಿದ್ದಾರೆ. ತಕ್ಷಣವೇ ಕುಟುಂಬಸ್ಥರ ಜೊತೆಗೆ ಮಾತನಾಡಿ ಕೆಲವೇ ನಿಮಿಷಗಳಲ್ಲಿ ಆಪರೇಷನ್ ನಡೆಸಿ ಮಗುವನ್ನು ಹೊರ ತೆಗೆದಿದ್ದಾರೆ.

ತಾಯಿ ಮೃತಪಟ್ಟರೂ, ವೈದ್ಯರ ಕಾಳಜಿಯಿಂದಾಗಿ ಮಗುವಿನ ಪ್ರಾಣ ಉಳಿದಿದೆ. ಸದ್ಯ ಮಗು ಆರೋಗ್ಯವಂತವಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ. ಇನ್ನೂ, ಮೃತ ಮಹಿಳೆಯ ಪತಿ ವೀರೇಶ್ ತನ್ನ ಪತ್ನಿಯನ್ನು ಕಳೆದುಕೊಂಡಿದ್ದಕ್ಕೆ ಕಣ್ಣೀರು ಹಾಕಿದ್ದು, ಮದುವೆಯಾಗಿ ಒಂದು ವರ್ಷ ಆಗಿತ್ತು. ನಾವಿಬ್ಬರು ತುಂಬಾ ಪ್ರೀತಿ ವಿಶ್ವಾಸದಿಂದ ಇದ್ದೆವು. ಆದರೆ ನನ್ನ ಹೆಂಡ್ತಿ ನನ್ನನ್ನು ಒಂಟಿ ಮಾಡಿ ಹೋಗಿದ್ದಾಳೆ. ಈ ಮಗುವನ್ನು ಚೆನ್ನಾಗಿ ಸಾಕಿ ನನ್ನ ಹೆಂಡತಿಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.

Leave A Reply

Your email address will not be published.